ಅಡ್ಡ ಮತದಾನ : ಇಬ್ಬರ ವಿರುದ್ದ ಕಠಿಣ ಕ್ರಮ : ಬಿಜೆಪಿ ಸ್ಪಷ್ಟನೆ

ಬೆಂಗಳೂರು:

     ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಯಶವಂತಪುರ ಬಿಜೆಪಿ ಶಾಸಕ ಎಸ್. ಟಿ. ಸೋಮಶೇಖರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಬಿಜೆಪಿ ಹೇಳಿದೆ.

    ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, “ಎಸ್.ಟಿ.ಸೋಮಶೇಖರ್ ನನಗೆ ಕರೆ ಮಾಡಿ ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ, ರಾಜ್ಯಸಭೆ ಚುನಾವಣೆಯ ಮತದಾನದ ವೇಳೆ ಅಡ್ಡ ಮತದಾನ ಮಾಡಿದ್ದಾರೆ. ಶಿವರಾಮ ಹೆಬ್ಬಾರ್ ಗೈರಾಗಿದ್ದಾರೆ.

    ಕಳೆದ ನಾಲ್ಕು ತಿಂಗಳಿನಿಂದ ಈ ಇಬ್ಬರು ಶಾಸಕರು ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ತಿರುಗಾಡುತ್ತಿದ್ದರು. ವಿಧಾನಸಭಾ ಚುನಾವಣೆ ನಡೆದು 9 ತಿಂಗಳಾಗಿಲ್ಲ. ಆಗಲೇ ಪಕ್ಷಾಂತರ ಮಾಡುವುದನ್ನು ಜನ ಕ್ಷಮಿಸುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

     ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಮಂಗಳವಾರ ಬೆಳಗ್ಗೆ ಕೂಡ ತಮ್ಮ ಸಂಪರ್ಕದಲ್ಲಿದ್ದು, ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದಿದ್ದರು. ಈಗ ಅವರ ನಡವಳಿಕೆ ಪ್ರಶ್ನಾರ್ಹವಾಗಿದೆ. ಎಸ್. ಟಿ. ಸೋಮಶೇಖರ್ ಬಿಜೆಪಿಯಲ್ಲಿ ಸಚಿವರಾಗಿದ್ದರು. ಪ್ರಭಾವಿ ಜಿಲ್ಲೆಯಲ್ಲಿ ಮೈಸೂರಿನ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದರು. ಈಗ ಅಡ್ಡ ಮತದಾನ ಮಾಡಿ ಭಿನ್ನ ನಡೆ ಅನುಸರಿಸಿದ್ದಾರೆ” ಎಂದು ​ ಆಕ್ರೋಶ ವ್ಯಕ್ತಪಡಿಸಿದರು.

    “ಅಡ್ಡ ಮತದಾನ, ಪಕ್ಷ ದ್ರೋಹದ ವಿರುದ್ಧ ಆಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ವಕೀಲ ವಿವೇಕ ರೆಡ್ಡಿ ಅವರಿಗೆ ಸೂಚನೆ ನೀಡಲಾಗಿದೆ. ಕಾನೂನು ತಜ್ಞರ ಜೊತೆ ಕೂಡ ಸಮಾಲೋಚನೆ ನಡೆಯುತ್ತಿದೆ. ಸಾಧ್ಯವಿರುವ ಎಲ್ಲಾ ಕಾನೂನು ಕ್ರಮ ಕೈಗೊಳ್ಳುತ್ತೇವೆ” ಎಂದಪ ಹೇಳಿದರು.

    ಇಬ್ಬರೂ ಶಾಸಕರಿಗೂ ವಿಪ್ ಜಾರಿ ಮಾಡಲಾಗಿತ್ತು. ಅವರ ಕಚೇರಿ ಹಾಗೂ ಮನೆಗಳಿಗೆ ವಿಪ್ ಕಳುಹಿಸಿರುವುದರ ಜೊತೆಗೆ ಆಪ್ತ ಸಹಾಯಕರಿಗೆ ಎಸ್‍ಎಂಎಸ್ ಮೂಲಕ ಮಾಹಿತಿ ನೀಡಲಾಗಿದೆ. ಪಕ್ಷದ ಚಿಹ್ನೆಯಡಿ ಗೆದ್ದು ದ್ರೋಹ ಮಾಡಿರುವುದನ್ನು ಮತದಾರರು ಕ್ಷಮಿಸಲ್ಲ” ಎಂದು ತಿಳಿಸಿದರು.

   “ಎನ್‍ಡಿಎ ಅಭ್ಯರ್ಥಿಯಾಗಿರುವ ಜೆಡಿಎಸ್​ನ ಕುಪೇಂದ್ರ ರೆಡ್ಡಿ ಸೋಲು ಯಾವುದೇ ಮುಜುಗರ ಉಂಟುಮಾಡಿಲ್ಲ. ಪ್ರಯೋಗಾತ್ಮಕವಾಗಿ ಅವರನ್ನು ಕಣಕ್ಕಿಳಿಸಲಾಗಿತ್ತು. ಹೀಗಾಗಿ ಬಿಜೆಪಿ ಅಥವಾ ಜೆಡಿಎಸ್‍ನ ಸೋಲು ಎಂದು ಪರಿಗಣಿಸುವ ಅಗತ್ಯವಿಲ್ಲ” ಎಂದು ಇದೇ ವೇಳೆ ಹೇಳಿದರು.

Recent Articles

spot_img

Related Stories

Share via
Copy link
Powered by Social Snap