ಕಾಂಗ್ರೆಸ್‌ ಔತಣಕೂಟದಲ್ಲಿ ಪ್ರತ್ಯಕ್ಷವಾದ ಬಿಜೆಪಿ ಶಾಸಕರು…!

ಬೆಳಗಾವಿ:

    ಕಾಂಗ್ರೆಸ್‌ ಶಾಸಕರಿಗೆ ಬುಧವಾರ ರಾತ್ರಿ ಏರ್ಪಡಿಸಿದ ಔತಣಕೂಟದಲ್ಲಿ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್‌. ಟಿ ಸೋಮಶೇಖರ್‌ ಮತ್ತು ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್‌ ಅವರು ಭಾಗವಹಿಸುವ ಮೂಲಕ ಕೈ ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ.

    ಈಗಾಗಲೇ ಬಿಜೆಪಿ ಸಭೆಗಳಿಂದ ದೂರ ಉಳಿದಿರುವ ಅವರು, ಮತ್ತೆ ಕಾಂಗ್ರೆಸ್‌ ಸೇರುವ ಕುರಿತು ಬಹುತೇಕ ಖಚಿತವಾಗಿದೆ.ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೇಳುವ ನೆಪದಲ್ಲಿ ಹಲವು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಈ ಇಬ್ಬರೂ ಶಾಸಕರು, ಬುಧವಾರ ರಾತ್ರಿ ಪಕ್ಷದ ಶಾಸಕರ ಜೊತೆ ಬೋಜನಕೂಟದಲ್ಲಿ ಭಾಗವಹಿಸಿದರು ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

    ಅದಕ್ಕೂ ಮೊದಲು ಕಾಂಗ್ರೆಸ್‌ ಶಾಸಕರ ಸಭೆ ನಡೆಯಿತು. ವಿಧಾನಸಭೆ ತಡವಾಗಿ ಮುಕ್ತಾಯವಾದ ಕಾರಣ ಎಲ್ಲ ಶಾಸಕರು ಬಂದು ಸೇರುವುದು ವಿಳಂಬವಾಯಿತು. ಹೀಗಾಗಿ ವಿಳಂಬವಾಗಿ ಸಭೆ ಆರಂಭವಾಯಿತು. ಸಭೆಯಲ್ಲಿ ಸೋಮಶೇಖರ್‌ ಮತ್ತು ಹೆಬ್ಬಾರ್‌ ಭಾಗವಹಿಸಲಿಲ್ಲ. ಆದರೆ, ಭೋಜನದಲ್ಲಿ ಎಲ್ಲರ ಜೊತೆ ಭಾಗವಹಿಸಿದರು ಎಂದೂ ಮೂಲಗಳು ಹೇಳಿವೆ.

    ಮುಂಬರುವ ಲೋಕಸಭೆ ಚುನಾವಣೆಗೆ ಎಲ್ಲ ರೀತಿಯಲ್ಲೂ ಸಿದ್ಧರಾಗುವಂತೆ ಸಭೆಯಲ್ಲಿ ಶಾಸಕರಿಗೆ ಸಲಹೆ ನೀಡಲಾಯಿತು. ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಘೋಷಿಸಿದ ‘ಗ್ಯಾರಂಟಿ’ ಯೋಜನೆಗಳು ಯಶಸ್ವಿಯಾಗಿವೆ. ಈ ಯೋಜನೆಗಳ ಬಗ್ಗೆ ಜನವರಿಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಮತ್ತು ವಿಧಾನ ಸಭಾ ಕ್ಷೇತ್ರವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ‘ಗ್ಯಾರಂಟಿ’ ಯೋಜನೆಗಳ ಪ್ರಯೋಜನದ ಪಡೆದ ಫಲಾನುಭವಿಗಳನ್ನು ಒಂದೆಡೆ ಸೇರಿಸಬೇಕು. ಆ ಮೂಲಕ, ಲೋಕಸಭಾ ಚುನಾವಣೆಗೆ ಸಜ್ಜಾಗಬೇಕು ಎಂದು ಸಭೆಯಲ್ಲಿ ಶಾಸಕರಿಗೆ ಸಲಹೆ ನೀಡಲಾಗಿದೆ.

   ಕಳೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲ ಶಾಸಕರಿಗೆ ₹ 25 ಕೋಟಿ ವಿಶೇಷ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದರು. ಅದಕ್ಕೆ ಎಲ್ಲ ಶಾಸಕರು ಮುಖ್ಯಮಂತ್ರಿ ಅವರನ್ನು ಅಭಿನಂದಿಸಿದರು. ಮುಂದಿನ ಬಜೆಟ್‌ ಬಳಿಕ ಎಲ್ಲ ಶಾಸಕರ ಬೇಡಿಕೆಗಳ ಬಗ್ಗೆ ವಿಶೇಷ ಗಮನಹರಿಸಲಾಗುವುದು. ಅಲ್ಲದೆ ಇನ್ನಷ್ಟು ವಿಶೇಷ ಅನುದಾನ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು ಎಂದೂ ಮೂಲಗಳು ಹೇಳಿವೆ.

   ಈ ಹಿಂದಿನ ಸಭೆಯಲ್ಲಿ ಮಾತನಾಡಲು ಅವಕಾಶ ಸಿಗದ ಕೆಲವು ಶಾಸಕರು ತಮ್ಮ ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ಹೇಳಿಕೊಂಡರು. ಕ್ಷೇತ್ರದಲ್ಲಿ ಮನೆಗಳನ್ನು ಹಂಚಿಕೆ ಮಾಡಿಲ್ಲ ಎಂದು ಶಾಸಕರು ಅಹವಾಲು ತೋಡಿಕೊಂಡರು. ಆ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದರು ಎಂದೂ ಮೂಲಗಳು ಹೇಳಿವೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap