ಬೆಂಗಳೂರು:
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಿಂದ ವಿಧಾನಸೌಧಕ್ಕೆ ಸೈಕಲ್ ಜಾಥಾ ಹೊರಟಿದ್ದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ನಡೆದಿದೆ.
ಪ್ರತಿಭಟನೆ ಸ್ವಲ್ಪ ದೂರ ಸಾಗುತ್ತಿದ್ದಂತೆ ತಡೆದು ನಿಲ್ಲಿಸಿದ ಪೊಲೀಸರು ಸೈಕಲ್ ಜಾಥಾದಲ್ಲಿ ಭಾಗವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ ಸಹಿತ ಪಕ್ಷದ ಹಲವು ಮುಖಂಡರನ್ನು ವಶಕ್ಕೆ ಪಡೆದು ಕರೆದೊಯ್ದರು. ಇದಕ್ಕೂ ಮೊದಲು ಸೈಕಲ್ ಜಾಥಾದ ಆರಂಭದ ಸಂದರ್ಭದಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ, ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯ ಭಂಡತನದ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಜನರಿಗೆ ಹೊರೆ ಆಗುವ ಈ ನಿರ್ಧಾರವನ್ನು ತಕ್ಷಣ ಕೈಬಿಡಬೇಕು. ಅಲ್ಲಿನವರೆಗೆ ಬಿಜೆಪಿ ಹೋರಾಟ ಮುಂದುವರಿಯಲಿದೆ ಎಂದು ಅವರು ಎಚ್ಚರಿಸಿದರು.
ಅಧಿಕಾರಕ್ಕೆ ಬಂದ ಆರಂಭದಿಂದಲೂ ರಾಜ್ಯದ ಖಜಾನೆಯನ್ನು ಲೂಟಿ ಮಾಡುವಲ್ಲಿಯೇ ಆಸಕ್ತಿ ತೋರಿದ ಕಾಂಗ್ರೆಸ್ ಸರ್ಕಾರವೀಗ ಖಜಾನೆ ಬರಿದಾಗುತ್ತಿದ್ದಂತೆ ನಾಡಿನ ಜನತೆಯ ಜೇಬಿನ ಮೇಲೆ ಕಣ್ಣಿಟ್ಟಿದೆ. ನಾನಾ ರೀತಿಯ ತೆರಿಗೆ, ಶುಲ್ಕಗಳ ದರ ಏರಿಸಿ ಜನರ ಜೀವನವನ್ನು ದುಸ್ತರವಾಗಿಸಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ ಬಸ್ ಪ್ರಯಾಣದ ದರ, ನೀರಿನ ದರವನ್ನೂ ಹೆಚ್ಚಿಸಲು ಮುಂದಾಗಿದೆ.
ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡುವ ಮೂಲಕ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಿದೆ. ಈ ಬೆಲೆ ಏರಿಕೆಯನ್ನು ವಾಪಸ್ ಪಡೆಯದಿದ್ದರೆ ರಾಜ್ಯಾದ್ಯಂತ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಚ್ಚರ ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಹೇಳಿದ್ದಾರೆ.
ಬಿಜೆಪಿಯವರ ಸೈಕಲ್ ಜಾಥಾ ತಡೆಗೆ ಭಾರೀ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಬಿಜೆಪಿ ಕಚೇರಿ ಎದುರು 3 ಪೊಲೀಸ್ ವ್ಯಾನ್, 1 ಬಿಎಂಟಿಸಿ ಬಸ್, 4 ಪೊಲೀಸ್ ಜೀಪ್‌ಗಳನ್ನು ತಂದು ನಿಲ್ಲಿಸಲಾಗಿತ್ತು. ಬಿಜೆಪಿ ಕಚೇರಿ ಎದುರಿನ ರಸ್ತೆಯಲ್ಲಿ ಪೊಲೀಸ್ ನಾಕಾಬಂದಿ ಹಾಕಲಾಗಿತ್ತು. ಕಚೇರಿ ಎದುರಿನ ರಸ್ತೆಗೆ ಎರಡೂ ಕಡೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು.
