ಇಂದಿರಾ ಗಾಂಧಿ ವಿರುದ್ಧದ ಹೇಳಿಕೆ : ಸಾಕ್ಷಿ ಸಮೇತ ತಿರುಗೇಟು ಕೊಟ್ಟ ಬಿಜೆಪಿ….!

ನವದೆಹಲಿ

    ಭಾರತೀಯ ಸಂವಿಧಾನದಲ್ಲಿರುವ  ‘‘ಜಾತ್ಯತೀತ’’ ಮತ್ತು ‘‘ಸಮಾಜವಾದ’’ ವಿಚಾರಗಳ ಬಗ್ಗೆ ಆರ್​ಎಸ್​ಎಸ್ ನಾಯಕ ದತ್ತಾತ್ರೇಯ ಹೊಸ ಬಾಳೆ ನೀಡಿರುವ ಹೇಳಿಕೆಯ ನಂತರ ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ತೀವ್ರಗೊಳಿಸಿದೆ‌. ಆದರೆ ಇದೇ ಸಂದರ್ಭದಲ್ಲಿ, ತುರ್ತು ಪರಿಸ್ಥಿತಿಯ ಕಾಲಘಟ್ಟದ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಕೂಡ ಕಾಂಗ್ರೆಸ್​ಗೆ ತೀಕ್ಷ್ಣವಾದ ತಿರುಗೇಟು ನೀಡಿದೆ. ತುರ್ತು ಪರಿಸ್ಥಿತಿಯ ಕಾಲದಲ್ಲಿ ಸಂವಿಧಾನದ ಮೂಲ ಆಶಯವನ್ನೇ ಬದಲಾಯಿಸಲು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಮುಂದಾಗಿದ್ದರು ಎಂಬ ಅಂದಿನ ಪತ್ರಿಕಾ ತುಣುಕನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಬಿಜೆಪಿ ಟೀಕಾ ಪ್ರಹಾರ ನಡೆಸಿದೆ.

    ಸಂವಿಧಾನದ ಮೂಲ ಅಶಯವನ್ನು ಬದಲಾಯಿಸಲು ಇಂದಿರಾಗಾಂಧಿ ಮುಂದಾಗಿದ್ದರು ಎಂಬ ‘‘ಟೈಮ್ಸ್ ಆಫ್ ಇಂಡಿಯಾ’’ ಪತ್ರಿಕೆಯ ವರದಿಯನ್ನು ಉಲ್ಲೇಖಿಸಿ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಟೀಕಾ ಪ್ರಹಾರ ಮಾಡಿದ್ದಾರೆ.

   ಸಂವಿಧಾನದ ಆತ್ಮವನ್ನೇ ಮರಳಿ ಬರೆಯಲು ಇಂದಿರಾಗಾಂಧಿ ಉದ್ದೇಶಿಸಿದ್ದರು. ಇದು ಯಾರೋ ಹೇಳಿದ ಮಾತಲ್ಲ. 1975 ಡಿಸೆಂಬರ್ 30 ರಂದು ಪ್ರಕಟವಾದ ‘‘ಟೈಮ್ಸ್ ಆಫ್ ಇಂಡಿಯಾ’’ ಪತ್ರಿಕೆಯ ವರದಿಯ ತುಣುಕು. ಭಾರತೀಯ ಜನರ ಪ್ರಜಾಪ್ರಭುತ್ವದ ಕಾಳಜಿಗೆ ಧನ್ಯವಾದಗಳು. ಕಾಂಗ್ರೆಸ್ ಆಡಳಿತದಲ್ಲಿ ಸಂಪೂರ್ಣ ಪರಮಾಧಿಕಾರದತ್ತ ಹೊರಳುವುದರಲ್ಲಿದ್ದ ದೇಶ ಸ್ವಲ್ಪದರಲ್ಲೇ ಬಚಾವಾಯಿತು ಎಂದು ಭಂಡಾರಿ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ‘ಸಂವಿಧಾನವು ದೇಶದ ಜನರಿಗೆ ಸೇವೆ ಒದಗಿಸಬಲ್ಲುದೇ’ ಎಂದು ಇಂದಿರಾಗಾಂಧಿ ಪ್ರಶ್ನಿಸಿದ್ದಕ್ಕೆ ಸಂಬಂಧಿಸಿದ ‘‘ಟೈಮ್ ಆಫ್’’ ಇಂಡಿಯಾ ಪತ್ರಿಕೆಯ ವರದಿಯನ್ನು ಕೂಡ ಅವರು ಎಕ್ಸ್ ಸಂದೇಶದಲ್ಲಿ ಲಗತ್ತಿಸಿದ್ದಾರೆ.

   ಸಂವಿಧಾನದಲ್ಲಿ ಸಮಾಜವಾದ ಮತ್ತು ಜಾತ್ಯತೀತ ಪದಗಳನ್ನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೇರಿಸಲಾಗಿತ್ತು. ಆ ವಿಚಾರದ ಬಗ್ಗೆ ಚರ್ಚೆ ಆಗಬೇಕಿದೆ ಎಂದು ಆರೆಸ್ಸೆಸ್ ನಾಯಕ ದತ್ತಾತ್ರೇಯ ಹೊಸಬಾಳೆ ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ನಾಯಕರಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ಆರೆಸ್ಸೆಸ್ ಮತ್ತು ಬಿಜೆಪಿ ಸಂವಿಧಾನದ ಮೂಲ ಆಶಯಗಳನ್ನು ಬದಲಾಯಿಸಲು ಸಂಚು ಮಾಡುತ್ತಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ಹೇಳಿತ್ತು. 

   ಆದರೆ ಮತ್ತೊಂದೆಡೆ, ಸಂವಿಧಾನದ ಮೂಲ ಆಶಯವನ್ನು ಬದಲಾಯಿಸಿದ್ದು, ಮತ್ತು ಮತ್ತಷ್ಟು ಬದಲಾಯಿಸು ಮುಂದಾಗಿದ್ದೇ ಕಾಂಗ್ರೆಸ್. ಅಂಬೇಡ್ಕರ್ ರೂಪಿಸಿದ್ದ ಸಂವಿಧಾನದ ಮೂಲ ವಿಚಾರಗಳನ್ನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಾಂಗ್ರೆಸ್ ತಿದ್ದುಪಡಿ ಮಾಡಿತ್ತು ಎಂದು ಬಿಜೆಪಿ ತಿರುಗೇಟು ನೀಡಿದೆ.

Recent Articles

spot_img

Related Stories

Share via
Copy link