ಹಿಂದುಳಿದ ಅಭ್ಯರ್ಥಿ ಕಣಕ್ಕಿಳಿಸಿ ಟಿಕೆಟ್ ಗೊಂದಲ ಕೊನೆಗಾಣಿಸಲು ಪ್ಲ್ಯಾನ್
ತುಮಕೂರು
ತುಮಕೂರು ನಗರ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಸಂಬಂಧಿಸಿದಂತೆ ಹಾಲಿ-ಮಾಜಿ ಶಾಸಕರ ನಡುವೆ ಟಿಕೆಟ್ ಫೈಟ್ ತಾರಕಕ್ಕೇರಿದ್ದು, ಒಬ್ಬರಿಗೆ ಕೊಟ್ಟರೆ, ಮತ್ತೊಬ್ಬರಿಗೆ ಅಸಮಾಧಾನ, ಬಂಡಾಯವೇಳಬಹುದೆAಬ ಕಾರಣಕ್ಕೆ ಹೊಸ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಚಿಂತನೆಯನ್ನು ಬಿಜೆಪಿ ವರಿಷ್ಠರು ಮಾಡಿದ್ದಾರೆನ್ನುವ ಸಂಗತಿ ಬಹಿರಂಗಗೊಂಡಿದೆ.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಮಾಜಿ ಸಚಿವ ವಿ.ಸೋಮಣ್ಣ ಅವರ ಪುತ್ರ ಡಾ.ಅರುಣ್ ಸೋಮಣ್ಣ ನೇಮಕ ಬೆನ್ನಿಗೆ ಹೊಸ ಅಭ್ಯರ್ಥಿ ತಲಾಶ್ ಸಂಗತಿ ಹೆಚ್ಚು ಚರ್ಚೆಗೀಡಾಗುತ್ತಿದೆ. ಟಿಕೆಟ್ ಗೊಂದಲವಿರುವ ತುಮಕೂರು ನಗರ ಇಲ್ಲವೇ ಗುಬ್ಬಿ ಕ್ಷೇತ್ರದಿಂದ ಸೋಮಣ್ಣ ಪುತ್ರ ಕಣಕ್ಕಿಳಿಯುವರು ಎಂಬ ಚರ್ಚೆ ಒಂದೆಡೆಯಾದರೆ, ನಾನೂ ನಗರ ಟಿಕೆಟ್ ಆಕಾಂಕ್ಷಿ ಎಂದು ಘೋಷಿಸಿಕೊಂಡಿದ್ದ ಬಿಜೆಪಿಯ ಹಿರಿಯ ಮುಖಂಡ ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಅವರನ್ನು ತುಮಕೂರು ನಗರ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ವರಿಷ್ಠರು ಗಂಭೀರವಾಗಿ ಚಿಂತನೆ ಮಾಡಿದ್ದಾರೆಂಬ ಸಂಗತಿ ತುಮಕೂರಿನ ರಾಜಕೀಯಕ್ಕೆ ಹೊಸಟ್ವಿಸ್ಟ್ ನೀಡಿದೆ.
ಡಾ.ಹುಲಿನಾಯ್ಕರ್ ಆಯ್ಕೆಗೇಕೆ ಒಲವು:
ಪ್ರಸ್ತುತ ತುಮಕೂರು ನಗರ ಕ್ಷೇತ್ರದಿಂದ ಹಾಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹಾಗೂ ಮಾಜಿ ಸಚಿವ ಎಸ್.ಶಿವಣ್ಣ ಅವರು ಟಿಕೆಟ್‌ಗಾಗಿ ಬಹಿರಂಗವಾಗಿಯೇ ನೇರ ಪೈಪೋಟಿ ನಡೆಸುತ್ತಿದ್ದಾರೆ. ಇವರಲ್ಲಿ ಯಾರೊಬ್ಬರಿಗೆ ಟಿಕೆಟ್ ಕೈ ತಪ್ಪಿದ್ದರೂ ಅವರ ಬಂಡಾಯ ಇಲ್ಲವೇ ಬೇರೆ ಪಕ್ಷದಿಂದ ಸ್ಪರ್ಧಿಸಿ ಕಮಲದ ಗೆಲುವಿಗೆ ತೊಡಕಾಗುವ ಸಂಭವವೇ ಹೆಚ್ಚು ಎನ್ನುವ ಮಾಹಿತಿ ಹೈಕಮಾಂಡ್ ಅಂಗಳ ತಲುಪಿದೆ.
ತಕ್ಷಣವೇ ಕಾರ್ಯಪ್ರವೃತ್ತರಾದ ರಾಜ್ಯ ಕಮಲ ನಾಯಕರು, ಸಂಘಪರಿವಾರದ ಮುಖಂಡರು ಕಳೆದ ಮೂರು ದಶಕಗಳಿಂದ(ಮಧ್ಯ 5 ವರ್ಷ ಹೊರತುಪಡಿಸಿ) ಬಿಜೆಪಿ ಹಿಡಿತದಲ್ಲಿರುವ ತುಮಕೂರು ನಗರ ಕ್ಷೇತ್ರವನ್ನು ಇಬ್ಬರ ಕಿತ್ತಾಟಕ್ಕೆ ಬಲಿ ಕೊಡುವುದು ಬೇಡ. ಹೊಸ ಅಭ್ಯರ್ಥಿಯನ್ನು ಅದರಲ್ಲೂ ಹಿಂದುಳಿದ ವರ್ಗಕ್ಕೆ ಸೇರಿದ ಸರ್ವಜನರನ್ನು ವಿಶ್ವಾಸದಿಂದ ಕೊಂಡೊಯ್ಯುವ ಡಾ.ಎಂ.ಆರ್ ಹುಲಿನಾಯ್ಕರ್ ಅವರನ್ನು ಕ್ಷೇತ್ರದ ಅಭ್ಯರ್ಥಿಯಾಗಿಸಿದರೆ ಪಕ್ಷ ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ಜೊತೆಗೆ ಜಿಲ್ಲೆಯಲ್ಲಿ ನಿರ್ಣಾಯಕವಾಗಿರುವ ಹಿಂದುಳಿದ ವರ್ಗಕ್ಕೆ ಸೇರಿದ ಕುರುಬ ಸಮುದಾಯದ ಮತಗಳು ತುಮಕೂರು ನಗರ ಮಾತ್ರವಲ್ಲದೆ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲೂ ಕಮಲಪಾಳಯಕ್ಕೆ ಧಕ್ಕುತ್ತವೆ ಎಂಬ ಚಿಂತನೆ ಮಾಡಿ ಕಾರ್ಯಾನುಷ್ಟಾನಕ್ಕೆ ಮುಂದಾಗಿದ್ದಾರೆ ಎಂಬ ಚರ್ಚೆಗಳು ಪಕ್ಷದ ಆಂತರಿಕ ವಲಯದಲ್ಲಿ ಸಾಗಿದೆ.
ಹಿಂದೆ ತುಮಕೂರು ವಿಧಾನಸಭೆ ಕ್ಷೇತ್ರದಿಂದ ಹಿಂದುಳಿದ ಸಮುದಾಯಕ್ಕೆ ಸೇರಿದ ಲಕ್ಷ್ಮಿನರಸಿಂಹಯ್ಯ ಅವರು 2 ಬಾರಿ ಆಯ್ಕೆಯಾಗಿ ಸಚಿವರು ಆಗಿ ಕಾರ್ಯನಿರ್ವಹಿಸಿದ್ದು, 1996ರಲ್ಲಿ ಲೋಕಸಭೆಗೂ ಹಿಂದುಳಿದ ಕುರುಬ ಸಮುದಾಯದ ಸಿ.ಎನ್.ಭಾಸ್ಕರಪ್ಪ ಅವರು ಆಯ್ಕೆಯಾಗಿದ್ದರು. ಇದೇ ಆಧಾರದಲ್ಲಿ ಇತ್ತೀಚೆಗೆ ತುಮಕೂರು ನಗರದ ಅರ್ಬನ್ ರೆಸಾರ್ಟ್ನಲ್ಲಿ ಕೇಂದ್ರ ಸಚಿವ ಮನ್ಸೂಖ್ ಮಾಂಡವೀಯ, ಶೋಭಾ ಕರಂದ್ಲಾಜೇ ಅವರ ನೇತೃತ್ವದಲ್ಲಿ ನಡೆದ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಸಹ ಹಿಂದುಳಿದ ವರ್ಗಗಳಿಗೆ ವಿಧಾನಸಭೆ ಚುನಾವಣೆಯಲ್ಲಿ ಪ್ರಾತಿನಿಧ್ಯ ಸಿಗಬೇಕೆಂಬ ಪ್ರಬಲ ಚರ್ಚೆ ನಡೆದಿದ್ದು, ಅವಕಾಶ ವಿರುವೆಡೆ ಟಿಕೆಟ್ ನೀಡಲು ಕೇಂದ್ರ ನಾಯಕರು ಸಹ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಪ್ರಸ್ತುತ ಹಿಂದುಳಿದ ವರ್ಗಕ್ಕೆ ಸೇರಿದ ಬೆಟ್ಟಸ್ವಾಮಿ ಅವರು ಟಿಕೆಟ್ ಬಯಸಿರುವ ಗುಬ್ಬಿ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿ ಆಕಾಂಕ್ಷಿಯಾಗಿ ಡಾ.ಅರುಣ್ ಸೋಮಣ್ಣ ಹೆಸರು ಮುನ್ನೆಲೆಗೆ ಬಂದಿದ್ದು, ಒಂದು ವೇಳೆ ಗುಬ್ಬಿಯಿಂದ ಹಿಂದುಳಿದ ವರ್ಗದ ಅಭ್ಯರ್ಥಿಗೆ ಟಿಕೆಟ್ ಸಿಗದಿದ್ದರೆ ಅದಕ್ಕೆ ಪರ್ಯಾಯವಾಗಿ ತುಮಕೂರು ನಗರದಲ್ಲಿ ಕೊಡಬೇಕು.
ಹಾಗೆ ಕೊಡಬೇಕಾದರೆ ಜನತೆಗೆ ಚಿರಪರಿಚಿತರು, ಧಾರ್ಮಿಕ, ಸಾಮಾಜಿಕ ಸೇವಾ ಕ್ಷೇತ್ರದಲ್ಲೂ ಗುರುತಿಸಿಕೊಂಡು ಚುನಾವಣೆಯನ್ನು ಎದುರಿಸಲು ಸಮರ್ಥರಿರಬೇಕು. ಅಂತಹ ಸಾಮಾರ್ಥ್ಯ ಡಾ.ಹುಲಿನಾಯ್ಕರ್ ಅವರಲ್ಲಿದೆ ಎಂದು ಮನಗಂಡಿರುವ ಕಮಲ ನಾಯಕರು ಅವರ ಬಗ್ಗೆ ಹೆಚ್ಚು ಒಲವು ತೋರಿ ಸ್ಪರ್ಧೆಗೆ ಅಣಿಯಾಗಿ ಎಂದು ಸೂಚಿಸಿದ್ದಾರೆಂಬ ಮಾತುಗಳು ಕೇಳಿಬರುತ್ತಿದೆ.
ಹಿಂದೆ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ವಿಧಾನಪರಿಷತ್ ಸದಸ್ಯರಾಗಿ ರಾಜಕೀಯ ಆಡಳಿತದ ಅನುಭವ ಹೊಂದಿರುವ ಡಾ.ಹುಲಿನಾಯ್ಕರ್ ಅವರಿಗೆ, ಪಕ್ಷದ ಸಂಘಟನೆಯ ಪ್ರಮುಖರೊಬ್ಬರೇ ಕರೆ ಮಾಡಿ ನಗರ ಟಿಕೆಟ್ ಗೊಂದಲ ಪರಿಹಾರವಾಗಬೇಕಾದರೆ ಹೊಸ ಅಭ್ಯರ್ಥಿಯೇ ಪರಿಹಾರ, ನೀವು ಅಭ್ಯರ್ಥಿಯಾಗಲು ತಯಾರಾಗಿ ಎಂದು ಸೂಚಿಸಿದ್ದಾರೆನ್ನಲಾಗಿದ್ದು, ಈ ಸೂಚನೆಯ ಬಳಿಕವೇ ಡಾ.ಹುಲಿನಾಯ್ಕರ್ ಅವರು ತಾವೂ ಅಭ್ಯರ್ಥಿ ಆಕಾಂಕ್ಷಿಯೆAದು ಘೋಷಿಸಿ ಟಿಕೆಟ್‌ಗಾಗಿ ಓಡಾಡುತ್ತಿರುವುದು ಚುನಾವಣಾ ಅಖಾಡದಲ್ಲಿ ಹೊಸ ಬದಲಾವಣೆಯ ಗಾಳಿ ಬೀಸುವ ಮುನ್ಸೂಚನೆ ನೀಡಿದೆ.
ಡಾ. ಹುಲಿನಾಯ್ಕರ್ ಪರಿಚಯ:
ಮೂಲತಃ ವೈದ್ಯರಾದ ಡಾ.ಎಂ.ಆರ್.ಹುಲಿನಾಯ್ಕರ್ ಅವರು ಶ್ರೀದೇವಿ ಆಸ್ಪತ್ರೆ ವೈದ್ಯಕೀಯ ಕಾಲೇಜಿನ ಸಂಸ್ಥಾಪಕರಾಗಿ ವೈದ್ಯಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹಿಂದುಳಿದ ವರ್ಗಕ್ಕೆ ಸೇರಿದರೂ ಸರ್ವಜನರ ವಿಶ್ವಾಸಿಯಾಗಿ ಹೆಸರುಗಳಿಸಿರುವವರು.
ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ, 6 ವರ್ಷಗಳ ಕಾಲ ವಿಧಾನಪರಿಷತ್ ಸದಸ್ಯರಾಗಿಯೂ ಅನುಭವ ಹೊಂದಿದವರು. ಇವರು ಮಗ, ಸೊಸೆ, ಅಳಿಯ ವೈದ್ಯರಾಗಿ, ಶಿಕ್ಷಣ ಸಂಸ್ಥೆ ಮುನ್ನೆಡೆಸುತ್ತಿದ್ದು ಮಗಳು ಅಂಬಿಕಾ ಹುಲಿನಾಯ್ಕರ್ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ