ಬೆಂಗಳೂರು:
ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಬರುವುದು ಖಚಿತವಾಗಿದ್ದು, ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಹೇಳಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ನಾವು ಸರ್ಕಾರ ರಚಿಸುತ್ತೇವೆ. ರಾಜ್ಯದಲ್ಲಿ ನಾಲ್ಕು ತಂಡಗಳಾಗಿ ವಿಜಯ ಸಂಕಲ್ಪ ಯಾತ್ರೆ ಮಾಡಿದ್ದೇವೆ. ವಿಜಯ ಸಂಕಲ್ಪ ಯಾತ್ರೆಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಎಲ್ಲಾ ಸಂಸದರು, ರಾಜ್ಯಸಭಾ ಸದಸ್ಯರು ಚುನಾವಣೆ ಮುಗಿಯುವವರೆಗೂ ಅವರವರ ಜಿಲ್ಲೆಗಳಲ್ಲಿ ಇದ್ದು ಕೆಲಸ ಮಾಡಬೇಕಾಗುತ್ತದೆ. ಬೆಂಗಳೂರಿನಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಎಲ್ಲಾ ಸಂಸದರ ಸಭೆ ಕರೆಯಲಾಗುತ್ತದೆ. ಸಿಎಂ ಮೀಸಲಾತಿ ಹೆಚ್ಚಳ ಮಾಡಿರುವುದು ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸುವ ಕೆಲಸವಾಗಿದೆ.