ಉಡುಪಿ
ಉಡುಪಿ ಜಿಲ್ಲೆಯಲ್ಲಿ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ್ದ ಕೇಸ್ಗೆ ಸಂಬಂಧಿಸಿ ಕಾರ್ಕಳ ಠಾಣೆ ಪೊಲೀಸರು ಮೂರನೇ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಅಭಯ್ ಬಿಜೆಪಿ ಕಾರ್ಯಕರ್ತ ಎನ್ನುವ ಮಾಹಿತಿ ಸಿಕ್ಕಿದ್ದು ಉಡುಪಿ ಅತ್ಯಾಚಾರ ಕೇಸನ್ನು ಲವ್ ಜಿಹಾದ್ ಎಂದು ಆರೋಪಿಸಿದ್ದ ಬಿಜೆಪಿ, ಹಿಂದೂ ಸಂಘಟನೆಗಳಿಗೆ ಅಭಯ್ ಬಂಧನ ಮುಖ ಭಂಗ ತಂದಿದೆ. ಅಲ್ಲದೆ ಅಭಯ್ ಅತ್ಯಾಚಾರಿ ಅಲ್ತಾಫ್ಗೆ ಡ್ರಗ್ಸ್ ತಂದು ಕೊಟ್ಟಿದ್ದ ಎಂದು ತಿಳಿದುಬಂದಿದೆ.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಡ್ರಗ್ಸ್ ಬೆರೆಸಿದ ಮದ್ಯ ಕುಡಿಸಿ ಯುವತಿ ಮೇಲೆ ಅತ್ಯಾಚಾರ ಎಸಗಲಾಗಿದ್ದ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಇದೀಗ 3ನೇ ಆರೋಪಿ ಅಭಯ್ನನ್ನು ಪೊಲೀಸರು ಬಂಧಿಸಿದ್ದು ಹೊಸ ಟ್ವಿಸ್ಟ್ ಸಿಕ್ಕಿದೆ. ಬಂಧಿತ ಆರೋಪಿ ಅಭಯ್ ಫೇಸ್ಬುಕ್ನಲ್ಲಿ MLA ಸುನೀಲ್ಕುಮಾರ್ ಫೋಟೋ ಹಾಕಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಬಿಜೆಪಿ, ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದಾನೆ.
ಇತ್ತೀಚೆಗೆ ಈ ಪ್ರಕರಣಕ್ಕೆ ಬಿಜೆಪಿ, ಹಿಂದೂ ಸಂಘಟನೆಗಳು ಲವ್ ಜಿಹಾದ್ ಹಣೆಪಟ್ಟಿ ಕಟ್ಟಿದ್ದರು. ಆದರೆ ಇದೀಗ ತಮ್ಮದೇ ಕಾರ್ಯಕರ್ತ ಈ ಪ್ರಕರಣದಲ್ಲಿ ಭಾಗಿಯಾಗಿರೋದು ಮುಖಭಂಗವಾಗಿದೆ. ಆರೋಪಿ ಅಭಯ್, ಪ್ರಮುಖ ಆರೋಪಿ ಅಲ್ತಾಫ್ ಜೊತೆ ಆತ್ಮೀಯವಾಗಿದ್ದ. ಅತ್ಯಾಚಾರ ನಡೆದ ದಿನ ಅಲ್ತಾಫ್ಗೆ ಡ್ರಗ್ಸ್ ಒದಗಿಸಿದ್ದ. ಸದ್ಯ ಈಗ ಅಭಯ್ ಬಂಧನ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇನ್ನು ಕಳೆದ ತಿಂಗಳು ಬಜರಂಗದಳ ಡ್ರಗ್ಸ್ ವಿರೋಧಿ ಅಭಿಯಾನ ನಡೆಸಿತ್ತು. ಈ ಡ್ರಗ್ಸ್ ವಿರೋಧಿ ಅಭಿಯಾನದಲ್ಲಿ ಅಭಯ್ ಕೂಡ ಭಾಗಿಯಾಗಿದ್ದ. ಡ್ರಗ್ಸ್ ಮಾರಾಟದ ವಿರುದ್ಧ ಸಿಡಿದೆದ್ದಿದ್ದ. ಕಾರ್ಕಳ DySPಗೆ ಮನವಿ ನೀಡುವ ಸಮಯದಲ್ಲಿಯೂ ಜೊತೆಗಿದ್ದ. ಜಾಲತಾಣದಲ್ಲಿ ಅಭಯ್ ಫೋಟೋ ವೈರಲ್ ಆಗುತ್ತಿದೆ. ಪ್ರಮುಖ ಆರೋಪಿ ಅಲ್ತಾಫ್ಗೆ ಡ್ರಗ್ಸ್ ಪೂರೈಸಿದ್ದ ಅಭಯ್ನನ್ನು ಕಾರ್ಕಳ ಠಾಣೆ ಪೊಲೀಸರು ಬಂಧಿಸಿದ್ದಾರೆ.