ಶೂದ್ರ ಬಿಜೆಪಿಗರು ಮನುವಾದಿ ಆರೆಸ್ಸೆಸ್ ಖೇಡ್ಡಾದಲ್ಲಿ ಬೀಳುತ್ತಿದ್ದಾರೆ : ಸಿದ್ದರಾಮಯ್ಯ

 ಶೂದ್ರ, ದಲಿತ ಹಾಗೂ ಮಹಿಳೆಯರನ್ನು ಶಾಶ್ವತವಾಗಿ ಮನುವಾದಿಗಳ ಗುಲಾಮರನ್ನಾಗಿಸಲು ಹೊರಟಿದ್ದಾರೆ

    ಬಿಜೆಪಿಯು ಸಿಟಿರವಿ, ಅಶ್ವಥ್ಥನಾರಾಯಣ ಮುಂತಾದ ಶೂದ್ರರನ್ನು ಬಳಸಿಕೊಂಡು ಮನುವಾದದಂತಹ ಅಮಾನುಷ ಸಿದ್ಧಾಂತವನ್ನು ಹೇರಲು ಹೊರಟಿದ್ದಾರೆ. ಅಧಿಕಾರಕ್ಕಾಗಿ ಹಪಾಹಪಿಸುವ ಈ ಶೂದ್ರ ನಾಯಕರು ಎಂಥ ಜೀತ ಬೇಕಾದರೂ ಮಾಡಲು ತಯಾರಿದ್ದಾರೆ.

     ಇವರ ಬಾಯಲ್ಲಿ ಬೆಂಕಿಯನ್ನು, ಮೆದುಳಲ್ಲಿ ವಿಷವನ್ನೂ ತುಂಬಿ ಜೀವಂತ ಬಾಂಬು ಮಾಡಿ ತಿರುಗಾಡಲು ವೇದಿಕೆ ಕಲ್ಪಿಸುತ್ತಾರೆ. ಡಿಸೆಂಬರ್ 30 ರಂದು ಮಂಡ್ಯದಲ್ಲಿ ಇವರೆಲ್ಲ ಸೇರಿಕೊಂಡು ಸುಳ್ಳುಗಳ ವಿಷ ಕಕ್ಕಿದ್ದರು. ಟಿಪ್ಪುವನ್ನು ಹತ್ಯೆ ಮಾಡಿದವರು ಇಬ್ಬರು ಒಕ್ಕಲಿಗೆ ನಾಯಕರು ಎಂದು ಹೇಳಿ ಇಡೀ ಸಮುದಾಯವನ್ನು ದುರುಳೀಕರಿಸಲು ಪ್ರಯತ್ನಿಸಿದ್ದರು. ಬಿಜೆಪಿಯವರಿಗೆ ನಿಜವಾಗಿಯೂ ತಲೆ ಕೆಟ್ಟಿದೆ ಎಂದು ತಿಳಿದು ನಕ್ಕು ಸುಮ್ಮನಾಗಿದ್ದರು. ಆದರೆ ಭ್ರಷ್ಟಾಚಾರ, ನಿರುದ್ಯೋಗ, ಬೆಲೆ ಏರಿಕೆ, ದ್ವೇಷ ರಾಜಕಾರಣ ಮುಂತಾದವುಗಳಿಂದ ಬಸವಳಿದು ಹೋಗಿರುವ ರಾಜ್ಯದ ಜನರನ್ನು ದಿಕ್ಕು ತಪ್ಪಿಸಲು ಈಗ ವಿಷವನ್ನು ಉಗುಳಲು ಪ್ರಾರಂಭಿಸಿದ್ದಾರೆ.

     ಮಂಡ್ಯದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ಸಿದ್ದರಾಮಯ್ಯನವರನ್ನು ಕೊಲ್ಲಬೇಕೆಂದು ತಮ್ಮ ಕಾರ್ಯಕರ್ತರಿಗೆ ಹೇಳಿದ್ದಾರೆ. ತಾವೊಬ್ಬರು ಸಚಿವರು. ಸಂವಿಧಾನದ ಆಧಾರದ ಮೇಲೆ ಆಡಳಿತ ನಡೆಸುತ್ತಿರುವವರು ಎಂಬುದನ್ನೆ ಮರೆತು, ಕೊಲೆಗೆ ಪ್ರೇರೇಪಿಸುವ ಭೂಗತ ಜಗತ್ತಿನ ದುರುಳನಂತೆ ಮಾತನಾಡಿದ್ದಾರೆ. ಸೈದ್ಧಾಂತಿಕ ವಿರೋಧಗಳಿದ್ದರೆ, ವಿಚಾರ ಬೇಧಗಳಿದ್ದರೆ ಅದನ್ನು ಸಾಂವಿಧಾನಿಕ ನೆಲೆಗಟ್ಟಿನಲ್ಲಿ ವಿರೋಧಿಸುವ ಅವಕಾಶವನ್ನು ಭಾರತದ ಸಂವಿಧಾನ ಕೊಟ್ಟಿದೆ.

       ಆದರೆ ಸಂವಿಧಾನವನ್ನು ಧಿಕ್ಕರಿಸುವ ಬಿಜೆಪಿಯು ಇಡೀ ದೇಶದ ಮಾನವೀಯ ಪರಂಪರೆಗೆ ಖಳನಾಯಕನಾಗಿದೆ.ಈ ಅಶ್ವತ್ಥನಾರಾಯಣ್ ರಾಜಕೀಯದಲ್ಲಿ ಒಂದು ಕ್ಷಣವೂ ಇರಲು ಅರ್ಹರಲ್ಲ. ಪರಪ್ಪನ ಅಗ್ರಹಾರವೇ ಇವರಿಗೆ ಸೂಕ್ತ ಸ್ಥಳ. ಹಾಗೆಯೇ ಲಕ್ವಾ ಹೊಡೆದ ಪಾರಿವಾಳದಂತೆ ತಲೆ ಮತ್ತು ಕೈಗಳನ್ನು ಅಲುಗಾಡಿಸುವ ನಳಿನ್ ಕುಮಾರ್ ಕಟೀಲ್, ಮೆದುಳಿನ ಬದಲು ವಿಷ ಮತ್ತು ಕೆಂಡದುAಡೆಗಳನ್ನು ತುಂಬಿಕೊAಡಿರುವ ಸಿಟಿ ರವಿ, ಅಮಿತ್ ಶಾ ಮುಂತಾದವರು ಈಗ ಬಿಜೆಪಿಯಲ್ಲಿದ್ದಾರೆ. ಇಂಥವರು ರಾಜ್ಯದ ಶಾಂತ ಮತ್ತು ಸಜ್ಜನಿಕೆಯ ಜನಸಮುದಾಯವನ್ನು ಅವಮಾನಿಸುತ್ತಿದ್ದಾರೆ.

      ಬಿಜೆಪಿಯವರ ವರ್ತನೆಯು ಅವರ ಹತಾಶ ಮನಸ್ಥಿತಿಯನ್ನು ತೋರುತ್ತಿದೆ. ಚುನಾವಣೆಗೆ ಮೊದಲೆ ಅವರು ಸೋಲನ್ನಪ್ಪಿಕೊಂಡಿದ್ದಾರೆ ಎಂಬುದು ಪ್ರತೀ ದಿನ ಸಾಬೀತಾಗುತ್ತಿದೆ. ದಿನ ದಿನವೂ ಹೊಸ ಹೊಸ ಸುಳ್ಳಿನ ಅಂಗಡಿಯನ್ನು ತೆರೆಯುತ್ತಿದ್ದಾರೆ. ಸುಳ್ಳನ್ನು ಮಾರಲು ಹೊಸ ಗಿರಾಕಿಗಳನ್ನು ಕೂರಿಸುತ್ತಿದೆ. ಸಿಟಿ ರವಿ, ನಳೀನ್ ಕುಮಾರ್ ಕಟೀಲು, ಅಶ್ವಥ್ ನಾರಾಯಣ ಮುಂತಾದವರು ಕೂರುತ್ತಿದ್ದಾರೆ.

       ಟಿಪ್ಪುವಿನ ಅಂತ್ಯ ಹೇಗಾಯಿತು? ಮೂಲ ದಾಖಲೆಗಳು ಏನು ಹೇಳುತ್ತಿವೆ.ತನ್ನ ಇಡೀ ಜೀವಿತಾವಧಿ ಯನ್ನು ಬಡವರು ಮತ್ತು ದಲಿತ ದಮನಿತರ ಏಳಿಗೆಗಾಗಿ ಮುಡುಪಾಗಿಟ್ಟ ಟಿಪ್ಪುವಿನ ಕುರಿತು ನಮ್ಮ ಮೈಸೂರು ಭಾಗದ ರೈತಾಪಿ ಮನೆಗಳ ಜನರು ಲಾವಣಿಗಳನ್ನು ಕಟ್ಟಿ ಹಾಡಿದ್ದಾರೆ. ಭೂ ಸುಧಾರಣೆ ಮಾಡಿ ರೇಷ್ಮೆ, ತೋಟಗಾರಿಕೆ, ಕೈಗಾರಿಕೆ ಮುಂತಾದವುಗಳ ಮೂಲಕ ಇಡೀ ಮೈಸೂರು ಭಾಗವನ್ನು ಮಾದರಿಯನ್ನಾಗಿಸಿದ ಕೀರ್ತಿ ಟಿಪ್ಪುವಿಗೆ ಸಲ್ಲುತ್ತದೆ. ಮೈಸೂರು ಭಾಗದಲ್ಲಿ ಕೊಡವರನ್ನು ಬಿಟ್ಟು ಉಳಿದ ಯಾವ ಸಮುದಾಯಕ್ಕೂ ಟಿಪ್ಪು ಕುರಿತು ತಕರಾರುಗಳಿಲ್ಲ. ಟಿಪ್ಪು ಕನ್ನಂಬಾಡಿ ಕಟ್ಟೆ ಕಟ್ಟಲು ಅಡಿಪಾಯ ಹಾಕಿದ್ದ ಕಲ್ಲನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೆ ಸಾರ್ವಜನಿಕರಿಗೆ ತಿಳಿಯುವಂತೆ ಇಟ್ಟಿದ್ದಾರೆಂದು ಇತಿಹಾಸಕಾರರು ದಾಖಲಿಸಿದ್ದಾರೆ.

      ಇತಿಹಾಸವನ್ನು ಪುನಾರಚನೆಯಷ್ಟೆ ನಮ್ಮ ಕೆಲಸ ಅದನ್ನು ಯಾರು ತಡೆಯುತ್ತಾರೊ ನೋಡುತ್ತೇವೆ ಎಂದು ಅಮಿತ್ ಶಾ ಹೇಳಿಕೆ ಕೊಟ್ಟಿದ್ದಾರೆ. ಸಿಟಿ ರವಿ, ಅಶ್ವಥ್ ನಾರಾಯಣ ಮುಂತಾದವರು ಮಾತನಾಡಿ ಅದನ್ನು ಎಲ್ಲರೂ ಸೇರಿಕೊಂಡು ನಿಜ ಎಂದು ಬಿಂಬಿಸಲು ನೋಡುತ್ತಾರೆ. ಉರಿಗೌಡ, ನಂಜೇಗೌಡ ಎಂಬುವವರು ಟಿಪ್ಪುವನ್ನು ಕೊಂದರು ಎಂದು ಸುಳ್ಳು ಹೇಳಲು ಪ್ರಾರಂಭಿಸಿದ್ದಾರೆ.

     ಅದೃಷ್ಟವಶಾತ್ ಟಿಪ್ಪುವಿನ ದಾರುಣ ಅಂತ್ಯ ಹೇಗಾಯಿತು ಎಂಬ ಕುರಿತು ಬ್ರಿಟಿಷರ ಯುದ್ಧ ಕುರಿತಾದ ಡೈರಿಗಳಿವೆ. ಯುದ್ಧದಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದವರಿಗೆ ಬಹುಮಾನ ಕೊಡುವುದಕ್ಕಾಗಿಯೆ ನೇರವಾಗಿ ಯುದ್ಧರಂಗದಲ್ಲಿ ಪ್ರೆöÊಸ್ ಆಫೀಸರ್‌ಗಳನ್ನು ನೇಮಿಸುತ್ತಿದ್ದರು. ಹಾಗೆ ನೇಮಕಗೊಂಡಿದ್ದ ಮೇಜರ್ ಡೇವಿಡ್  ಎಂಬಾತನ ಡೈರಿಗಳನ್ನು ಆಧರಿಸಿ, “ಮೆಮೊರೀಸ್ ಆಫ್‌ದ ಅರ್ಲಿ ಲೈಫ್ ಅಂಡ್ ಸರ್ವಿಸ್ ಆಫ್ ಎ ಫೀಲ್ಡ್ ಆಫೀಸರ್” ಎಂಬ ಪುಸ್ತಕವಿದೆ, ಈತ ಟಿಪ್ಪುವಿನ ಸಾವನ್ನು ಕಣ್ಣಾರೆ ನೋಡಿದವನು.

     ಹಾಗೆಯೆ ಸರ್ ಡೇವಿಡ್ ಬಯಾರ್ಡ್ ಎಂಬಾತನ ಕೈಯಲ್ಲಿ ಟಿಪ್ಪು ಕೊನೆಯುಸಿರು ಎಳೆಯುತ್ತಾನೆ ಎಂದು ಕ್ಯಾಪ್ಟನ್  ಎಚ್.ವಿಲ್ಕಿನ್ ಬರೆದಿದ್ದಾನೆ. ಫಾರೆಸ್ಟ್ ಎಂಬಾತ ‘ಟೈಗರ್ ಆಫ್ ಮೈಸೂರ್’ ಎಂಬ ಪುಸ್ತಕವನ್ನು ಬರೆದಿದ್ದಾನೆ. 1792 ರ ಬ್ರಿಟೀಷರ ಪತ್ರ ವ್ಯವಹಾರಗಳಲ್ಲಿಯೆ ಟಿಪ್ಪುವಿಗೆ ಬ್ರಿಟೀಷರು ಟೈಗರ್ ಎಂದು ಕರೆದಿರುವುದರ ದಾಖಲೆಗಳನ್ನು ಈತ ಪತ್ರಾಗಾರಗಳಿಂದ ತೆಗೆದು ದಾಖಲಿಸಿದ್ದಾನೆ.

     ಈ ಎಲ್ಲ ದಾಖಲೆಗಳಲ್ಲಿ ಎಲ್ಲೂ ಕೂಡ ಟಿಪ್ಪುವಿನ ದೇಹದಲ್ಲಿ ಎಲ್ಲೂ ಕೂಡ ಉರಿಗೌಡ ಮತ್ತು ನಂಜೇಗೌಡರ ಖಡ್ಗದಿಂದಾದ ಗಾಯಗಳ ಗುರುತುಗಳ ಪ್ರಸ್ತಾಪವಿಲ್ಲ. ಟಿಪ್ಪು ತೀವ್ರ ಪ್ರತಿರೋಧ ಒಡ್ಡಿ ಹೋರಾಡುತ್ತಿದ್ದಾಗ ಫಿರಂಗಿಯನ್ನು ಅವನ ಕಡೆಗೆ ತಿರುಗಿಸಿ ಉಡಾಯಿಸಲಾಗುತ್ತದೆ. ಫಿರಂಗಿ ಗುಂಡಿನ ತುಣುಕೊಂದು ಅವನ ಎಡಗೈಯನ್ನು ತೀವ್ರ ಗಾಯಗೊಳಿಸುತ್ತದೆ. ಅವನ ಅಂಗ ರಕ್ಷಕನೊಬ್ಬ ಶರಣಾಗಿ ಬಿಡೋಣ ಎನ್ನುತ್ತಾನೆ.

     ಟಿಪ್ಪು ‘ನಿನಗೇನು ಹುಚ್ಚು ಹಿಡಿದಿದೆಯೇ, ಬಾಯಿ ಮುಚ್ಚು’ ಎಂದು ರೇಗಿದ್ದಾಗಿ ಬ್ರಿಟಿಷ್ ಫೀಲ್ಡ್ ಆಫೀಸರ್ ದಾಖಲಿಸಿದ್ದಾನೆ. ಕೋಟೆ ಒಡೆದು ಒಳ ನುಗ್ಗಿ ನಡೆಸುತ್ತಿದ್ದ ದಾಳಿಯಲ್ಲಿ ಬ್ರಿಗೇಡಿಯರನೊಬ್ಬ ಗಾಯಗೊಂಡಿದ್ದ ಟಿಪ್ಪುವಿನ ಸೊಂಟದಲ್ಲಿದ್ದ ಚಿನ್ನದ ಬಕಲ್ ಅನ್ನು ಕಿತ್ತುಕೊಳ್ಳಲು ನುಗ್ಗುತ್ತಾನೆ. ಅವನಿಗೆ ಟಿಪ್ಪು ತನ್ನ ಖಡ್ಗದ ಮೂಲಕ ಕಟ್ಟ ಕಡೆಯದಾಗಿ ಮಾರಣಾಂತಿಕ ಪೆಟ್ಟು ಕೊಡುತ್ತಾನೆ. ಬ್ರಿಟಿಷ್ ಕೆಂಪAಗಿ ದಳದವನೊಬ್ಬ ಕಡೆಯವನೊಬ್ಬ ದೇವಸ್ಥಾನದ ಕಡೆಯಿಂದ ಪಾಯಿಂಟ್ ಬ್ಲಾಂಕ್ ರೇಂಜ್ [ಹತ್ತಿರದಿಂದಲೆ ಗುರಿಯಿಟ್ಟು] ಶೂಟ್ ಮಾಡುತ್ತಾನೆ.

     ಟಿಪ್ಪು ಹುತಾತ್ಮನಾಗುತ್ತಾನೆ. ಟಿಪ್ಪುವಿನ ದೇಹದಲ್ಲಿ ಎಲ್ಲಿಯೂ ಖಡ್ಗದ ಗುರುತುಗಳು ಇರುವುದಿಲ್ಲ. ಎಡ ಭುಜದಲ್ಲಿ ಬಯೊನೆಟ್‌ನ ಎರಡು ಗಾಯಗಳು ಮತ್ತು ಫಿರಂಗಿ ಗುಂಡಿನ ಆಳ ಗಾಯ ಬಿಟ್ಟರೆ ಗುಂಡಿನ ಏಟುಗಳು ಮಾತ್ರ ಇದ್ದ ಕುರಿತು ಯುದ್ಧದಲ್ಲಿ ನೇರವಾಗಿ ಭಾಗವಹಿಸಿದ್ದ ಬ್ರಿಟಿಷ್ ಅಧಿಕಾರಿಗಳು ದಾಖಲಿಸಿದ್ದಾರೆ.

     ಇಷ್ಟೆಲ್ಲ ದಾಖಲೆಗಳಿದ್ದರೂ ಬಿಜೆಪಿಯವರು ಕೇವಲ ಓಟಿಗಾಗಿ ಚರಿತ್ರೆಯನ್ನೆ ತಿರುಚಿ ಹಾಳು ಮಾಡುವ ಮತಾಂಧ ಕೆಲಸ ಮಾಡುತ್ತಿದ್ದಾರೆ.ಇಂಥವರು ಕರ್ನಾಟಕದ ಎಲ್ಲ ದುಡಿದು ಬದುಕುವ ಸಮುದಾಯಗಳನ್ನು ಮನುವಾದಿಗಳ ಪಾದದ ಕೆಳಕ್ಕೆ ತಳ್ಳಲು ಪ್ರಯತ್ನಿಸುತ್ತಿದ್ದಾರೆ. ಬ್ರಿಟಿಷರು ತಮ್ಮ ಡೈರಿಗಳಲ್ಲಿ ಬರೆದು ಕೊಂಡಿರುವಂತೆ ಟಿಪ್ಪು ಬ್ರಾಹ್ಮಣ ಪುರೋಹಿತರನ್ನು ಕೇಳಿಯೆ ಪೂಜೆ, ಬಲಿಗಳನ್ನು ನೀಡಿ ಯುದ್ಧ ಪ್ರಾರಂಭಿಸುತ್ತಾನೆ.

      ತನ್ನ ಆಡಳಿತದಲ್ಲಿ ದೇವಾಲಯಗಳಿಗೆ ಚ್ಯುತಿ ಬರದ ಹಾಗೆ ನೋಡಿಕೊಂಡಿದ್ದಾನೆ. ಟಿಪ್ಪು ಶೃಂಗೇರಿ ಮುಂತಾದ ದೇವಾಲಯಗಳನ್ನು ಹೇಗೆ ನೋಡಿಕೊಂಡ ಎಂದು ಡಾ.ಎ.ಕೆ ಶಾಸ್ತಿಯವರು “ಶೃಂಗೇರಿ ಮಠದ ಕಡತಗಳಲ್ಲಿಯ ಆಯ್ದ ಚಾರಿತ್ರಿಕ ದಾಖಲೆಗಳು” ಎಂಬ ಪುಸ್ತಕವೊಂದನ್ನು ಬರೆದಿದ್ದಾರೆ. ಆಸಕ್ತರು ಆ ಪುಸ್ತಕವನ್ನು ನೋಡಿದರೆ ಸಾಕು. ಟಿಪ್ಪು ದೇವಾಲಯಗಳ ವಿಚಾರದಲ್ಲಿ ಅರ್ಚಕರುಗಳ ವಿಚಾರದಲ್ಲಿ ಹೇಗೆ ನಡೆದುಕೊಂಡ ಎಂದು ತಿಳಿಯುತ್ತದೆ.

     ಯಾವ ಆರೆಸ್ಸೆಸ್ಸು ತನ್ನ ಮೂಲ ಪ್ರೇರಣೆಯಾಗಿ ಮರಾಠ ಪೇಶ್ವೆಗಳ ಸಾಮ್ರಾಜ್ಯವನ್ನು ಆದರ್ಶ ಎಂದು ಹೇಳಿಕೊಳ್ಳುತ್ತದೊ, ಆ ಪೇಶ್ವೆಗಳ ದಂಡನಾಯಕ ಪರಶುರಾಮ್ ಭಾವೆ ಶೃಂಗೇರಿ ದೇವಸ್ಥಾನದ ಮೇಲೆ ದಾಳಿ ಮಾಡಿ ಕೊಳ್ಳೆ ಹೊಡೆಯುತ್ತಾನೆ. ಶೃಂಗೇರಿಯ ರಥ ಬೀದಿಯೂ ಸೇರಿದಂತೆ ಪಟ್ಟಣದ ಹೆಂಗಸರ ಮೇಲೆ ಅತ್ಯಾಚಾರ ಮಾಡಲಾಗುತ್ತದೆ. ಶೃಂಗೇರಿಯ ಗುರುಗಳು ಪರಶುರಾಮ್ ಭಾವೆಯ ಪೇಶ್ವೆ ಸೈನ್ಯ ಹೇಗೆಲ್ಲ ಲೂಟಿ ಮಾಡಿದರು, ರಕ್ತ ಪಾತ ಮಾಡಿದರು, ಮಾನಭಂಗ ಮಾಡಿದರೆಂದು ಟಿಪ್ಪುವಿಗೆ ಪತ್ರ ಬರೆದು ನೆರವಿಗೆ ನಿಲ್ಲುವಂತೆ ಕೇಳಿಕೊಳ್ಳುತ್ತಾರೆ.

     ಟಿಪ್ಪು ಕೂಡಲೆ ಶೃಂಗೇರಿಯ ಗುರುಗಳು ಕೇಳಿದ್ದೆಲ್ಲವನ್ನು ಕಳಿಸುತ್ತಾನೆ. ಟಿಪ್ಪು ಮತಾಂಧನಾಗಿದ್ದರೆ, ಶೃಂಗೇರಿಯ ಗುರುಗಳು ನೆರವು ಕೇಳುತ್ತಿದ್ದರೆ? ಎಂಬ ಸಣ್ಣ ಪ್ರಶ್ನೆಯೂ ಬಿಜೆಪಿಗರ ತಲೆಗೆ ಹೋಗುವುದಿಲ್ಲ. ಪದೇ ಪದೇ ಸುಳ್ಳು ಹೇಳಿ ಜನರ ಮೆದುಳನ್ನೂ ಬ್ಲಾಕ್ ಮಾಡುವ ಕೆಲಸ ಮಾಡುತ್ತಿದ್ದಾರೆ. ನಾವು ದಾಖಲೆಗಳನ್ನು ಮುಂದಿಟ್ಟು ಮಾತಾಡುತ್ತೇವೆ. ಬಿಜೆಪಿಯವರು ಸುಳ್ಳು ಹೇಳುತ್ತಾರೆಯೇ ಹೊರತು ದಾಖಲೆ ನೀಡುವುದಿಲ್ಲ. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ.

    ಬಿಜೆಪಿಯವರು ಭಯೋತ್ಪಾದನೆಯ ಬಗ್ಗೆಯೂ ಮಾತನಾಡುತ್ತಾರೆ. ಭಯೋತ್ಪಾದನೆಯ ಪಿತೃಗಳೇ ಬಿಜೆಪಿಯವರು ಹಾಗೂ ಮನುವಾದಿಗಳು ನಾವು ಬಸವಣ್ಣನವರನ್ನು ಕಳೆದುಕೊಂಡೆವು ಗಾಂಧೀಜಿಯವರನ್ನೂ ಕಳೆದುಕೊಂಡೆವು. ಕಲ್ಬುರ್ಗಿಯವರನ್ನು, ಗೌರಿ ಲಂಕೇಶರನ್ನು ಕಳೆದುಕೊಂಡೆವು.

    ನಮ್ಮದೇ ಪಕ್ಷದ ಇಂದಿರಾಗಾಂಧಿ, ರಾಜೀವ್ ಗಾಂಧಿಯವರನ್ನು ಕಳೆದುಕೊಂಡೆವು. ಆದರೆ ಬಿಜೆಪಿಯವರು ಭಯೋತ್ಪಾದಕರನ್ನು ವಿಮಾನದಲ್ಲಿ ಕೂರಿಸಿಕೊಂಡು ಕಂದಹಾರ್‌ಗೆ ಬಿಟ್ಟು ಬಂದರು. ತಾಲಿಬಾನ್‌ಗೆ ಗೋಧಿ, ಔಷಧ, ಧಾನ್ಯಗಳು, ಹಣಕಾಸಿನ ನೆರವು ಇವನ್ನೆಲ್ಲ ಒದಗಿಸುತ್ತಿದ್ದಾರೆ. ತಾಲಿಬಾನಿಗಳು ಹೆಣ್ಣು ಮಕ್ಕಳು ಶಾಲೆ, ಕಾಲೇಜುಗಳಿಗೆ ಹೋಗಬಾರದೆಂದು ಕಾನೂನು ತಂದಿದ್ದಾರೆ. ಆರೆಸ್ಸಿಸ್ಸಿನ ಮೋಹನ ಭಾಗವತರು ಸಹ ಹೆಣ್ಣು ಮಕ್ಕಳು ಮನೆ ಕೆಲಸ ಮಾತ್ರ ಮಾಡಬೇಕು, ಹೊರಗಡೆ ಕೆಲಸ ಮಾಡಬಾರದು ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap