ಬೆಂಗಳೂರು:
ನಮ್ಮ ಮೆಟ್ರೊ ಪ್ರಯಾಣ ದರ ಹೆಚ್ಚಳ ನಂತರ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ ಎಂಬ ಕೂಗು ಕೇಳಿಬರುತ್ತಿರುವುದರ ಮಧ್ಯೆ, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ದೆಹಲಿ ಮೆಟ್ರೋ ಆರಂಭಿಸಿದ್ದ ಹೊಸ ಉಪಕ್ರಮವನ್ನು ಅನುಸರಿಸಲು ಮುಂದಾಗಿದೆ.
ಪೀಕ್ ಅವರ್ ಅಲ್ಲದ ಸಮಯಗಳಲ್ಲಿ ನಿರ್ದಿಷ್ಟ ವಿಭಾಗಗಳಲ್ಲಿ ಪಾರ್ಸೆಲ್‌ಗಳು ಮತ್ತು ಪತ್ರಗಳನ್ನು ಸಾಗಿಸುವ ಆಯ್ಕೆಯನ್ನು ಪರಿಶೀಲಿಸುತ್ತಿದೆ. ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರಿಗೆ ಪಾರ್ಸೆಲ್‌ಗಳನ್ನು ಸಾಗಿಸಲು ಕಡಿಮೆ ಪ್ರಯಾಣಿಕರಿರುವ ಕೆಲವು ರೈಲುಗಳಲ್ಲಿ ಕೊನೆಯ ಕೋಚ್ ನ್ನು ಬಳಸಲು ಬ್ಲೂ ಡಾರ್ಟ್ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ದೆಹಲಿ ಮೆಟ್ರೋ ಇತ್ತೀಚೆಗೆ ಘೋಷಿಸಿಕೊಂಡಿತ್ತು.
ಇಂತಹ ಸಾಧ್ಯತೆಗಳನ್ನು ನಮ್ಮ ಮೆಟ್ರೊದಲ್ಲಿ ಕೂಡ ತರಲು ನೋಡಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ ಮಹೇಶ್ವರ್ ರಾವ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ. ಈ ಆಯ್ಕೆಯನ್ನು ಅನ್ವೇಷಿಸಲು ಮತ್ತು ಖಾಸಗಿ ಸರಕು ನಿರ್ವಾಹಕರೊಂದಿಗೆ ಮಾತುಕತೆ ನಡೆಸಲು ನಾನು ಸಂಪರ್ಕ ತಂಡವನ್ನು ಕೇಳಿದ್ದೇನೆ. ಇದು ಯಶಸ್ವಿಯಾದರೆ, ಮುಂದಿನ ಎರಡು ತಿಂಗಳೊಳಗೆ ಅಂತಹ ಸೇವೆಯನ್ನು ಪ್ರಾರಂಭಿಸಲು ನಾವು ನೋಡುತ್ತಿದ್ದೇವೆ ಎಂದರು.
ಕಳೆದ ಕೆಲವು ವರ್ಷಗಳಿಂದ ಬಿಎಂಆರ್‌ಸಿಎಲ್ ಪ್ರಯಾಣಿಕರ ಟಿಕೆಟ್ ಹೊರತಾಗಿ ಬೇರೆ ಮೂಲಗಳಿಂದ ಆದಾಯ ನೋಡುತ್ತಿದೆ. ಕೆ ಆರ್ ಪುರ ಮತ್ತು ಮೆಜೆಸ್ಟಿಕ್ ನಿಲ್ದಾಣಗಳಲ್ಲಿ ಸಮಗ್ರ ಆಸ್ತಿ ಅಭಿವೃದ್ಧಿ, ನಿಲ್ದಾಣಗಳ ಒಳಗೆ ರಿಟೇಲ್ ಸ್ಥಳಗಳು ಮತ್ತು ರೈಲುಗಳ ಹೊರಭಾಗಗಳಲ್ಲಿ ಜಾಹೀರಾತು ಪ್ರಕಟಣೆ ಮೂಲಕ ನಾವು ಸಂಪನ್ಮೂಲಗಳನ್ನು ಕ್ರೋಢೀಕರಿಸುತ್ತಿದ್ದೇವೆ. ಪ್ರಯಾಣಿಕರ ಟಿಕೆಟ್ ದರವಲ್ಲದೆ ಇತರ ಆದಾಯವನ್ನು ಕ್ರೋಢೀಕರಿಸಲು ನಾವು ಬಹು ಟೆಂಡರ್‌ಗಳನ್ನು ಕರೆದಿದ್ದೇವೆ ಎಂದು ಬಿಎಂಆರ್‌ಸಿಎಲ್‌ನ ಆಸ್ತಿ ನಿರ್ವಹಣೆ ಮತ್ತು ಆಸ್ತಿ ಅಭಿವೃದ್ಧಿ ಕಾರ್ಯನಿರ್ವಾಹಕ ನಿರ್ದೇಶಕಿ ಕಲ್ಪನಾ ಕಟಾರಿಯಾ ಹೇಳುತ್ತಾರೆ.
