ಬೆಂಗಳೂರು
ಬೆಂಗಳೂರಿನಲ್ಲಿ ಬೆಚ್ಚಿ ಬೆಳಿಸುವಂತಹ ಘಟನೆ ನಡೆದಿದೆ. ನಿವೃತ್ತ ಬಿಎಂಟಿಸಿ ಡ್ರೈವರ್‌ನೊಬ್ಬ ತನ್ನ ಪತ್ನಿಯನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ದಾರುಣ ಘಟನೆ ಸುಬ್ರಮಣ್ಯಪುರದ ಚಿಕ್ಕ ಗೌಡನಪಾಳ್ಯದಲ್ಲಿ ನಡೆದಿದೆ. ಪತ್ನಿ ಬೇಬಿ (65) ಯನ್ನು ಕೊಂದು ಪತಿ ವೆಂಕಟೇಶನ್ (65) ಆತ್ಮಹತ್ಯೆಗೆ ಶರಣಾಗಿದ್ದಾನೆ.
ವೆಂಕಟೇಶ್ ಬಿಎಂಟಿಸಿ ಡ್ರೈವರ್ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ್ದ. ಪತ್ನಿಗೆ ಸ್ಟ್ರೋಕ್ ಆಗಿ ವೀಲ್‌ಚೇರ್‌ನಲ್ಲಿ ಜೀವನ ಸಾಗಿಸುತ್ತಿದ್ದರು. ಸಣ್ಣ ಪುಟ್ಟ ವಿಚಾರಗಳಿಗೂ ಕೂಡ ಇಬ್ಬರ ಮಧ್ಯೆ ಆಗಾಗ ಜಗಳ ಆಗುತ್ತಿತ್ತು. ಮಕ್ಕಳು ಹೊರಗಡೆ ಹೋದಾಗ ದಂಪತಿಗಳು ಜಗಳ ಮಾಡಿಕೊಳ್ಳುತ್ತಿದ್ದರು. ಡಿಸೆಂಬರ್ 2ರಂದು ಮಂಗಳವಾರ ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ. ಗಲಾಟೆ ವಿಕೋಪಕ್ಕೆ ಹೋಗಿ ವೈರಿನಿಂದ ಪತ್ನಿಯ ಕುತ್ತಿಗೆ ಬಿಗಿದು ವೆಂಕಟೇಶನ್ ಕೊಲೆ ಮಾಡಿದ್ದಾನೆ. ನಂತರ ಅದೇ ವೈರ್‌ನಲ್ಲಿ ತಾನು ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಧ್ಯಾಹ್ನ ಸೊಸೆ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಮೃತದೇಹಗಳು ಕಾಣಿಸಿವೆ. ತಕ್ಷಣವೇ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರೆಸಿದ್ದಾರೆ.








