ಭಾರತ್ ಜೋಡೋ ಹೆಸರಲ್ಲಿ ಕಾರ್ಯಕರ್ತರಿಗೆ ಗಂಜಿ ಕೇಂದ್ರ: ಆರ್.ಅಶೋಕ

ಬೆಂಗಳೂರು : ಭಾರತ್ ಜೋಡೋ ಯುವ ಸಂಘಗಳ ಹೆಸರಲ್ಲಿ ಕಾಂಗ್ರೆಸ್ ತನ್ನ ಕಾರ್ಯಕರ್ತರಿಗೆ ಗಂಜಿ ಕೇಂದ್ರಗಳನ್ನು ನಿರ್ಮಿಸಲು ಮುಂದಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ, ವೃದ್ಧರಿಗೆ, ಅನಾಥರಿಗೆ, ವಿಧವೆಯರಿಗೆ ಪಿಂಚಣಿ ಫಲಾನುಭವಿಗಳಿಗೆ ಸಹಾಯಧನ ನೀಡದೆ ತಡೆಹಿಡಿದಿರುವ ಸರ್ಕಾರ, ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ರಾಜ್ಯದ ತೆರಿಗೆದಾರರ ಹಣದಲ್ಲಿ ಪುನರ್ವಸತಿ ಕಲ್ಪಿಸುತ್ತಿದೆ ಎಂದು ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಹರಿಹಾಯ್ದರು.

ಗೃಹಲಕ್ಷಿ÷್ಮಯ 5,000 ಕೋಟಿ ರೂ. ಅನ್ನಭಾಗ್ಯದ 750 ಕೋಟೊ ಹಣವನ್ನು ಇನ್ನೂ ನೀಡಿಲ್ಲ. ಆಗಿನ ಸಚಿವೆ ಲಕ್ಷಿ÷್ಮ ಹೆಬ್ಬಾಳಕರ್ ಬೆಳಗಾವಿ ಅಧಿವೇಶನದಲ್ಲಿ ಕಣ್ಣೀರು ಹಾಕಿ ಸತ್ಯ ಒಪ್ಪಿಕೊಂಡರು. ಆದರೂ ಇನ್ನೂ ಫಲಾನುಭವಿಗಳಿಗೆ ಹಣ ತಲುಪಿಲ್ಲ. ಆದರೆ ಕಾಂಗ್ರೆಸ್ ಪುಢಾರಿ ಕಾರ್ಯಕರ್ತರಿಗೆ ಮಾತ್ರ ದಿನಕ್ಕೊಂದು ಯೋಜನೆ ಕೊಡುತ್ತಿದ್ದಾರೆ. ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ.ರೇವಣ್ಣ ಅವರಿಗೆ 58 ಲಕ್ಷ ರೂ. ವಸತಿ ಭತ್ಯೆ ನೀಡಲಾಗುತ್ತಿದೆ. ವೇತನ,ಇತರೆ ಭತ್ಯೆ, ಸೌಲಭ್ಯಗಳು, ಅವರಿಗೆ 12 ಸಿಬ್ಬಂದಿ ಕೂಡ ಇದ್ದಾರೆ. ಎಲ್ಲ ಸೇರಿ 2 ಕೋಟಿ ರೂ. ವರೆಗೆ ವೆಚ್ಚವಾಗುತ್ತಿದೆ. ಪ್ರತಿಪಕ್ಷದ ನಾಯಕನಾದ ನನಗೆ ಸರ್ಕಾರದಿಂದ ಇನ್ನೂ ಮನೆ ನೀಡಿಲ್ಲ. ಆದರೆ ಸಮಿತಿಯ ಉಪಾಧ್ಯಕ್ಷರಿಗೆ ಸರ್ಕಾರಿ ಮನೆ ನೀಡಿ 58 ಲಕ್ಷ ರೂ. ಖರ್ಚು ಮಾಡಲಾಗಿದೆ. ಜಿಲ್ಲಾ, ತಾಲ್ಲೂಕು ಸಮಿತಿ ಅಧ್ಯಕ್ಷರಿಗೆ ಪ್ರತಿ ತಿಂಗಳು ಸಂಬಳ ನೀಡಲಾಗುತ್ತಿದೆ. ಸದಸ್ಯರಿಗೆ ಭತ್ಯೆ ನೀಡಲಾಗುತ್ತಿದೆ, ಜಿಲ್ಲೆಗಳಲ್ಲಿ ಕಚೇರಿ ವೆಚ್ಚ ಎಲ್ಲ ಸೇರಿದರೆ ಪ್ರತಿ ತಿಂಗಳು 150 ಕೋಟಿ ರೂಗಳಿಗೂ ಹೆಚ್ಚು ಹಣ ವೆಚ್ಚವಾಗುತ್ತದೆ ಎಂದರು.

ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಬ್ಯಾನರ್ ಕೆಳಗೆ ನಡೆಸಿದ ಭಾರತ್ ಜೋಡೋ ಹೆಸರಲ್ಲಿ ಸಂಘಗಳನ್ನು ರಚಿಸಿ ಕಾಂಗ್ರೆಸ್‌ನ ನಿರುದ್ಯೋಗಿ ಕಾರ್ಯಕರ್ತರಿಗೆ ಉದ್ಯೋಗ ನೀಡಲಾಗುತ್ತಿದೆ. ಪ್ರತಿ ಸಮಿತಿಗೆ ತರಬೇತುದಾರರನ್ನು ನೇಮಿಸಿ 24,000 ರೂ.ವೇತನ ನಿಗದಿ ಮಾಡಲಾಗುತ್ತಿದೆ. ಈ ಯೋಜನೆಗೆ ಒಟ್ಟು 1,010 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದು ತೆರಿಗೆದಾರರ ಬೆವರಿನ ಹಣದ ದುರ್ಬಳಕೆಯಾಗಿದೆ ಎಂದು ಟೀಕಿಸಿದರು.

Recent Articles

spot_img

Related Stories

Share via
Copy link