
ಶಿವಮೊಗ್ಗ: ಸಚಿವ ಸಂಪುಟ ಪುನಾರಚನೆಯಾದ್ರೆ ತಪ್ಪೇನು ? ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಪ್ರಶ್ನಿಸಿದರು. ಈ ಕುರಿತು ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆಯಾದ್ರೆ ಎಲ್ಲರಿಗೂ ಅವಕಾಶ ಸಿಗುತ್ತದೆ. ನಾವೆಲ್ಲಾ ಹೈಕಮಾಂಡ್ ಹೇಳಿದಂತೆ ಕೇಳುವವರು, ಕಾಂಗ್ರೆಸ್ ಹೈಕಮಾಂಡ್ ಜನತೆಗೆ ಒಳ್ಳೆಯ ಕೆಲಸ ಮಾಡು ಅಂತ ಸಿಎಂ, ಡಿಸಿಎಂ ಹಾಗೂ ಮಂತ್ರಿಗಳಿಗೆ ಹೇಳುತ್ತದೆ. ಹೈಕಮಾಂಡ್ ಹೇಳುವ ತನಕ ನಾವು ಅಧಿಕಾರದಲ್ಲಿ ಇರುತ್ತೇವೆ. ಇಲ್ಲ ಅಂದ್ರೆ, ಸಾಮಾನ್ಯ ಶಾಸಕರಾಗಿರುತ್ತೇವೆ ಎಂದರು.
ಶಾಸಕರ ದೆಹಲಿ ಪ್ರವಾಸದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದೆಹಲಿಗೆ ಹೋದರೆ ತಪ್ಪೇನಿದೆ?. ಬಿಜೆಪಿಯ ಅವಧಿಯಲ್ಲಿ ಮೂವರು ಸಿಎಂಗಳು ಬದಲಾದರು. ಹಾಗಾದರೆ, ಸಚಿವ ಸಂಪುಟ ಪುನಾರಚನೆ ಆಗಬಾರದೇ? ಎಲ್ಲರಿಗೂ ಅವಕಾಶ ಸಿಗಲಿ ಬಿಡಿ ಎಂದು ಹೇಳಿದರು.
ವಾಣಿಜ್ಯ ಸಿಲಿಂಡರ್ ದರ ಏರಿಕೆಗೆ ಗರಂ : ಬಿಜೆಪಿ ಅವರು ಚುನಾವಣೆ ಮುಗಿಯುತ್ತಿದ್ದಂತೆಯೇ ಗ್ಯಾಸ್ ದರ ಏರಿಕೆ ಮಾಡಿದ್ದಾರೆ. 5-10 ರೂ. ದರ ಏರಿಕೆ ಮಾಡಿದಾಗ ದೊಡ್ಡದಾಗಿ ಪ್ರತಿಭಟನೆ ನಡೆಸುವವರು, ಈಗ ಬಂದು ಪ್ರತಿಭಟನೆ ನಡೆಸಲಿ. ಈ ರೀತಿ ಗ್ಯಾಸ್ ದರ ಏರಿಕೆ ಮಾಡಿದ್ರೆ, ಬಡವರು ಏನ್ ಮಾಡಬೇಕು ಎಂದು ಪ್ರಶ್ನಿಸಿದರು.
ನಮ್ಮ ಕಾಂಗ್ರೆಸ್ ರಾಜ್ಯ ಸರ್ಕಾರ ಒಂದು ಮನೆಗೆ 5 ಗ್ಯಾರಂಟಿ ರೂಪದಲ್ಲಿ 6-7 ಸಾವಿರ ರೂ. ಹಣವನ್ನು ನೀಡುತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಜನರ ಕಷ್ಟ ದೇವರಿಗೆ ಪ್ರೀತಿಯಾಗಿದೆ ಎಂದರು.
ಅವರಿಗೆ ವಿದ್ಯುತ್ ದರ 56 ಪೈಸೆ ಏರಿಕೆಯಾಗಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಇದಕ್ಕೂ ಕೇಂದ್ರವೇ ಕಾರಣ ಎಂದು ಆರೋಪಿಸಿದರು. ಗ್ಯಾಸ್, ಡೀಸೆಲ್, ಪೆಟ್ರೋಲ್ ದರ ಏರಿಕೆ ಮಾಡಿದಾಗ ಎಲ್ಲಾ ಉತ್ಪನ್ನಗಳ ದರ ಸಹಜವಾಗಿಯೇ ಏರಿಕೆ ಆಗುತ್ತದೆ ಎಂದು ಸಮರ್ಥಿಸಿಕೊಂಡರು.








