
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ಸುದೀರ್ಘ ರಾಜಕೀಯ ಪಯಣ ಮತ್ತು ಜನಸೇವೆಯನ್ನು ಗೌರವಿಸುವ ಸಲುವಾಗಿ ಆಯೋಜಿಸಲಾಗಿದ್ದ ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಅದ್ಧೂರಿ ಚಾಲನೆ ನೀಡಿದರು. ನಂತರ ಅವರ ಸಾಧನೆಯನ್ನು ಶ್ಲಾಘಿಸಿ, ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಜೀವನಗಾಥೆ ಮತ್ತು ಸಾಧನೆಗಳ ಕುರಿತಾದ ಎರಡು ಪ್ರಮುಖ ಪುಸ್ತಕಗಳನ್ನು ಅವರು ಬಿಡುಗಡೆ ಮಾಡಿ, ಯಡಿಯೂರಪ್ಪ ಅವರ ಹೋರಾಟದ ಬದುಕು ಮತ್ತು ರಾಜ್ಯದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಮಾನಿಗಳು ದಾವಣಗೆರೆಯಲ್ಲಿ ನಡೆಸಿದ್ದ ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪ್ಪನವರ ಅಭಿಮಾನಿಗಳು ನಡೆಸಿದ ಬಿಎಸ್‌ವೈ ಅಭಿಮಾನೋತ್ಸವವು ಬಿಜೆಪಿಯ ಮುಂದುವರೆದ ಚುನಾವಣಾ ಕಾರ್ಯತಂತ್ರದ ಭಾಗವಾಗಿತ್ತು.
ಬೆಂಗಳೂರು, ಮೈಸೂರು, ತುಮಕೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಶಿವಮೊಗ್ಗ, ದಾವಣಗೆರೆ, ಬೆಳಗಾವಿ, ಬಳ್ಳಾರಿ, ರಾಯಚೂರು, ಕೊಪ್ಪಳ, ಕಲಬುರಗಿ ಸೇರಿದಂತೆ ನಾಡಿನ ಮೂಲೆ ಮೂಲೆಗಳಿಂದಲೂ ಆಗಮಿಸಿದ ಲಕ್ಷಾಂತರ ಕಾರ್ಯಕರ್ತರು ಬಿಜೆಪಿಗೆ ಜೈಕಾರ ಹಾಕುವ ಮೂಲಕ ರಾಜ್ಯದಲ್ಲಿ ಯಾವುದೇ ವೇಳೆ ಚುನಾವಣೆ ನಡೆದರೆ ಸಿದ್ದವಿದ್ದೇವೆ ಎಂಬ ಸಂದೇಶ ರವಾನಿಸಿದರು.
ಸಾಲು ಸಾಲು ಚುನಾವಣೆಗಳಿಂದ ಸೋತು ಕಂಗೆಟ್ಟಿದ್ದ ಬಿಜೆಪಿಗೆ ಬಿಎಸ್‌ವೈ ಅಭಿಮಾನೋತ್ಸವು ಒಂದು ರೀತಿ ತನ್ನ ಸಂಘಟನೆಯ ಬೇರುಗಳನ್ನು ವಿಸ್ತರಿಸಲು ಇದು ವೇದಿಕೆಯಾಗಿಯೂ ಪರಿಣಮಿಸಿತ್ತು.
ಪಕ್ಷದ ಬೇರುಗಳನ್ನು ಗಟ್ಟಿಗೊಳಿಸಿ ರಾಜ್ಯಾದ್ಯಂತ ತನ್ನದೇ ಆದ ಅಭಿಮಾನಿಗಳನ್ನು ಹೊಂದಿದ್ದ ಯಡಿಯೂಪ್ಪನವರಿಗೆ ಅಭಿಮಾನ ಸಲ್ಲಿಸುವ ನೆಪದಲ್ಲಿ ಬಿಜೆಪಿ ತನ್ನ ಸಂಘಟನಾ ಶಕ್ತಿಯನ್ನು ಪ್ರದರ್ಶಿಸಲು ಸಮರ್ಥವಾಗಿ ಬಳಸಿಕೊಂಡಿತು.
2028ರ ವಿಧಾನಸಭೆ ಚುನಾವಣೆಯಲ್ಲಿ ಒಗ್ಗಟ್ಟು ಹಾಗೂ ಸಾಮೂಹಿಕ ನಾಯಕತ್ವದಡಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾಯಕರುಗಳು ಸ್ವಹಿತಾಸಕ್ತಿಯನ್ನು ಮರೆತು ಚುನಾವಣೆಗೆ ಸಿದ್ದರಾಗಿ ಎಂದು ಪರೋಕ್ಷವಾಗಿ ಕೇಂದ್ರ ಗೃಹಸಚಿವ ಅಮಿತ್ ಷಾ ಸಂದೇಶವನ್ನು ರವಾನಿಸಿದರು.
ಬಳಿಕ ಪ್ರಲ್ಹಾದ್ ಜೋಶಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತು ಕಂಡ ಅತ್ಯಂತ ನೇರ ವ್ಯಕ್ತಿತ್ವದ ನಾಯಕ. ಗುಜರಾತ್ ನ ಮುಖ್ಯಮಂತ್ರಿಯಾಗಿ 13 ವರ್ಷ ಹಾಗೂ ದೇಶದ ಪ್ರಧಾನಿಯಾಗಿ ಕಳೆದ 12 ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಅವರು, ವಿಶ್ವಾಸಾರ್ಹ ನಾಯಕರಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಈ ಮೂಲಕ ಬಿಜೆಪಿ ಮತ್ತು ಎನ್ ಡಿಎ ದೇಶದ 21 ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಯಡಿಯೂರಪ್ಪ ಅವರು 50 ವರ್ಷಗಳ ಸಾರ್ವಜನಿಕ ಜೀವನದಲ್ಲಿ ರೈತ ಪರವಾಗಿ ಹೋರಾಟ ನಡೆಸಿದ್ದಾರೆ. ಈ ನಾಡು ಕಂಡ ಅಪ್ರತಿಮ ನಾಯಕರು. ರೈತರ ಜೊತೆಗೆ ಕೂಲಿ ಕಾರ್ಮಿಕರು, ಜೀತದಾಳುಗಳು, ಬಗರ್ ಹುಕುಂ ಸಾಗುವಳಿದಾರರ ಪರವಾಗಿಯೂ ಹೋರಾಟ ನಡೆಸಿ, ನ್ಯಾಯ ಕೊಡಿಸಿದ್ದ ಧೀಮಂತ ನಾಯಕ ಎಂದು ಹೇಳಿದರು. ಇದೇ ವೇಳೆ ಯಡಿಯೂರಪ್ಪ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಪ್ರೀತಿ ಮತ್ತು ಅಭಿಮಾನವಿದ್ದು, ಕಾರ್ಯಕ್ರಮಕ್ಕಾಗಿ ಸಂದೇಶ ಕಳುಹಿಸಿದ್ದಾರೆ ಎಂದು ಪ್ರಧಾನಿ ಅವರ ಸಂದೇಶ ವಾಚಿಸಿದರು.
ಬಿ.ವೈ. ವಿಜಯೇಂದ್ರ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವದಲ್ಲಿ ಪಾಲ್ಗೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಆಗಮಿಸಿರುವುದು ಸುವರ್ಣಾಕ್ಷರದಲ್ಲಿ ಬರೆದಿಡುವ ಕ್ಷಣವಾಗಿದೆ. 50 ವರ್ಷಗಳ ರಾಜ್ಯ ರಾಜಕಾರಣದಲ್ಲಿ ಯಡಿಯೂರಪ್ಪ ಅವರು ಬಿಜೆಪಿಯನ್ನು ಕಟ್ಟಿ ಬೆಳೆಸಲು ಅಪಾರ ಶ್ರಮಿಸಿದ್ದಾರೆ ಎಂದರು.
ಸAಸದ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಯಡಿಯೂರಪ್ಪ ಅವರು ರೈತ ಪರವಾಗಿ ಹೋರಾಟ ನಡೆಸಿ, ಸಂಕಷ್ಟದಲ್ಲಿದ್ದ ರೈತರಿಗೆ ನೆರವಾಗಿದ್ದರು. 50 ವರ್ಷಗಳ ರಾಜಕಾರಣದಲ್ಲಿ ಬಿಜೆಪಿಯನ್ನು ಕಟ್ಟಿ, ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ ಎಂದರು.
ಸAಸದ ಬಸವರಾಜ ಬೊಮ್ಮಾಯಿ, ಬರಗಾಲ ಇದ್ದ ಸಂದರ್ಭದಲ್ಲಿ ನಾಡಿಗೆ ನೀರುಣಿಸುವ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಅನುಷ್ಠಾನಕ್ಕಾಗಿ ಶ್ರಮಿಸಿದ್ದವರು ಬಿ.ಎಸ್. ಯಡಿಯೂರಪ್ಪ ಅವರು ಎಂದು ತಿಳಿಸಿದರು.
ಇದೇ ವೇಳೆ ರೈತ ಗೀತೆ ಸೇರಿದಂತೆ ವಿವಿಧ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು. ಸಮಾರಂಭದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ ವಾಲ್, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಬಿ.ವೈ. ರಾಘವೇಂದ್ರ, ಶಾಸಕರು, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಸಿರಿಗೆರೆಯ ತರಳಬಾಳು ಮಠದ ಸ್ವಾಮೀಜಿ ಸೇರಿ, ನಾಡಿನ ವಿವಿಧ ಮಠಾಧೀಶರು, ಗಣ್ಯರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಗೌರವಿಸಲಾಯಿತು. ಇದೇ ವೇಳೆ ಹಲವು ಸ್ವಾಮೀಜಿಗಳನ್ನು ಬಿ.ವೈ. ವಿಜಯೇಂದ್ರ ಹಾಗೂ ಮತ್ತಿತರರು ಸನ್ಮಾನಿಸಿದರು.
ಮದಕರಿ ನಾಯಕ ಸ್ಮಾರಕ ನಿರ್ಮಾಣದ ಭರವಸೆ
ಚಿತ್ರದುರ್ಗವು ರಾಜ ಮದಕರಿ ನಾಯಕನ ವೀರ ಭೂಮಿ, ಇತ್ತೀಚೆಗಷ್ಟೇ ಕೆಲವು ದಿನಗಳ ಹಿಂದೆ ಕೆಲವರು ವಿವಾದ ಮಾಡಿದರು. ನಾನು ಇಲ್ಲಿ ಸ್ಮಾರಕ ನಿರ್ಮಿಸುವ ಬಗ್ಗೆ ಮಾತನಾಡಿದ್ದೆ. ಆದರೆ ಸ್ಮಾರಕ ನಿರ್ಮಾಣವಾಗಿಲ್ಲ ಎಂದು ಆದರೆ ನಾನು ವಿಧಾನಸಭೆ ಚುನಾವಣೆ ವೇಳೆ ಈ ಮಾತು ಹೇಳಿದ್ದೆ. ಸರ್ಕಾರ ರಚನೆಯಾಗಿದ್ದು ಕಾಂಗ್ರೆಸ್ ಪಕ್ಷದ್ದು, ಆದರೆ ಚಿಂತಿಸಬೇಡಿ ಮೋದಿ ಇದ್ದಾರೆ. ಈ ಸ್ಮಾರಕವನ್ನು ನಾವು ಖಂಡಿತವಾಗಿ ಇದೇ ಭೂಮಿಯಲ್ಲಿ ನಿರ್ಮಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ನಿರೀಕ್ಷೆ ಮೀರಿ ಬಂದ ಅಭಿಮಾನಿಗಳು
ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಚಿತ್ರದುರ್ಗಕ್ಕೆ ಲಗ್ಗೆ ಇಟ್ಟಿದ್ದರು. ಹರಿದು ಬಂದ ಜನಸಾಗರವನ್ನು ನಿಯಂತ್ರಿಸಲು ಪೊಲೀಸರು ಹಾಗೂ ಸ್ವಯಂಸೇವಕರು ಹರಸಾಹಸ ಪಡಬೇಕಾಯಿತು. ಬಿಎಸ್‌ವೈ ಪರವಾದ ಜಯಘೋಷಗಳು ದಶದಿಕ್ಕುಗಳಲ್ಲೂ ಮೊಳಗಿದವು.
ಊಟದ ವ್ಯವಸ್ಥೆ: 1,250 ಬಾಣಸಿಗರ ಕೈರುಚಿ
ಅಭಿಮಾನೋತ್ಸವಕ್ಕೆ ಆಗಮಿಸಿದ ಅತಿಥಿಗಳಿಗೆ ಭರ್ಜರಿ ಭೋಜನದ ರಸದೌತಣ ನೀಡಲಾಯಿತು. ಊಟದ ವ್ಯವಸ್ಥೆಯು ಅತ್ಯಂತ ವ್ಯವಸ್ಥಿತವಾಗಿದ್ದು, ಸುಮಾರು 1,250ಕ್ಕೂ ಹೆಚ್ಚು ಬಾಣಸಿಗರು ಅಹೋರಾತ್ರಿ ಶ್ರಮಿಸಿ ಲಕ್ಷಾಂತರ ಜನರಿಗೆ ರುಚಿಕರ ಅಡುಗೆ ಸಿದ್ಧಪಡಿಸಿದ್ದರು. ಬಾಯಲ್ಲಿಟ್ಟರೆ ಕರಗುವ ತಾಜಾ ಮೈಸೂರ್ ಪಾಕ್ ವಿಶೇಷ ಆಕರ್ಷಣೆಯಾಗಿತ್ತು.ಬಿಸಿಬಿಸಿ ಟೊಮೆಟೊ ಬಾತ್, ವೆಜ್ ಪಲಾವ್ ಹಾಗೂ ಘಮಘಮಿಸುವ ಮೆಂತ್ಯ ಪಲಾವ್ ಜನಮನ ಸೆಳೆಯಿತು.ಬಿಸಿಲಿಗೆ ತಂಪಾದ ಪಾನೀಯಗಳು ಹಾಗೂ ಜೀರ್ಣಕ್ಕೆ ಪೂರಕವಾದ ಮೊಸರನ್ನದ ವ್ಯವಸ್ಥೆ ಮಾಡಲಾಗಿತ್ತು.
ಪ.ಬಂಗಾಳದ ಫಲಿತಾಂಶ ರಾಜ್ಯದಲ್ಲೂ ರಿಪೀಟ್ : ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಕರ್ನಾಟಕದಲ್ಲಿ ಸಹ ಮುಂದಿನ ದಿನಗಳಲ್ಲಿ ಬಹುದೊಡ್ಡ ಗೆಲುವು ಸಿಗಲಿದೆ. ಪಶ್ಚಿಮ ಪಂಗಾಳದ ಫಲಿತಾಂಶ, ಕರ್ನಾಟಕದಲ್ಲಿ ರಿಪೀಟ್ ಆಗಲಿದೆ’ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಎಸ್‌ವೈ ಅಂಬಾಸಿಡರ್ ಕಾರಿನ ಮುಂದೆ ಫೋಟೋ ಕ್ಲಿಕ್
ಯಡಿಯೂರಪ್ಪ ಓಡಾಡಿದ ಅಂಬಾಸಿಡರ್ ಕಾರನ್ನು ಕಾರ್ಯಕ್ರಮದ ವೇದಿಕೆ ಮುಂಭಾಗ ಪ್ರದರ್ಶನಕ್ಕಿಡಲಾಗಿದೆ. ಆ ಕಾರಿನ ಮುಂಭಾಗ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ತಿದ್ದಾರೆ. ಯಡಿಯೂರಪ್ಪ ಅವರು ಓಡಾಡಿದ ಕಾರು ನೋಡುವುದೇ ಸಂತೋಷ. ಅದಕ್ಕಾಗಿಯೇ ನಾವೆಲ್ಲರೂ ಅದರ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದೇವೆ ಎಂದ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.
ಜನರಿಗೆ ಸೂಕ್ತ ಆರೋಗ್ಯ ಸೇವೆ ಸಿಗುವ ನಿಟ್ಟಿನಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ:
ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಯಾವುದೇ ಆರೋಗ್ಯ ಸಮಸ್ಯೆಯಾದ್ರೆ ಅವರಿಗೆ ಸೂಕ್ತ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಬಿಜೆಪಿ ಹೆಲ್ತ್ ಪ್ರಕೋಷ್ಟ ಕಡೆಯಿಂದ ಸುಮಾರು 30ಕ್ಕೂ ಹೆಚ್ಚು ಆಂಬ್ಯುಲೆನ್ಸ್?ಗಳನ್ನು ಆಯೋಜಕರು ವ್ಯವಸ್ಥೆ ಮಾಡಿದ್ದರು. ಕಾರ್ಯಕ್ರಮಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನೆಲೆಯಲ್ಲಿ ಅವರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ವೈದ್ಯರು, ನರ್ಸ್?ಗಳು ಸೇರಿ ಎಲ್ಲಾ ಆರೋಗ್ಯ ಸಿಬ್ಬಂದಿ ಕೆಲಸ ನಿರ್ವಹಿಸಿದರು.
ಪ್ರಮುಖ ನಾಯಕರಿಂದಲೂ ಟ್ಯಾಟೂ ಪ್ರದರ್ಶನ
ಬಿ. ಎಸ್. ಯಡಿಯೂರಪ್ಪ ಅಭಿಮಾನೋತ್ಸವದ ಹಿನ್ನೆಲೆ ಅಭಿಮಾನಿಯೋರ್ವ ಮೈ ತುಂಬಾ ಬಿಜೆಪಿ ನಾಯಕರ ಟ್ಯಾಟೂ ಹಾಕಿಸಿಕೊಂಡು ಕಾರ್ಯಕ್ರಮಕ್ಕೆ ಬಂದ ಘಟನೆ ನಡೆಯಿತು. ಕೊಪ್ಪಳ ಜಿಲ್ಲೆಯ ಕುಷ್ಟಗಿಯಿಂದ ಆಗಮಿಸಿರುವ ಭರತ್ ಎದೆ ಮೇಲೆ ಪ್ರಧಾನಿ ನರೇಂದ್ರ ಮೋದಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಟ್ಯಾಟೂ, ಬೆನ್ನ ಮೇಲೆ ಕಮಲದ ಹೂವು, ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಚಿವರಾದ ಸಿಟಿ ರವಿ, ಶ್ರೀರಾಮುಲು, ಜನಾರ್ದನರೆಡ್ಡಿ ಅಶ್ವತ್ಥ್ ನಾರಾಯಣ್ ಅವರ ಹಚ್ಚೆಯನ್ನು ಹಾಕಿಸಿಕೊಂಡು ಅಭಿಮಾನ ಮೆರೆದದ್ದು ಕಂಡುಬAತು.








