
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ತನ್ನ ಉದ್ಯಮಿ ಮಿತ್ರರ ರಕ್ಷಣೆಗೆ ತೋರುವ ಆತುರ, ಕಾಳಜಿ ಹಾಗೂ ಬದ್ಧತೆಯಲ್ಲಿ ಸ್ವಲ್ಪವಾದರೂ ದೇಶದ ಜನತೆಯ ಮೇಲೆ ತೋರಿಸಿದರೆ ಒಳ್ಳೆಯದು. ಸರ್ಕಾರ ತನ್ನ ಆಡಳಿತ ವೈಫಲ್ಯಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ತಲಾ 3 ರೂ. ಏರಿಕೆ ಮಾಡುವ ಮೂಲಕ ದೇಶದ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿದೆ. ಇದು ಬೆಲೆ ಏರಿಕೆಯಲ್ಲ, ಸಾಮಾನ್ಯ ಜನರ ದೈನಂದಿನ ಬದುಕಿನ ಮೇಲೆ ನಡೆಸಿದ ನೇರ ದಾಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಪೆಟ್ರೋಲ್, ಡೀಸೆಲ್ ದರ ತಲಾ 3 ರೂ. ಏರಿಕೆಯ ಜನವಿರೋಧಿ ನಡೆಯನ್ನು ನಾನು ಕಠಿಣವಾಗಿ ವಿರೋಧಿಸುತ್ತಿದ್ದೇನೆ. ತಕ್ಷಣವೇ ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು. ನಿರಂತರವಾಗಿ ಬೀಳುತ್ತಿರುವ ರೂಪಾಯಿ ಮೌಲ್ಯ, ಆರ್ಥಿಕ ನಿರ್ವಹಣೆಯ ವೈಫಲ್ಯ ಮತ್ತು ಸಾಮಾನ್ಯ ನಾಗರಿಕರ ಕುಟುಂಬಗಳನ್ನು ಸಂಕಷ್ಟಕ್ಕೆ ತಳ್ಳುತ್ತಿರುವುದರ ಹೊಣೆಯನ್ನು ಹೊತ್ತು ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಾವು ಅಂದುಕೊAಡAತೆ ಕೇಂದ್ರ ಸರ್ಕಾರ ತನ್ನ ವಿದೇಶಾಂಗ ನೀತಿಯ ವೈಫಲ್ಯ, ಕಳಪೆ ಆರ್ಥಿಕ ನಿರ್ವಹಣೆ ಮತ್ತು ಅಜಾಗರೂಕ ಹಣದುಬ್ಬರದ ನಿರ್ವಹಣೆಯ ಪರಿಣಾಮಗಳನ್ನು ಬಲವಂತವಾಗಿ ದೇಶದ ಜನತೆಯ ತಲೆಯ ಮೇಲೆ ಹೇರುತ್ತಿದೆ. ದೇಶದ ಜನತೆಯ ಹಿತಾಸಕ್ತಿಗಳನ್ನು ಕಾಪಾಡುವ ಬದಲು ಅವರಿಂದಲೇ ಹಣ ಕಿತ್ತುಕೊಂಡು ತನ್ನ ವೈಫಲ್ಯದ ನಷ್ಟ ಭರಿಸುತ್ತಿದೆ ಎಂದು ಟೀಕಾ ಪ್ರಹಾರ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀ. ಒಂದಕ್ಕೆ 106 ರೂ. ದಾಟಿದೆ. ಡೀಸೆಲ್ ದರವು 94 ರೂ. ಆಗಿದೆ. ಈ ಏರಿಕೆಯು ಕೇವಲ ಬಂಕ್‌ಗಳಿಗೆ ಸೀಮಿತಗೊಳ್ಳುವುದಿಲ್ಲ. ಇದರೊಂದಿಗೆ ಸಾರಿಗೆ ವೆಚ್ಚ, ತರಕಾರಿ, ಹಣ್ಣು, ಹಾಲು, ಸೇರಿದಂತೆ ಪ್ರತಿಯೊಂದು ದಿನಬಳಕೆ ವಸ್ತುಗಳ ದರ ಏರಿಕೆಯಾಗುತ್ತದೆ. ಇದರಿಂದ ಕಾರ್ಮಿಕರು, ರೈತರು, ಸಣ್ಣ ವ್ಯಾಪಾರಿಗಳು, ಮನೆಯ ಜವಾಬ್ದಾರಿ ಹೊತ್ತ ಮಹಿಳೆಯರು ಹಾಗೂ ಮಧ್ಯಮ ವರ್ಗದವರು ದೈನಂದಿನ ಬದುಕು ನಡೆಸುವುದು ಮತ್ತಷ್ಟು ದುಸ್ತರವಾಗಲಿದೆ.
ಅಂತಾರಾಷ್ಟಿçÃಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಕಡಿಮೆ ಇದ್ದಾಗ ಅದರ ಲಾಭವನ್ನು ಮೋದಿ ಸರ್ಕಾರ ಎಂದಿಗೂ ಜನತೆಗೆ ಬಿಟ್ಟುಕೊಡಲೇ ಇಲ್ಲ. ಆಗಲೂ ಜನತೆಯಿಂದ ದೊಡ್ಡ ಮೊತ್ತದ ತೆರಿಗೆಯನ್ನು ಸಂಗ್ರಹಿಸಿ ತನ್ನ ಬೊಕ್ಕಸವನ್ನು ತುಂಬಿಕೊAಡಿತ್ತು. ಇನ್ನು ದರ ಏರಿಕೆಯಾದಾಗ ಅದರ ಸಂಪೂರ್ಣ ಭಾರವನ್ನು ಜನಸಾಮಾನ್ಯರ ಮೇಲೆ ಹೊರಿಸಿ ಕೈತೊಳೆದುಕೊಳ್ಳುತ್ತಿದೆ. ಇದು ಆಡಳಿತ ನಡೆಸುವ ಕ್ರಮವಲ್ಲ, ಇದು ದೇಶದ ಜನತೆಯ ಮೇಲಿನ ಘೋರ ಶೋಷಣೆಯಾಗಿದೆ. ಮೋದಿ ಸರ್ಕಾರ ಹಣದುಬ್ಬರ ನಿಯಂತ್ರಣ ಮಾಡುವಲ್ಲಿ, ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತವನ್ನು ತಡೆಯುವಲ್ಲಿ, ದೇಶದ ಆರ್ಥಿಕ ನಿರ್ವಹಣೆಯಲ್ಲಿ ಹಾಗೂ ಒಟ್ಟಾರೆ ಸಾಮಾನ್ಯ ಜನರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.








