![]()
ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅನಾವಶ್ಯಕವಾಗಿ ಮಾತನಾಡಬಾರದು. ಅದಕ್ಕೆ ಬಾಯಿ ಚಪಲ ಅಂತಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಕುಮಾರಸ್ವಾಮಿ ರಾಜಕೀಯ ಬಾಂಬ್ ಇಡುವುದು ಸಹಜ. ಯಾಕೆ ಈ ತರಹದ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ರೈತರ ಆತ್ಮಹತ್ಯೆ ವಿಚಾರದಲ್ಲಿ ರಾಜಕೀಯ ದುರುದ್ದೇಶ ಬೇಡ. ಸತ್ಯಾಂಶ ತಿಳಿಯದೇ ಜನರಲ್ಲಿ ಗೊಂದಲ ಸೃಷ್ಟಿಸುವುದು ಖಂಡನೀಯ. ಆತ್ಮಹತ್ಯೆ ಪ್ರಕರಣ ಸಂಬಂಧ ಎಫ್ಐಆರ್ ಆಗುತ್ತದೆ. ಕುಮಾರಸ್ವಾಮಿ ಕೂಡ ಸಿಎಂ ಆಗಿದ್ದವರು. ಎಲ್ಲ ಆತ್ಮಹತ್ಯೆಯನ್ನು ರೈತರ ಆತ್ಮಹತ್ಯೆ ಅಂತಿದ್ದಾರೆ. ಇದು ತಪ್ಪು ಎಂದು ವಾಗ್ದಾಳಿ ನಡೆಸಿದರು.
ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗಿದೆ. ಇದಕ್ಕೆ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಕಾರಣ. ಅನಾವಶ್ಯಕವಾಗಿ ಕುಮಾರಸ್ವಾಮಿ ಮಾತನಾಡಬಾರದು. ಅದಕ್ಕೆ ಬಾಯಿ ಚಪಲ ಅಂತಾರೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಕುರಿತು ಕೆಲವು ಪತ್ರಿಕೆಗಳಲ್ಲಿ ಕುಮಾರಸ್ವಾಮಿ ನೀಡಿರುವ ಹೇಳಿಕೆಗಳು ವಾಸ್ತವಾಂಶಗಳಿಗೆ ದೂರವಾಗಿದ್ದು, ಜನರಲ್ಲಿ ಅನಗತ್ಯ ಗೊಂದಲ ಮತ್ತು ಆತಂಕ ಸೃಷ್ಟಿಸುವ ಪ್ರಯತ್ನವಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿ – ಅಂಶಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಎಫ್ಐಆರ್ ಹಾಗೂ ಪ್ರಕರಣಗಳ ಆಧಾರದ ಮೇಲೆ ಸಂಗ್ರಹವಾಗುತ್ತವೆ. ಇದರಲ್ಲಿ ರೈತರು, ಕೃಷಿ ಕೂಲಿ ಕಾರ್ಮಿಕರು ಹಾಗೂ ಕೃಷಿ ಚಟುವಟಿಕೆಗೆ ಸಂಬಂಧಿಸಿದ ವಿವಿಧ ವರ್ಗಗಳ ಆತ್ಮಹತ್ಯೆ ಪ್ರಕರಣಗಳು ಸೇರಿರುತ್ತವೆ. ಈ ವಿಧಾನ ಹೊಸದೇನಲ್ಲ, ಹಲವು ವರ್ಷಗಳಿಂದ ಇದೇ ಮಾನದಂಡದ ಆಧಾರದ ಮೇಲೆ ಎನ್ಸಿಆರ್ಬಿ ವರದಿಗಳು ಪ್ರಕಟವಾಗುತ್ತಿವೆ ಎಂದರು.
ಈ ವಾಸ್ತವಾಂಶಗಳ ಬಗ್ಗೆ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಕೇಂದ್ರ ಸಚಿವರಿಗೆ ಸಂಪೂರ್ಣ ಅರಿವು ಇರಬೇಕಾಗಿತ್ತು. ಆದರೂ ರಾಜಕೀಯ ಲಾಭಕ್ಕಾಗಿ ಜನರನ್ನು ತಪ್ಪು ದಾರಿಗೆಳೆಯುವ ರೀತಿಯಲ್ಲಿ ಹೇಳಿಕೆ ನೀಡಿರುವುದು ಅತ್ಯಂತ ವಿಷಾದನೀಯ. ಇನ್ನೊಂದೆಡೆ, ಕರ್ನಾಟಕ ಸರ್ಕಾರವು 2003ರಿಂದಲೇ ಪ್ರತ್ಯೇಕ ಮತ್ತು ಸ್ಪಷ್ಟ ಮಾನದಂಡದ ಆಧಾರದ ಮೇಲೆ ರೈತರ ಆತ್ಮಹತ್ಯೆ ಪ್ರಕರಣಗಳನ್ನು ದಾಖಲಿಸುತ್ತಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು, ಕೃಷಿ ಸಾಲಬಾಧೆ ಅಥವಾ ಕೃಷಿ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳನ್ನೇ ಸರ್ಕಾರ ರೈತರ ಆತ್ಮಹತ್ಯೆ ಎಂದು ಪರಿಗಣಿಸುತ್ತದೆ. ಈ ಮಾನದಂಡದ ಪ್ರಕಾರ 2023ರಲ್ಲಿ 1,090 ಹಾಗೂ 2024ರಲ್ಲಿ 1,032 ಪ್ರಕರಣಗಳು ದಾಖಲಾಗಿವೆ. ನಮ್ಮ ಸರ್ಕಾರ ಯಾವುದೇ ಮಾಹಿತಿಯನ್ನು ಮುಚ್ಚಿಟ್ಟಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ರೈತರ ಆತ್ಮಹತ್ಯೆಯಂತಹ ಸೂಕ್ಷ್ಮ ಮತ್ತು ದುಃಖಕರ ವಿಚಾರಗಳಲ್ಲಿ ರಾಜಕೀಯ ಮಾಡುವುದಕ್ಕಿಂತ ಸಂಕಷ್ಟದಲ್ಲಿರುವ ರೈತ ಕುಟುಂಬಗಳ ಜೊತೆ ನಿಲ್ಲುವುದು ಜನಪ್ರತಿನಿಧಿಗಳ ನೈತಿಕ ಜವಾಬ್ದಾರಿಯಾಗಿದೆ. ದುಃಖದಲ್ಲಿರುವ ಕುಟುಂಬಗಳ ನೋವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಪ್ರಯತ್ನಗಳನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ. 2023ರಲ್ಲಿ 1,090, 2024ರಲ್ಲಿ 1,032 ಹಾಗೂ 2025ರಲ್ಲಿ 644 ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದರು.
ರೈತರಿಗೆ ತೊಂದರೆಯಾಗದಂತೆ ಎಚ್ಚರವಹಿಸಿದ್ದೇವೆ: ರಸಗೊಬ್ಬರ ನಾವು ಖರೀದಿ ಮಾಡಲು ಆಗಲ್ಲ. ಕೇಂದ್ರ ಸರ್ಕಾರ ರಸಗೊಬ್ಬರ ಪೂರೈಕೆ ಮಾಡಬೇಕು. ಸಂಪೂರ್ಣ ಜವಾಬ್ದಾರಿ ಕೇಂದ್ರ ಸರ್ಕಾರದ್ದು. ಮೋದಿ ಅವರೇ ಈ ಬಗ್ಗೆ ಹೇಳಿದ್ದಾರೆ. ಕಡಿಮೆ ಬಳಕೆ ಮಾಡಲು ಹೇಳಿದ್ದಾರೆ. ಕೊರತೆಯಿದೆ ಎಚ್ಚರಿಕೆಯಿಂದ ನಿಭಾಯಿಸಿ ಅಂದಿದ್ದಾರೆ. ಕೇಂದ್ರದ ಮೇಲೆ ನಾವು ದೂರು ಹೇಳಲ್ಲ. ಕಳೆದ ಬಾರಿ ರಸಗೊಬ್ಬರ ಕಡಿಮೆಯಾಗಿತ್ತು. ಆಗ ಬಿಜೆಪಿಯವರು ವಿರೋಧ ಮಾಡಿದರು. ಸತ್ಯ ಗೊತ್ತಾಗಿ ಸುಮ್ಮನಾದರು. ಈ ಬಾರಿ ರಸಗೊಬ್ಬರ ಕಡಿಮೆ ಇದೆ. ಎಫ್ಐಡಿ ಮಾಡಿ ರಸಗೊಬ್ಬರ ಹಂಚಬೇಕಿದೆ. ಯಾರು ಕೂಡ ಸಂಗ್ರಹ ಮಾಡಬಾರದು. ಕಾಳಸಂತೆಯಲ್ಲಿ ಮಾರಾಟ ಮಾಡದಂತೆ ಎಚ್ಚರಿಕೆ ವಹಿಸಿದ್ದೇವೆ. ರೈತರಿಗೆ ತೊಂದರೆಯಾಗದಂತೆ, ಮುಂಗಾರಿಗೆ ಕೊರತೆಯಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.







