
ದಾವಣಗೆರೆ: ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇತ್ತೀಚೆಗೆ ಆಡಿರುವ ಮಾತುಗಳು ಹಾಗೂ ಜೋಶಿಯವರ ನಡೆ ಕೇವಲ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಸಚಿವ ಡಾ.ಎಂ.ಸಿ. ಸುಧಾಕರ್ ಟೀಕಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೇ ತಿಂಗಳುಗಳ ಹಿಂದೆ ಸಿದ್ದರಾಮಯ್ಯನವರ ಬಗ್ಗೆ ಏನೆಲ್ಲಾ ಮಾತನಾಡಿದ್ದರು, ಯಾವ ರೀತಿ ಸಂಬೋಧನೆ ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಇದ್ದಕ್ಕಿದ್ದಂತೆ ಮುಖ್ಯಮಂತ್ರಿಗಳ ಮೇಲೆ ಜೋಶಿಯವರು ಅನುಕಂಪ ಮತ್ತು ಕರುಣೆ ತೋರಿಸುತ್ತಿರುವುದು ಕೇವಲ ರಾಜಕೀಯ ದುರುದ್ದೇಶದಿಂದ ಮಾತ್ರ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷವು ಯಾವುದೇ ಕಾರಣಕ್ಕೂ ಸಿದ್ದರಾಮಯ್ಯನವರನ್ನು ಕೆಟ್ಟದಾಗಿ ನಡೆಸಿಕೊಂಡಿಲ್ಲ. ಕಳೆದ ಆರು ತಿಂಗಳಿAದಲೂ ಈ ಚರ್ಚೆ ನಡೆಯುತ್ತಿತ್ತು. ಸಿದ್ದರಾಮಯ್ಯನವರು ಮೊದಲಿನಿಂದಲೂ ಒಂದು ಮಾತನ್ನು ಸ್ಪಷ್ಟವಾಗಿ ಹೇಳುತ್ತಾ ಬಂದಿದ್ದಾರೆ. ರಾಹುಲ್ ಗಾಂಧಿಯವರು ಹಾಗೂ ಪಕ್ಷದ ಹೈಕಮಾಂಡ್ ಏನು ಸೂಚನೆ ನೀಡುತ್ತದೆಯೋ ಅದರಂತೆ ತಾವು ನಡೆದುಕೊಳ್ಳುವುದಾಗಿ ಅವರು ಹೇಳಿದ್ದರು. ಅದರಂತೆ ಸಿದ್ದರಾಮಯ್ಯನವರು ನಡೆದುಕೊಂಡಿದ್ದಾರೆ. ಆದರೆ, ಜೋಶಿಯವರು ನಿರೀಕ್ಷೆ ಮಾಡಿದ ರೀತಿಯಲ್ಲಿ ಯಾವುದೇ ಬೆಳವಣಿಗೆಗಳು ಆಗದ ಕಾರಣ, ಅವರು ಈಗ ಹತಾಶರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಹಿAದೆ ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡುವ ಸಂದರ್ಭದಲ್ಲಿ ನಿಮ್ಮ ಪಕ್ಷದಲ್ಲಿ ಏನೆಲ್ಲಾ ಒತ್ತಡಗಳಿದ್ದವು, ನೀವು ಏನೆಲ್ಲಾ ಮಾಡಿದ್ರಿ ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ. ಕೊನೆಗೆ ಯಡಿಯೂರಪ್ಪನವರು ಕಣ್ಣೀರು ಹಾಕುತ್ತಾ ರಾಜಭವನಕ್ಕೆ ಹೋಗಿ ರಾಜೀನಾಮೆ ನೀಡಬೇಕಾಯಿತು. ಆದರೆ ಸಿದ್ದರಾಮಯ್ಯನವರು ಆ ರೀತಿ ನಡೆದುಕೊಳ್ಳಲಿಲ್ಲ, ಆ ಪರಿಸ್ಥಿತಿಯೂ ಬರಲಿಲ್ಲ. ಕಾಂಗ್ರೆಸ್ ಹೈಕಮಾಂಡ್‌ಗೆ ಕೊಟ್ಟ ಮಾತಿನಂತೆ ಅವರು ನಡೆದುಕೊಂಡಿದ್ದಾರೆ ಎಂದು ಡಾ.ಎಂ.ಸಿ. ಸುಧಾಕರ್ ಭಾವುಕರಾಗಿ ಕಣ್ಣೀರು ಹಾಕಿದರು.
ಬಿಜೆಪಿಯವರ ಕನಸುಗಳು ನುಚ್ಚುನೂರಾಗಿರುವುದರಿಂದಲೇ ಅವರು ಸದ್ಯ ಹತಾಶರಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಕೇಂದ್ರ ಸಚಿವ ಜೋಶಿ ಅವರಿಗೆ ತಿರುಗೇಟು ನೀಡಿದರು.








