ನವದೆಹಲಿ:
58ನೇ ವಯಸ್ಸಿನಲ್ಲಿ ಬಾಲಿವುಡ್ ನಟ ಅರ್ಬಾಜ್ ಖಾನ್ ಮತ್ತೊಮ್ಮೆ ಅಪ್ಪನಾಗಿದ್ದಾರೆ. ನಟಿ ಮಲೈಕಾ ಅರೋರಾ ಅವರಿಗೆ ವಿಚ್ಛೇದನ ನೀಡಿದ ನಂತರ, ಅರ್ಬಾಜ್ ಖಾನ್ ಅವರು 2023ರ ಡಿಸೆಂಬರ್ ನಲ್ಲಿ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಶುರಾಖಾನ್ ಅವರನ್ನು ವಿವಾಹ ಆದರು. ಇದೀಗ ಈ ದಂಪತಿ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ಮುಂಬೈನ ಆಸ್ಪತ್ರೆಯಲ್ಲಿ ಅಕ್ಟೋಬರ್ 4 ರಂದು ಶೂರಾ ಖಾನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಈ ಮೂಲಕ 22 ವರ್ಷಗಳ ನಂತರ ಅರ್ಬಾಜ್ ಖಾನ್ ಮತ್ತೊಮ್ಮೆ ತಂದೆಯಾಗಿದ್ದಾರೆ. ಇದೀಗ ಖಾನ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದ್ದು ಫ್ಯಾನ್ಸ್ ಕೂಡ ಕಾಮೆಂಟ್ ಮೂಲಕ ಶುಭ ಹಾರೈಸುತ್ತಿದ್ದಾರೆ.
57 ವರ್ಷದ ಅರ್ಬಾಜ್ ಖಾನ್ ಅವರಿಗೆ ಇದು ಎರಡನೇ ಮಗು ಆಗಿದೆ. ಇದಾಗಲೇ ಅರ್ಬಾಜ್ ಖಾನ್ ಅವರಿಗೆ ಮಲೈಕಾರಿಂದ 22 ವರ್ಷದ ಮಗನಿದ್ದರೆ, ಶುರಾ ಖಾನ್ ಅವರಿಗೆ ಈಗಾಗಲೇ ಹಿಂದಿನ ಮದುವೆಯಿಂದ 10 ವರ್ಷದ ಮಗಳಿದ್ದಾಳೆ. ಈಗ ಇಬ್ಬರೂ ಮತ್ತೊಮ್ಮೆ ತಂದೆ- ತಾಯಿ ಆಗಿದ್ದಾರೆ. ಈ ಕುರಿತು ಮಾತನಾಡಿದ್ದ ಅರ್ಬಾಜ್, “ಇದು ನಮ್ಮಿಬ್ಬರ ಜೀವನದಲ್ಲಿಯೂ ಅತ್ಯಂತ ರೋಮಾಂಚಕಾರಿ ಸಮಯ.. ಮತ್ತೆ ತಂದೆಯಾಗುತ್ತಿರುವುದು ನನಗೆ ಹೊಸ ಅನುಭವ, ಖುಷಿ ಮತ್ತು ಜವಾಬ್ದಾರಿಯ ಹೊಸ ಅರಿವನ್ನು ನೀಡುತ್ತಿದೆ” ಎಂದು ಹೇಳಿದ್ದರು.
ಮಲೈಕಾ ಅರೋರಾ ಮತ್ತು ಅರ್ಬಾಜ್ 19 ವರ್ಷಗಳ ದಾಂಪತ್ಯ ನಡೆಸಿದ್ದು ನಂತರ ವಿಚ್ಛೇದನ ಪಡೆದರು. ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ವಿಚ್ಛೇದನದ ಹಿಂದಿನ ನಿಖರವಾದ ಕಾರಣ ಇಂದಿಗೂ ರಿವೀಲ್ ಆಗಿಲ್ಲ. ಆ ಬಳಿಕ ಡಿಸೆಂಬರ್ 2023 ರಲ್ಲಿ ಅರ್ಬಾಜ್ ಮೇಕಪ್ ಕಲಾವಿದೆ ಶುರಾಖಾನ್ ಅವರನ್ನು ವಿವಾಹವಾದರು. ಅರ್ಬಾಜ್ ಖಾನ್, ಈ ಹಿಂದೆ ಸಂದರ್ಶನ ವೊಂದರಲ್ಲಿ ತಮ್ಮ ಪತ್ನಿಯ ಗರ್ಭಧಾರಣೆಯನ್ನು ದೃಢ ಪಡಿಸಿದ್ದರು. ಮಗು ಜನನಕ್ಕೆ ಕೆಲವೇ ದಿನಗಳ ಮೊದಲು, ಖಾನ್ ಕುಟುಂಬವು ಶೂರಾ ಅವರಿಗಾಗಿ ಬೇಬಿ ಶೋವರ್ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಈ ಸಮಾರಂಭದಲ್ಲಿ ಅರ್ಬಾಜ್ ಸಹೋದರ ಸಲ್ಮಾನ್ ಖಾನ್, ಪುತ್ರ ಅರ್ಹಾನ್ ಖಾನ್, ಸಹೋದರ ಸೊಹೈಲ್ ಖಾನ್ ಸೇರಿದಂತೆ ಕುಟುಂಬದ ಸದಸ್ಯರು ಮತ್ತು ಆಪ್ತರು ಕೂಡ ಭಾಗವಹಿಸಿದ್ದರು.
ಶುರಾ ಖಾನ್ ಮೇಕಪ್ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಾರೆ. ಶುರಾ ಖಾನ್ ಮತ್ತು ಅರ್ಬಾಜ್ ಖಾನ್ ಅವರು ಪಾಟ್ನಾ ಶುಕ್ಲಾ ಸೆಟ್ ನಲ್ಲಿ ಭೇಟಿಯಾದರು. ಅಲ್ಲಿಂದ ಇವರ ನಡುವೆ ಪ್ರೀತಿ ಆಗಿತ್ತು ಎಂದು ಹೇಳಲಾಗುತ್ತಿದೆ. ಇದೀಗ ಮದುವೆಯಾಗಿ ಎರಡು ವರ್ಷಗಳ ನಂತರ ಶುರಾ ಖಾನ್ ಹೆಣ್ಣು ಮಗುಗೆ ಜನ್ಮ ನೀಡಿದ್ದು 22 ವರ್ಷಗಳ ನಂತರ ಅರ್ಬಾಜ್ ಖಾನ್ ಮತ್ತೊಮ್ಮೆ ತಂದೆಯಾಗಿದ್ದಾರೆ.








