ಸಂಘಟನೆಗಳು ಹೋರಾಟದ ಹಾದಿ ಹಿಡಿಯಬೇಕಾಗಿದೆ : ಬೊಮ್ಮಾಯಿ

ಬೆಂಗಳೂರು:

      ಕನ್ನಡ ಹೋರಾಟಗಾರನ್ನು ನಾವು ಬೆಂಬಲಿಸಬೇಕು. ಸರ್ಕಾರ ಸರಿಯಾಗಿ ಕಾನೂನು ಅನುಷ್ಠಾನ ಮಾಡದಿರುವುದಕ್ಕೆ ಕನ್ನಡಪರ ಸಂಘಟನೆಗಳು ಹೋರಾಟದ ಹಾದಿ ಹಿಡಿಯಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಹೇಳಿದ್ದಾರೆ.

     ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು  ಅವರ ನವೀಕೃತ ಸಭಾಂಗಣ ಹಾಗೂ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ಸುಮಾರು ಎರಡು ಸಾವಿರ ಕನ್ನಡ ಹೋರಾಟಗಾರರ ಪ್ರಕರಣಗಳನ್ನು ವಾಪಸ್ ಪಡೆದಿದ್ದೆವು. ನಾಮಫಲಕಗಳಲ್ಲಿ ಕಡ್ಡಾಯ ಕನ್ನಡ ಅನುಷ್ಠಾನ ಮಾಡದಿರುವುದರಿಂದ ಈ ಪರಿಸ್ಥಿತಿ ಬಂದಿದೆ. ಆಡಳಿತಗಾರರಿಗೆ ಸೂಕ್ಷ್ಮತೆ ಇರಬೇಕು ಎಂದಿದ್ದಾರೆ.

     ನಾವು ಕನ್ನಡದ ಅನುಷ್ಠಾನಕ್ಕಾಗಿ ವಿಧೇಯಕ ಜಾರಿಗೊಳಿಸಿದ್ದೆವು. ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು, ಕನ್ನಡನಾಡಿನಲ್ಲಿ ಕನ್ನಡದ ಅನುಷ್ಠಾನಕ್ಕಾಗಿ ಕಾನೂನು ಮಾಡುವ ಅನಿವಾರ್ಯತೆ ಬಂದಿರುವುದು ಬೇಸರದ ಸಂಗತಿ. ಈಗ ಕಾನೂನೂ ಮಾಡದಿದ್ದರೆ ನಮ್ಮ ಮಕ್ಕಳಿಗೆ ಕಷ್ಟವಾಗಲಿದೆ. ಈಗಲೂ ಕಾನೂನು ಅನುಷ್ಠಾನ ಮಾಡದಿದ್ದರೆ ಅದು ದುರ್ದೈವ.

    ಕನ್ನಡ ಅನುಷ್ಠಾನ ಆಗದಿದ್ದರಿಂದ ಕನ್ನಡ ಹೋರಾಟಗಾರರು ಪ್ರತಿಭಟನೆ ಮಾಡುತ್ತಿದ್ದಾರೆ. ಯಾವ ನಾಡಿನಲ್ಲಿ ಕಾನೂನು ಅನುಷ್ಠಾನ ಮಾಡುವ ವ್ಯವಸ್ಥೆ ಇರುತ್ತದೆಯೋ ಅಲ್ಲಿ ಈ ರೀತಿಯ ಪ್ರತಿಭಟನೆಗಳು ನಡೆಯುವುದಿಲ್ಲ. ಯಾವ ನಾಡಿನಲ್ಲಿ ಕಾನೂನು ಅನುಷ್ಠಾನ ಮಾಡುವುದಿಲ್ಲವೋ ಈ ರೀತಿಯ ಘಟನೆಗಳು ನಡೆಯುತ್ತವೆ ಎಂದು ಅವರು ಹೇಳಿದ್ದಾರೆ.

    ಕನ್ನಡದ ಉಳಿವಿಗೆ ಕನ್ನಡ ಸಾಹಿತ್ಯ ಪರಿಷತ್ತು  ಸಾಕಷ್ಟು ಶ್ರಮ ಹಾಕಿದೆ. ನಾನು ಸಿಎಂ ಆಗಿದ್ದಾಗ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ವಿಕೃತಗೊಳಿಸುವ ಪ್ರಯತ್ನ ಮಾಡಿದ್ದರು. ಬಳಿಕ ನನ್ನ ಅವಧಿಯಲ್ಲಿ ಸುವರ್ಣಸೌಧದ ಮುಂದೆ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಅಂಬೇಡ್ಕರ್ ಹಾಗೂ ಗಾಂಧಿಯವರ ಪ್ರತಿಮೆ ನಿಲ್ಲಿಸುವ ಕೆಲಸ ಮಾಡಿದ್ದೇನೆ ಎಂದರು.

   ಕನ್ನಡ ನಿತ್ಯ ನಿರಂತರವಾಗಿರಬೇಕು ಎಂದರೆ ಕನ್ನಡಿಗರು ಜಾಗೃತರಾಗಿರಬೇಕು. ಜಗತ್ತು ಬದಲಾಗುತ್ತಿದ್ದು, ಸವಾಲುಗಳನ್ನು ಎದುರಿಸಲು ನಮ್ಮ ಮಕ್ಕಳನ್ನು ಸಿದ್ಧಪಡಿಸಬೇಕಿದೆ. ಇಲ್ಲಿ ಐಟಿ ಬಿಟಿ ಯಾಕೆ ಅಭಿವೃದ್ಧಿಯಾಗಿದೆ ಎಂದರೆ, ಇಲ್ಲಿನ ಮಕ್ಕಳು ಜ್ಞಾನವಂತರಿದ್ದಾರೆ. ಸಾಧನೆ ಮಾಡಿದ್ದಾರೆ. ಅದೇ ಕಾರಣಕ್ಕೆ ಐಟಿ ಬಿಟಿಯವರು ಇಲ್ಲಿಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.

      ಕುವೆಂಪು ವಿಶ್ವಮಾನವ: ಕುವೆಂಪು ಅವರದ್ದು ಅಪರೂಪದ ವ್ಯಕ್ತಿತ್ವ, ಅವರು ಒಂದು ರೀತಿಯಲ್ಲಿ ಯುಗಪುರುಷರು. ಅವರನ್ನು ಆಳವಾಗಿ ನೋಡಿದಾಗ ಅತ್ಯಂತ ಮಾನವೀಯ ಗುಣಗಳಿರುವ ವ್ಯಕ್ತಿಯಾಗಿದ್ದಾರೆ. ವಿಸ್ತಾರವಾಗಿ ನೋಡಿದಾಗ ವಿಶ್ವ ಮಾನವರಾಗಿ ಕಾಣುತ್ತಾರೆ. ತಮ್ಮ ವಿಚಾರಧಾರೆಗಾಗಿ ಜಗತ್ತನ್ನು ಎದುರು ಹಾಕಿಕೊಳ್ಳುವ ಸ್ವಭಾವ ಅವರಲ್ಲಿತ್ತು. ಅವರು ಯಾವತ್ತೂ ಮುಲಾಜಿಗೆ ಬಿದ್ದು ಸಾಹಿತ್ಯ ರಚನೆ ಮಾಡಿಲ್ಲ ಎಂದಿದ್ದಾರೆ.

    ಕರ್ನಾಟಕದ ಏಕೀಕರಣ ಆಗಬೇಕು ಎಂದು ಉತ್ತರ ಕರ್ನಾಟಕ ಭಾಗದಲ್ಲಿ ಹೋರಾಟ ನಡೆಯುತ್ತಿದ್ದಾಗ, ದಕ್ಷಿಣ ಭಾಗದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಈ ಸಮಯದಲ್ಲಿ ಕನ್ನಡದ ಮನಸ್ಸುಗಳು ಒಂದಾಗಬೇಕು ಎಂದು ಕುವೆಂಪು ಅವರು ಮೊದಲು ನಿಲುವು ತೆಗೆದುಕೊಂಡಿದ್ದರು. ಅವರು ಆ ಕಾಲದಲ್ಲಿ ಏಕೀಕರಣಕ್ಕೆ ಒತ್ತು ಕೊಟ್ಟವರು.

    ಕುವೆಂಪು ಅವರ ನಿಲುವನ್ನು ಎಲ್ಲರೂ ಒಪ್ಪಿಕೊಂಡರು. ಈಗ ಕನ್ನಡದ ಮನಸ್ಸುಗಳು ಒಂದಾಗಿವೆ. ಒಂದಾಗುವ ಸಾಹಿತ್ಯವನ್ನೂ ರಚಿಸಿದ್ದಾರೆ. ಅದಕ್ಕಾಗಿ ಕುವೆಂಪು ಬಹಳ ಶ್ರೇಷ್ಠರಾಗಿದ್ದಾರೆ. ವೈಚಾರಿಕತೆಯನ್ನು ಬಹಳ ಸರಳವಾಗಿ ಯೋಚಿಸುವ ಗುಣ ಸಹ ಅವರಲ್ಲಿತ್ತು. ಎಲ್ಲವನ್ನೂ ಸ್ವೀಕರಿಸುವ ಗುಣ ಅವರಿಗೆ ಇದ್ದಿದ್ದರಿಂದ ಅವರು ವಿಶ್ವ ಮಾನವರಾಗಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

    ಕುವೆಂಪು ಅವರು ಜಗಜ್ಯೋತಿ ಬಸವಣ್ಣನವರ ವಿಚಾರಗಳನ್ನು ವೈಚಾರಿಕವಾಗಿ ವಿಮರ್ಶೆ ಮಾಡಿದ್ದಾರೆ. ಎಲ್ಲಿ ನೋಡಿದರೂ ಅವರ ಚಿಂತನೆ ಮತ್ತು ಸಾಹಿತ್ಯ ಇದೆ. ಹೀಗಾಗಿ ಈಗಲೂ ಕುವೆಂಪು ಜೀವಂತವಾಗಿದ್ದಾರೆ. ಅವರ ಸಾಹಿತ್ಯದಲ್ಲಿ ಎಲ್ಲದಕ್ಕೂ ಪರಿಹಾರ ಇದೆ ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap