ಕೋಲಾರ:
ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಬೆಳಗ್ಗೆ ಅನಾಮಧೇಯ ವ್ಯಕ್ತಿಯಿಂದ ಬಾಂಬ್ ಬೆದರಿಕೆ ಬಂದಿದ್ದು ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬೆಳಿಗ್ಗೆ ಸುಮಾರು 6 ಗಂಟೆಗೆ ಅನಾಮಧೇಯ ವ್ಯಕ್ತಿಯಿಂದ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಸುಮಾರು ಮೂರು ಗಂಟೆಗಳ ಬಳಿಕ ಈ ವಿಚಾರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ. ತಕ್ಷಣವೇ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ, ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರು ಪರಿಸ್ಥಿತಿಯ ನಿಗಾ ವಹಿಸಿ, ತಪಾಸಣಾ ಕಾರ್ಯವನ್ನು ಮೇಲ್ವಿಚಾರಣೆ ನಡೆಸಿದರು. ಕೆಲ ಗಂಟೆಗಳ ಪರಿಶೀಲನೆಯ ನಂತರ ಯಾವುದೇ ಬಾಂಬ್ ಅಥವಾ ಸ್ಫೋಟಕ ವಸ್ತು ಪತ್ತೆಯಾಗಿರಲಿಲ್ಲ. ಜಿಲ್ಲಾಧಿಕಾರಿ ಕಚೇರಿಯ ಎಲ್ಲಾ ಸಿಬ್ಬಂದಿಯನ್ನು ತುರ್ತಾಗಿ ಹೊರಗೆ ಕಳುಹಿಸಿ, ಇಂಚಿಂಚೂ ಪರಿಶೀಲನೆ ನಡೆಸಲಾಯಿತು. ಕಚೇರಿಯ ವಿವಿಧ ವಿಭಾಗಗಳು, ಕೊಠಡಿಗಳು, ವಿ.ಸಿ ಚೇಂಬರ್ ಸೇರಿದಂತೆ ಸಂಪೂರ್ಣ ಜಿಲ್ಲಾಡಳಿತ ಭವನವನ್ನು ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ತಜ್ಞರು ತಪಾಸಣೆ ನಡೆಸಲಾಗಿದೆ.
ಘಟನೆಯ ತನಿಖೆ ನಡೆಸಿದ ಪೊಲೀಸರಿಗೆ ಶಾಕಿಂಗ್ ವಿಷಯವೊಂದು ಕಾದಿತ್ತು. ಈ ಬಾಂಬ್ ಬೆದರಿಕೆ ಇಮೇಲ್ ತಮಿಳುನಾಡಿನ ಮೈಲಾಪುರದ 13 ವರ್ಷದ ಬಾಲಕಿ ಎಂದು ತಿಳಿದು ಬಂದಿದೆ. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಉಂಟಾಗಿದ್ದು, ಅದನ್ನು ಬಹಿರಂಗಪಡಿಸುವ ಉದ್ದೇಶದಿಂದ ಬಾಂಬ್ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ. ಮೇಲ್‌ನಲ್ಲಿ ಬಾಲಕಿ ಮೊದಲಿಗೆ ‘ಆರ್‌ಡಿಎಕ್ಸ್’ ಎಂಬ ಪದ ಬಳಸಿದ್ದು, ನಂತರ ತನಗಾಗಿರುವ ಅನ್ಯಾಯವನ್ನು ವಿವರವಾಗಿ ಬರೆದಿದ್ದಾಳೆ. ಎಲ್ಲರ ಗಮನ ಸೆಳೆಯಲು ಈ ರೀತಿ ಮಾಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಇ-ಮೇಲ್ ಮೂಲಕ ಬೀದರ್ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಮೆಸೇಜ್ ಬಂದಿದ್ದು, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ನಡೆಸಲಾಗುತ್ತಿದೆ. ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ತಪಾಸಣೆ ಮಾಡಲಾಗಿದೆ. ಡಿಸಿ ಕಚೇರಿಯ ಸಿಬ್ಬಂದಿಯನ್ನು ಹೊರಗಡೆ ಕಳಿಸಿ, ಪೊಲೀಸರು ಕಚೇರಿಯನ್ನ ಸಂಪೂರ್ಣವಾಗಿ ಪರಿಶೀಲನೆ ನಡೆಸಲಾಗಿದೆ.








