ಮುಂಬೈ:
ಮುಂಬೈನಿಂದ ನ್ಯೂಯಾರ್ಕ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನದ ಶೌಚಾಲಯದಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆಯಾದ ನಂತರ ವಿಮಾನ ವಾಪಸ್ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
320ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಸೋಮವಾರ ಮುಂಬೈನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಭದ್ರತಾ ಸಂಸ್ಥೆಗಳು ಕಡ್ಡಾಯ ತಪಾಸಣೆಗೆ ಒಳಪಡಿಸಿದವು ಎಂದು ಅವರು ಹೇಳಿದ್ದಾರೆ.”ವಿಮಾನದಲ್ಲಿ ಬಾಂಬ್ ಇದೆ” ಎಂಬ ಸಂದೇಶವಿರುವ ಪತ್ರವನ್ನು ಶೌಚಾಲಯದೊಳಗೆ ಪ್ರಯಾಣಿಕರೊಬ್ಬರು ಗಮನಿಸಿದ್ದು, ನಂತರ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ ಎಂದು ಸಹಾರ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ನಂತರ ವಿಮಾನವು ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅವರು ಹೇಳಿದರು.
ಇಲ್ಲಿಯವರೆಗೆ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ ಮತ್ತು ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಈ ಘಟನೆಗೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.ಮುಂಬೈಗೆ ವಾಪಸ್ ಬಂದ ಬೋಯಿಂಗ್ 777-300 ಇಆರ್ ವಿಮಾನದಲ್ಲಿ 19 ಸಿಬ್ಬಂದಿ ಸೇರಿದಂತೆ 322 ಜನ ಪ್ರಯಾಣಿಸುತ್ತಿದ್ದ ಎಂದು ಮೂಲವೊಂದು ತಿಳಿಸಿದೆ.
“ಸೋಮವಾರ ಮುಂಬೈನಿಂದ ನ್ಯೂಯಾರ್ಕ್(ಜೆಎಫ್‌ಕೆ)ಗೆ ಹಾರಾಟ ನಡೆಸುತ್ತಿದ್ದ ಎಐ119 ವಿಮಾನದಲ್ಲಿ ಸಂಭಾವ್ಯ ಭದ್ರತಾ ಬೆದರಿಕೆ ಪತ್ರ ಪತ್ತೆಯಾಗಿದೆ. ಅಗತ್ಯ ಶಿಷ್ಟಾಚಾರಗಳನ್ನು ಅನುಸರಿಸಿದ ನಂತರ, ಎಲ್ಲರ ಸುರಕ್ಷತೆ ಮತ್ತು ಭದ್ರತೆಯ ಹಿತದೃಷ್ಟಿಯಿಂದ ವಿಮಾನವು ಮುಂಬೈಗೆ ಮರಳಿದೆ” ಎಂದು ಏರ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
ಮಂಗಳವಾರ ಬೆಳಗ್ಗೆ 5 ಗಂಟೆಗೆ ವಿಮಾನದ ಕಾರ್ಯಾಚರಣೆಯನ್ನು ಮರು ನಿಗದಿಪಡಿಸಲಾಗಿದ್ದು, ಅಲ್ಲಿಯವರೆಗೆ ಎಲ್ಲಾ ಪ್ರಯಾಣಿಕರಿಗೆ ಹೋಟೆಲ್ ವಸತಿ, ಊಟ ಮತ್ತು ಇತರ ಸಹಾಯವನ್ನು ನೀಡಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ.
