ಮುಂಬೈ:
ಮೃತ ಪತ್ನಿಯ ಮೇಲಿನ ಕ್ರೌರ್ಯಕ್ಕಾಗಿ ವ್ಯಕ್ತಿ ಮತ್ತು ಆತನ ಕುಟುಂಬಕ್ಕೆ ಶಿಕ್ಷೆ ವಿಧಿಸಿದ್ದ 20 ವರ್ಷಗಳ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ ಇದೀಗ ರದ್ದುಗೊಳಿಸಿದೆ. ಸೊಸೆಗೆ ಟಿವಿ ವೀಕ್ಷಿಸಲು, ನೆರೆಹೊರೆಯವರನ್ನು ಭೇಟಿ ಮಾಡಲು, ದೇವಸ್ಥಾನಕ್ಕೆ ಒಂಟಿಯಾಗಿ ಹೋಗುವುದು ಮತ್ತು ಕಾರ್ಪೆಟ್ ಮೇಲೆ ಮಲಗಲು ಅವಕಾಶ ನೀಡದಿರುವುದು ಇವೆಲ್ಲ IPC ಸೆಕ್ಷನ್ 498A ಅಡಿಯಲ್ಲಿ ಕ್ರೌರ್ಯ ಎಂದೆಸಿಕೊಳ್ಳುವುದಿಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.
ಯಾವುದೇ ಶಿಕ್ಷೆಯಾಗಬೇಕೆಂದರೆ, ಅಪರಾಧ ದೈಹಿಕ ಇಲ್ಲ ಮಾನಸಿಕ ಕಿರುಕುಳ ಆಗಿರಬೇಕು. ಸೊಸೆಗೆ ಹೊರಗಡೆ ಒಬ್ಬಳೆ ಹೋಗದೆ ಬಿಡದಿರುವುದು ತೀವ್ರತರನಾದ ಅಪರಾಧ ಎಂದೆನಿಸಿಕೊಳ್ಳುವುದಿಲ್ಲ ಎಂದು ಹೇಳಿದೆ. ನ್ಯಾಯ ಮೂರ್ತಿ ಅಭಯ್ ಎಸ್ ವಾಘ್ವಾಸೆ ಅವರ ಏಕಸದಸ್ಯ ಪೀಠವು ಈ ತೀರ್ಪನ್ನು ನೀಡಿದೆ.
2002ರ ಮೇ 1ರಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಘಟನೆಯ ನಂತರ ಮಹಿಳೆಯ ಪೋಷಕರು ಗಂಡ ಹಾಗೂ ಆತನ ಮನೆಯವರ ವಿರುದ್ದ ದೂರು ದಾಖಲಿಸಿದ್ದರು. ಮೃತ ಮಹಿಳೆಯ ಸ್ವಾತಂತ್ರ್ಯವನ್ನು ಆಕೆಯ ಪತಿ ಹಾಗೂ ಮನೆಯವರು ಕಿತ್ತುಕೊಂಡಿದ್ದಾರೆ. ಆಕೆಗೆ ಟಿ.ವಿ. ನೋಡಲು ಬಿಡುವುದಿಲ್ಲ, ಮಧ್ಯರಾತ್ರಿ ಆಕೆಗೆ ನೀರು ತರಲು ಹೇಳುತ್ತಾರೆ ಹಾಗೂ ದೇವಸ್ಥಾನಕ್ಕೆ ಕೂಡ ಒಬ್ಬಳೆ ಹೋಗಲು ಬಿಡುವುದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ದೂರಿನ ಅನ್ವಯ ಮೃತ ಮಹಿಳೆಯ ಪತಿ ಹಾಗೂ ಕುಟುಂಬದವರಿಗೆ ಶಿಕ್ಷೆಯನ್ನ ಕೂಡಾ ವಿಧಿಸಲಾಗಿತ್ತು. ಇದೀಗ ಸುದೀರ್ಘ ವರ್ಷಗಳ ವಿಚಾರಣೆ ನಡೆಸಿದ ಬಾಂಬೆ ಹೈ ಕೋರ್ಟನ ಔರಂಗಾಬಾದ್‌ನ ಏಕ ಸದಸ್ಯ ಪೀಠ ಇಂತಹ ಪ್ರಕರಣಗಳು ಕ್ರೌರ್ಯ ಎನಿಸಿಕೊಳ್ಳುವುದಿಲ್ಲ. ಆಕೆಯ ಆತ್ಮಹತ್ಯೆಗೆ ನಿಖರ ಕಾರಣ ಹಾಗೂ ಪುರಾವೆ ಇಲ್ಲದ ಕಾರಣ ಕೇಸ್ ಅನ್ನು ರದ್ದು ಗೊಳಿಸಲಾಗಿದೆ ಎಂದು ಹೇಳಿದೆ.
ಪತಿ ಸಾವಿನ ನಂತರವೂ ಪತ್ನಿ ವಿಚ್ಛೇದನ ಪಡೆಯಬಹುದು ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ್ ಹೆಗ್ಡೆ ಅವರ ಪೀಠವು ಇತ್ತೀಚೆಗೆ ಈ ಆದೇಶವನ್ನು ಹೊರಡಿಸಿದ್ದಾರೆ. ಈ ಹಿಂದೆ ಜೋಡಿಯೊಂದು ವಿಚ್ಛೇದನ ಕೋರಿ ಕೋರ್ಟ್ ಮೊರೆ ಹೋಗಿತ್ತು. ಕೌಟುಂಬಿಕ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತ್ತು. ಕೌಟುಂಬಿಕ ನ್ಯಾಯಲಯದ ನೀಡಿದ್ದ ವಿಚ್ಛೇದನದ ತೀರ್ಪನ್ನು ಪ್ರಶ್ನಿಸಿ ಮಹಿಳೆಯ ಪತಿ ಹೈ ಕೋರ್ಟ್ ಮಟ್ಟಿಲೇರಿದ್ದರು. ಆದರೆ ತೀರ್ಪು ಬರುವ ಮೊದಲೇ ಆತ ಮೃತ ಪಟ್ಟಿದ್ದರು. ಇದೀಗ ಹೈ ಕೋರ್ಟ್ ವ್ಯಕ್ತಿ ಬದುಕಿಲ್ಲದಿದ್ದರೂ ಪತ್ನಿ ವಿಚ್ಛೇದನ ಪಡೆಯಬಹುದು ಎಂದು ತೀರ್ಪು ನೀಡಿದೆ.