ಸಂಪುಟ ರಚನೆಯ ಬಿಸಿಬಿಸಿ ಸುದ್ದಿ: ಬೊಮ್ಮಾಯಿ ಸೇಫ್, 6 ಸಚಿವರು ಔಟ್, 9 ಇನ್?

ಸಂಪುಟ ರಚನೆಯ ಬಿಸಿಬಿಸಿ ಸುದ್ದಿ: ಬೊಮ್ಮಾಯಿ ಸೇಫ್, 6 ಸಚಿವರು ಔಟ್, 9 ಇನ್?

   ಜನವರಿ 28ರ ದಿನಾಂಕ ಬಸವರಾಜ ಬೊಮ್ಮಾಯಿಯವರಿಗೆ ಮಹತ್ವದ ದಿನ. ಅಂದು ಅವರು 62ನೇ ವಸಂತಕ್ಕೆ ಕಾಲಿಡುತ್ತಿರುವುದು ಒಂದು ಕಡೆಯಾದರೆ, ಮುಖ್ಯಮಂತ್ರಿಯಾಗಿ ಆರು ತಿಂಗಳು ಪೂರ್ಣಗೊಳಿಸುತ್ತಿರುವುದು ಇನ್ನೊಂದು ಕಡೆ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಸಿಎಂ ಈಗಾಗಲೇ ಹೇಳಿದ್ದಾರೆ.

ಜೊತೆಗೆ, ಆಡಳಿತದ ಪಕ್ಷಿನೋಟ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.

ರಾಜ್ಯದ ಬದಲಾದ ರಾಜಕೀಯದಲ್ಲಿ ಯಡಿಯೂರಪ್ಪನವರ ನಿರ್ಗಮನದ ನಂತರ, ರಾಜಕೀಯ ವಿಶ್ಲೇಷಕರ ಲೆಕ್ಕಾಚಾರವನ್ನೂ ಮೀರಿ ಬೊಮ್ಮಾಯಿಯವರಿಗೆ ಸಿಎಂ ಪಟ್ಟ ಒಲಿದಿತ್ತು. ಆದರೆ, ಬಿಟ್ ಕಾಯಿನ್ ಸದ್ದು ಮಾಡುತ್ತಿದ್ದಂತಹ ಸಂದರ್ಭದಲ್ಲಿ ಅವರ ತಲೆದಂಡವಾಗಲಿದೆ ಎನ್ನುವ ಸುದ್ದಿಯೂ ಹರಿದಾಡಲಾರಂಭಿಸಿತು.

ಹೊಸ ಮುಖ್ಯಮಂತ್ರಿಯ ವಿಚಾರ ಸದ್ದು ಮಾಡುತ್ತಿರುವಂತಹ ಈ ಸಂದರ್ಭದಲ್ಲಿ, ಜಿಲ್ಲಾ ಉಸ್ತುವಾರಿಯನ್ನು ಬೊಮ್ಮಾಯಿಯವರು ಹೈಕಮಾಂಡ್ ಒಪ್ಪಿಗೆಯನ್ನು ಪಡೆದು ಪ್ರಕಟಿಸಿದ್ದರು. ಇದು, ಕೆಲವೊಂದು ಅಸಮಾಧಾನಕ್ಕೆ ಕಾರಣವಾಯಿತು. ಇದರ ಜೊತೆಗೆ, ಸಂಪುಟ ವಿಸ್ತರಣೆ/ಪುನರ್ ರಚನೆಯ ಸುದ್ದಿ ಮತ್ತೆ ರಾಜ್ಯ ರಾಜಕೀಯದಲ್ಲಿ ಜೋರಾಗಿ ಬೀಸಲು ಕಾರಣವಾಯಿತು.

ಮುಖ್ಯಮಂತ್ರಿ ಬದಲಾವಣೆಯ ಸುದ್ದಿ ಪಕ್ಷದೊಳಗೆ ಮತ್ತು ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗುತ್ತಿರುವ ವಿಚಾರವನ್ನು ಅರಿತ ಬಿಜೆಪಿಯ ಪ್ರಮುಖರು, ಈ ವಿಚಾರದಲ್ಲಿ ಸ್ಪಷ್ಟ ನಿಲುವನ್ನು ತಾಳಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರ ಮೂಲಕ ಸಿಎಂ ಬೊಮ್ಮಾಯಿವರಿಗೂ ಸಂದೇಶ ರವಾನೆಯಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಬೊಮ್ಮಾಯಿ ಸೇಫ್, 6 ಸಚಿವರು ಔಟ್ 9 ಇನ್? ಯಾರೆಲ್ಲಾ ಸೇಫ್?

ಕರ್ನಾಟಕ ರಾಜಕೀಯದ ವಿಚಾರದಲ್ಲಿ ಕೈಹಾಕಲು ಬಿಜೆಪಿ ವರಿಷ್ಠರ ನಿರ್ಧಾರ
   ಪಂಚ ರಾಜ್ಯಗಳ ಚುನಾವಣೆ ಮುಗಿದ ನಂತರವಷ್ಟೇ, ಕರ್ನಾಟಕ ರಾಜಕೀಯದ ವಿಚಾರದಲ್ಲಿ ಕೈಹಾಕಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ. ಇದಲ್ಲದೇ, ಸದ್ಯದ ಮಟ್ಟಿಗೆ ಮುಖ್ಯಮಂತ್ರಿ ಸ್ಥಾನದಿಂದ ಬಸವರಾಜ ಬೊಮ್ಮಾಯಿಯವರನ್ನು ಕೆಳಗಿಳಿಸುವ ಯೋಚನೆಯನ್ನು ಕೈಬಿಟ್ಟಿದ್ದಾರೆ.

ಸಚಿವ ಸ್ಥಾನವನ್ನು ಅನುಭವಿಸಿದ ಕೆಲವು ಸಚಿವರನ್ನು ಕೈಬಿಡುವ ನಿರ್ಧಾರಕ್ಕೂ ಹೈಕಮಾಂಡ್ ಬಂದಿದೆ ಎನ್ನುವ ಸುದ್ದಿಯನ್ನು ವಿಶ್ವವಾಣಿ ಪತ್ರಿಕೆಯೂ ವರದಿ ಮಾಡಿವೆ. ಇದೆಲ್ಲವೂ, ಮಾರ್ಚ್ ಹತ್ತರ ನಂತರ ವೇಗ ಪಡೆದುಕೊಳ್ಳಲಿದೆ. ಅಂದು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.

ಮುಖ್ಯಮಂತ್ರಿಗಳೂ ನಿಟ್ಟುಸಿರು ಬಿಡುವಂತಾಗಿದೆ ಎನ್ನುವ ಸುದ್ದಿ

ಸಿಎಂ ಬದಲಾವಣೆ ಎನ್ನುವ ಸುದ್ದಿಯು ವಿರೋಧ ಪಕ್ಷಗಳಿಗೂ ಆಹಾರವಾಗುತ್ತಿರುವುದರಿಂದ, ಸಂಘ ಪರಿವಾರದ ಮುಖಂಡರ ಮೂಲಕ, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆಯಿಲ್ಲ ಎನ್ನುವ ಸಂದೇಶವನ್ನು ಸಿಎಂ ಬೊಮ್ಮಾಯಿಯವರಿಗೆ ವರಿಷ್ಠರು ರವಾನಿಸಿದ್ದಾರೆ.

ಜೊತೆಗೆ, ಮಾರ್ಚ್ ಹತ್ತರ ನಂತರ ದೆಹಲಿಗೆ ಮಾತುಕತೆಗೆ ಬರಲು ದಿನಾಂಕ ನಿಗದಿ ಪಡಿಸಲಾಗುವುದು ಎನ್ನುವ ಸುದ್ದಿಯೂ ಬೊಮ್ಮಾಯಿಗೆ ಬಂದಿದೆ. ಇದರಿಂದ, ಮುಖ್ಯಮಂತ್ರಿಗಳೂ ನಿಟ್ಟುಸಿರು ಬಿಡುವಂತಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಕೆ.ಎಸ್.ಈಶ್ವರಪ್ಪ ಕೊಕ್ ಸಾಧ್ಯತೆ

ಈಗಿರುವ ಸಚಿವ ಸಂಪುಟದಿಂದ ಆರು ಅಥವಾ ಐವರು ಸಚಿವರು ಹೊರಗೆ ಹೋಗುವುದು ನಿಶ್ಚಯ. ಅಲ್ಲದೇ, ಎಂಟರಿಂದ ಒಂಬತ್ತು ಶಾಸಕರು ಸಂಪುಟಕ್ಕೆ ಸೇರಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಸಚಿವ ಸ್ಥಾನ ಅನುಭವಿಸಿದ್ದು,

ಇಲಾಖೆಯ ಕಳಪೆ ಕಾರ್ಯ ನಿರ್ವಹಣೆಯನ್ನು ಆಧರಿಸಿ ಕೆಲವರಿಗೆ ಕೊಕ್ ನೀಡಲಾಗುವುದು ಎನ್ನುವ ಸುದ್ದಿ ವೇಗವನ್ನು ಪಡೆದುಕೊಳ್ಳುತ್ತಿದೆ. ಅವರು ಯಾರೆಂದರೆ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಕೆ.ನಾರಾಯಣ ಗೌಡ, ಪ್ರಭು ಚೌಹಾಣ್, ಬಿ.ಸಿ.ಪಾಟೀಲ್ ಅಥವಾ ಕೆ.ಎಸ್.ಈಶ್ವರಪ್ಪ ಎಂದು ಹೇಳಲಾಗುತ್ತಿದೆ.

ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಒಬ್ಬರು

ಇನ್ನು, ಉತ್ಸಾಹೀ ಮುಖಂಡರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಒಂಬತ್ತು ಜನರಿಗೆ ಲಕ್ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ, ವರಿಷ್ಠರ ಎಲ್ಲಾ ಆಫರ್ ಗಳನ್ನು ತಿರಸ್ಕರಿಸಿ ಕೂತಿರುವ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಒಬ್ಬರು.

ಇನ್ನು, ಬಸನಗೌಡ ಪಾಟೀಲ್ ಯತ್ನಾಳ್, ಪಿ. ರಾಜೀವ್, ಎಸ್.ಎ.ರಾಮದಾಸ್, ಪೂರ್ಣಿಮಾ ಶ್ರೀನಿವಾಸ್, ಅರವಿಂದ್ ಬೆಲ್ಲದ್, ಅರವಿಂದ ಲಿಂಬಾವಳಿ, ಎನ್.ರವಿಕುಮಾರ್, ಎಂ.ಪಿ.ರೇಣುಕಾಚಾರ್ಯ ಅವರ ಹೆಸರು ಕೇಳಿ ಬರುತ್ತಿದೆ. ಕೆಲವು ದಿನಗಳಲ್ಲಿ ಇದಕ್ಕೆ ಸ್ಪಷ್ಟ ಚಿತ್ರಣ ಸಿಕ್ಕರೂ ಸಿಗಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ