ಬೆಂಗಳೂರು
ಕರ್ನಾಟಕದಲ್ಲಿ ಪಕ್ಷ ಮರಳಿ ಅಧಿಕಾರಕ್ಕೆ ಬಂದರೆ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇಂದು ಘೋಷಿಸಿದ್ದಾರೆ.
ಶಿಗ್ಗಾವಿಯಲ್ಲಿಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಉಪಸ್ಥಿತರಿದ್ದ ಜೆ.ಪಿ.ನಡ್ಡಾ ಅವರು ತದನಂತರ ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಮಾತನಾಡಿ ಈ ವಿಷಯ ಪ್ರಕಟಿಸಿದರು. ಬೊಮ್ಮಾಯಿ ಇವತ್ತು ಕೇವಲ ಶಾಸಕ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಕೆ ಮಾಡಿಲ್ಲ,ಬದಲಿಗೆ ಈ ರಾಜ್ಯವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುವ ಮಹತ್ವದ ಜವಾಬ್ದಾರಿ ಹೊರಲು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದಿದ್ದಾರೆ.
ಆ ಮೂಲಕ ಇತ್ತೀಚಿನ ಬೆಳವಣಿಗೆಗಳಿಂದ ಆಕ್ರೋಶಗೊಂಡಿರುವ ಲಿಂಗಾಯತ ಸಮುದಾಯದ ಆಕ್ರೋಶವನ್ನು ತಣಿಸುವ ವಿದ್ಯುಕ್ತ ಪ್ರಯತ್ನ ಮಾಡಿದರು. ಬೊಮ್ಮಾಯಿಗೆ ಮತ್ತೆ ಐದು ವರ್ಷಗಳ ಕಾಲ ಅವಕಾಶ ಸಿಗಲಿದೆ. ಕಾಂಗ್ರೆಸ್ ಅಂದ್ರೆ ಕಮಿಷನ್, ಕಾಂಗ್ರೆಸ್ ಪಕ್ಷ ಅಂದ್ರೆ ಭ್ರಷ್ಟಾಚಾರ ಎಂದವರು ನೇರವಾಗಿ ಆರೋಪಿಸಿದರು.
ರೈಲುಗಳ ಸಂಚಾರ ಹೆಚ್ಚಳ ಆಗಬೇಕಾದರೆ ಬಿಜೆಪಿಗೆ ಮತ ಕೊಡಿ ಎಂದ ಅವರು,ಆಯುಷ್ಮಾನ್ ಭಾರತ್ ಯೋಜನೆಯಡಿ ಬಡವರಿಗೆ ಅನುಕೂಲವಾಗಿದೆ. ಬೊಮ್ಮಾಯಿ ಅವರಿಂದ ರಾಜ್ಯದಲ್ಲಿ ಅಪರಾಧ ಪ್ರಕರಣ ಕಡಿಮೆ ಆಗಿದೆ. ಕರ್ನಾಟಕದಲ್ಲಿರುವ ಅನೇಕ ಕ್ರಿಮಿನಲ್ಗಳು ಜೈಲಿನಲ್ಲಿದ್ದಾರೆ ಎಂದು ವಿವರಿಸಿದರು.
ಇಲ್ಲೇ ಮಣ್ಣು ಮಾಡಿ
ಇದೇ ಸಂದರ್ಭದಲ್ಲಿ ಭಾವೋದ್ವೇಗದಿಂದ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು,ಮತ್ತೆ ನಿಮ್ಮ ಸೇವೆ ಮಾಡುವ ಅವಕಾಶವನ್ನು ನನಗೆ ಕೊಡಿ ಎಂದು ಜನತೆಯಲ್ಲಿ ಮನವಿ ಮಾಡಿಕೊಂಡರು. ನನ್ನ ಸಾವು ಆದರೆ ಶಿಗ್ಗಾಂವಿಯಲ್ಲೇ ಮಣ್ಣು ಮಾಡಬೇಕು ಎಂದ ಅವರು,ನೀವು ನನಗೆ ಸತತ ಹದಿನೈದು ವರ್ಷ ಆಶೀರ್ವಾದ ಮಾಡಿದ್ದೀರಿ.ಹೀಗಾಗಿ ನನ್ನ ಮತ್ತು ನಿಮ್ಮ ನಡುವೆ ಯಾವ ಶಕ್ತಿಯೂ ಮಧ್ಯೆ ಬರಲು ಸಾಧ್ಯವಿಲ್ಲ ಎಂದರು.
ಶಿಗ್ಗಾಂವಿ ಕ್ಷೇತ್ರದ ಜನರ ಪ್ರೀತಿಗೆ ನಾನು ಸೋತಿದ್ದೇನೆ. ನಿಮ್ಮ ಪ್ರೀತಿಗೆ ನಾನು ತಲೆಬಾಗಿದ್ದೇನೆ. ನಿಮ್ಮ ವಿಶ್ವಾಸಕ್ಕೆ ನನ್ನ ಜೀವನದ ಉಸಿರಿರುವರೆಗೂ ಸೇವೆ ಮಾಡುತ್ತೇನೆ ಅನ್ನೋ ಪ್ರತಿಜ್ಞೆ ಮಾಡುತ್ತೇನೆ ಎಂದರು. ಶಿಗ್ಗಾಂವಿ ಕ್ಷೇತ್ರದಲ್ಲಿ 100ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಿದ್ದೇನೆ. ಪ್ರತಿಯೊಂದು ಮನೆಗೂ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಂಡಿದ್ದೇನೆ. ನಾನು ಸಿಎಂ ಆಗಿ ವಿದ್ಯಾರ್ಥಿಗಳು, ರೈತರಿಗೆ ಯೋಜನೆ ಜಾರಿ ಮಾಡಿದ್ದೇನೆ. 15 ವರ್ಷದಲ್ಲಿ 10 ಸಾವಿರ ಮನೆ ಕಟ್ಟಿದ್ದೇನೆ. ಮಳೆ ಬಂದಾಗ 12 ಸಾವಿರ ಮನೆ ಕಟ್ಟಿದ್ದೇನೆ. ರಾಜ್ಯದಲ್ಲಿ 125ಕ್ಕಿಂತ ಹೆಚ್ಚು ಸ್ಥಾನ ಪಡೆದು ಬಿಜೆಪಿ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಸಿಎಂ ಕ್ಷೇತ್ರ ಬದಲಾವಣೆ ಮಾಡ್ತಾರೆ ಅಂತಾ ಊಹಾಪೋಹ ಇತ್ತು. ನಾನು ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ. ನನ್ನ ಕೊನೆಯ ಉಸಿರು ಇರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನಟ ಸುದೀಪ್ ಅವರು,ಸಂತ ಶಿಶುನಾಳ ಷರೀಫ್ ನಾಡಿದು. ಶಿಗ್ಗಾಂವಿಯಲ್ಲಿ ಪ್ರಚಾರ ಆರಂಭಿಸಿದ್ದಕ್ಕೆ ನನಗೆ ಬಹಳ ಖುಷಿಯಾಗಿದೆ. ನಾನು ಸುಮ್ಮನೆ ಪ್ರಚಾರಕ್ಕೆ ಬರುವುದಿಲ್ಲ. ನಾನು ಕೆಲಸ ಮಾಡೋರಿಗೆ ಮಾತ್ರ ಬೆಂಬಲ ನೀಡುವವನು ಎಂದರು.
ಕಿಚ್ಚ ಬಸವರಾಜ ಬೊಮ್ಮಾಯಿ ಮಾಮ ಅವರನ್ನು ಗೆಲ್ಲಿಸಿ ಹೋಗುತ್ತಾನೆ. ಕಡಿಮೆ ಅವಧಿಯಲ್ಲಿ ಮಾಮ ಉತ್ತಮವಾಗಿ ಕೆಲಸ ಮಾಡಿದ್ದಾರೆ. ನನ್ನನ್ನು ಆಹ್ವಾನಿಸಿದ್ದಕ್ಕೆ ಅವರಿಗೆ ಧನ್ಯವಾದ ಹೇಳುತ್ತೇನೆ. ನಾನು ಭಾರತೀಯನಾಗಿ ಪ್ರಧಾನಿ ಮೋದಿ ಕೆಲಸವನ್ನು ಮೆಚ್ಚುತ್ತೇನೆ. ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇ ಬೇಕು ಒಳ್ಳೆಯತನ ಎಂದು ಸುದೀಪಿ ಸಿಎಂ ಬೊಮ್ಮಾಯಿ ಅವರನ್ನು ಹಾಡಿ ಹೊಗಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ