ಹಾವೇರಿ:
ಹಾವೇರಿ-ಗದಗ ಸಂಸದರಾಗಿ ಆಯ್ಕೆಯಾದ ಬಿಜೆಪಿ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಹಾವೇರಿಯಲ್ಲಿ ಜನ ಸಂಪರ್ಕ ಕಾರ್ಯಾಲಯವನ್ನು ಸ್ಥಾಪಿಸಿದ್ದು, ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು, ಜನರ ಕುಂದುಕೊರತೆಗಳನ್ನು ಪರಿಹರಿಸಲು, ಸೂಕ್ತ ಪರಿಹಾರ ನೀಡಲು ಮತ್ತು ಸಭೆ ನಡೆಸಲು ಕಚೇರಿಯನ್ನು ತೆರೆಯಲಾಗಿದೆ. ಗುರುವಾರ ಹಾವೇರಿ ಜಿಲ್ಲೆಗೆ ಹಾಗೂ ಶುಕ್ರವಾರ ಗದಗ ಜಿಲ್ಲೆಗೆ ಮೀಸಲಿಡಲಿದ್ದು, ಬೆಳಗ್ಗೆ 11ರಿಂದ ಸಂಜೆ 5ರವರೆಗೆ ಕಚೇರಿಯು ತೆರೆದಿರಲಿದ್ದು, ಎಲ್ಲರ ಸಮಸ್ಯೆಗಳಿಗೂ ಸ್ಪಂದನೆ ನೀಡಲಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ದುರಸ್ತಿ, ಸರ್ವಿಸ್ ರಸ್ತೆಗಳ ನಿರ್ಮಾಣ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಅದೇ ರೀತಿ ಹುಬ್ಬಳ್ಳಿಯಲ್ಲಿ ನೈಋತ್ಯ ರೈಲ್ವೆ (ಎಸ್‌ಡಬ್ಲ್ಯುಆರ್) ಅಧಿಕಾರಿಗಳೊಂದಿಗೆ ಬ್ಯಾಡಗಿ ರೈಲು ನಿಲ್ದಾಣ ಮತ್ತು ಶಿವಮೊಗ್ಗ-ರಾಣೆಬೆನ್ನೂರು ಮಾರ್ಗದ ಸಮಸ್ಯೆಗಳ ಪರಿಹಾರಕ್ಕಾಗಿ ಸಭೆ ನಡೆಸಲಾಗಿದ್ದು, ಶೀಘ್ರವೇ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಹಾವೇರಿಯಲ್ಲಿ ವಂದೇ ಭಾರತ್ ರೈಲು ನಿಲುಗಡೆಯಾಗುವಂತೆ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ವಿ ಸೋಮಣ್ಣ ಅವರಿಗೆ ಮನವಿ ಮಾಡಲಾಗಿದೆ, ಈಗಾಗಲೇ ರೈಲ್ವೆ ಮಂಡಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದಷ್ಟು ಬೇಗ ತೀರ್ಮಾನವಾಗಲಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ, ಆದರೆ ಒಳಚರಂಡಿ ವ್ಯವಸ್ಥೆಗಳು ಅಸಮರ್ಪಕವಾಗಿದ್ದು, ವ್ಯವಸ್ಥಿತವಾಗಿ ಸುಧಾರಿಸಬೇಕು. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಶ್ರಮಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಸರ್ಕಾರದ ವಿರುದ್ದ ಕಿಡಿಕಾರಿದ ಅವರು, ರಾಜ್ಯದ ಆರೋಗ್ಯ ಇಲಾಖೆ ಐಸಿಯುನಲ್ಲಿದೆ. ಸರಿಯಾಗಿ ಔಷಧಿ ಸಿಗುತ್ತಿಲ್ಲ. ಪ್ರತೀ ತಿಂಗಳು ಇಂಡೆಂಟ್ ಹಾಕುತ್ತಿದ್ದಾರೆ. ಪ್ರಮುಖ ಔಷಧಿಗಳನ್ನು ಯಾಕೆ ಸ್ಟಾಕ್ ಇಡುತ್ತಿಲ್ಲ. ಇದು ಸರ್ಕಾರ ಹಣಕಾಸಿನ ದಿವಾಳಿಯಾಗಿರುವ ಕುರುಹು ಎಂದು ಟೀಕಿಸಿದರು.
ಸಾರ್ವಜನಿಕ ಆಸ್ಪತ್ರೆ ದರ ಹೆಚ್ಚಿಸಿದ್ದಾರೆ. ಬಾಣಂತಿಯರ ಸಾವಾಗಿದೆ. ಸಾವಿಗೆ ಯಾವುದೇ ದುಡ್ಡು ಕೊಟ್ಟರೂ ಪರಿಹಾರ ಸಿಕ್ಕಂತಾಗದು. ಇದುವರೆಗೂ ಒಂದು ತಲೆ ದಂಡ ಆಗಿಲ್ಲ. ಯಾರನ್ನು ರಕ್ಷಣೆ ಮಾಡಲು ಹೊರಟಿದ್ದಾರೆ?ಇದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಆರೋಗ್ಯ ಇಲಾಖೆಯೇ ರೋಗಗ್ರಸ್ಥವಾಗಿದೆ. ಶಾಲೆ, ಆಸ್ಪತ್ರೆ ಯಾವುದೂ ಸರಿ ಇಲ್ಲ. ಸಾರ್ವಜನಿಕರ ಅಹವಾಲು ಹಾಗೂ ಅವುಗಳ ಸೂಕ್ತ ಪರಿಹಾರಕ್ಕಾಗಿ ಜನ ಸಂಪರ್ಕ ಕಾರ್ಯಾಲಯ ಮಾಡಿದ್ದೇನೆ. ಸಾರ್ವಜನಿಕರು ತಮ್ಮ ಸಮಸ್ಯೆಗಳು, ಕೆಲಸ ಕಾರ್ಯಗಳಿಗೆ ಅಹವಾಲು ತೆಗೆದುಕೊಂಡು ಬರುತ್ತಾರೆ. ನಮ್ಮ ಕಚೇರಿಯಿಂದ ಬಂದಂತಹ ಪತ್ರಗಳು ಹಾಗೂ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತ, ಸರ್ಕಾರ ಸಕಾರಾತ್ಮಕ ಸ್ಪಂದನೆ ಮಾಡಬೇಕಾಗುತ್ತದೆ. ಈ ಕಚೇರಿಯಲ್ಲಿ ಹಲವು ಸಭೆ ಮಾಡಬೇಕಾಗುತ್ತೆ. ಗುರುವಾರ ಹಾವೇರಿ ಜಿಲ್ಲೆಗೆ ಮೀಸಲಿಡುತ್ತೇನೆ, ಶುಕ್ರವಾರ ಗದಗ ಜಿಲ್ಲೆಗೆ ಮೀಸಲಿಡುತ್ತೇನೆ ಎಂದು ತಿಳಿಸಿದರು.