ಮಕ್ಕಳಿಗೆ ಅಪ್ಪ ಅರ್ಥವಾಗಿಬಿಟ್ಟರೆ ಅಪ್ಪನ ಜನ್ಮ ಸಾರ್ಥಕ…..!

 

    ಅಪ್ಪ ಅಷ್ಟು ಸುಲಭವಾಗಿ ಮಕ್ಕಳಿಗಾಗಲಿ, ಮಡದಿಗಾಗಲಿ, ಅರ್ಥವಾಗುವುದೇ ಇಲ್ಲ. ಅಪ್ಪನ ಅಂತರಾಳ ಅರ್ಧಾಂಗಿ ಎನಿಸಿಕೊಂಡು ಸದಾ ಅಪ್ಪನ ಮಗ್ಗುಲಲ್ಲೇ ಇರುವ ಅಮ್ಮನಿಗೂ ಸಹ ಅರ್ಥವಾಗುವುದಿಲ್ಲ. ಮೇಲಾಗಿ ಅಪ್ಪನನ್ನು ಅರ್ಥ ಮಾಡಿಕೊಳ್ಳಲು ಅಮ್ಮ ಬಿಡುವುದೇ ಇಲ್ಲ. ನಿಮ್ಮಪ್ಪ ಯಾವಾಗಲೂ ಹೀಗೆ,, ಅನ್ನುತ್ತಲೇ ಇರುತ್ತಾಳೆ..

    ನಿಜ ಹೇಳಬೇಕೆಂದರೆ ಸಾಲಗಾರರಿಗೆ ಅಪ್ಪ ಚೂರುಪಾರು ಅರ್ಥವಾಗಿರುತ್ತಾನೆ.. ತನ್ನ ಗೆಳೆಯರಲ್ಲಿ ಒಬ್ಬಿಬ್ಬರಿಗೆ ಅಪ್ಪ ಕಾಲು ಭಾಗ ಮಾತ್ರ ಅರ್ಥ ಆಗಿರುತ್ತಾನೆ.‌ ಅಪ್ಪನ ಸವೆದು ಹೋಗಿರುವ ಚಪ್ಪಲಿಗಳಿಗೆ, ಅಪ್ಪ ವರ್ಷಗಟ್ಟಲೆ ಹಾಕಿದ ಹಳೆಯ ಬಟ್ಟೆಗಳಿಗೆ ಮಕ್ಕಳು ಮತ್ತು ಮಡದಿಗಿಂತಲೂ ಅಪ್ಪ ಚೆನ್ನಾಗಿ ಅರ್ಥ ಆಗಿರುತ್ತಾನೆ..

   ಅವುಗಳು ಹಳೆಯದಾದರೂ ಅಪ್ಪ ಅವುಗಳನ್ನೇ ಪ್ರೀತಿಯಿಂದ ಬಳಸುತ್ತಾನೆ..ಅಪ್ಪ ಅವುಗಳನ್ನು ಬದಲಿಸುವುದಿಲ್ಲ..ಆ ಹಳೆಯ ವಸ್ತುಗಳಲ್ಲಿಯೇ ಅಪ್ಪ ಹೊಸದನ್ನು ಕಂಡುಕೊಂಡಿದ್ದಾನೆ..

    ಅಪ್ಪ ಹಳೆಯ ಕಾಲದವ..ಆತನಿಗೆ ಹೊಳೆಯುವುದೆಲ್ಲಾ ಬರೀ ಹಳೆಯ ಯೋಚನೆಗಳು, ಅಪ್ಪ ಈಗಿನ ಕಾಲಕ್ಕೆ ತಕ್ಕಂತೆ update ಆಗಿಲ್ಲ ಅನ್ನುವ ಮಡದಿ ಮಕ್ಕಳು .ಅಪ್ಪ update ಆದರೂ ಅಪ್ಪನ ಬೆಲೆ ಮೂರು ಕಾಸು.. ಅಪ್ಪನ ಆಸೆ ಆಕಾಂಕ್ಷೆಗಳಿಗೆ ಮಕ್ಕಳ ದೃಷ್ಟಿಯಲ್ಲಿ ಅರ್ಥವೇ ಇಲ್ಲ.. ಆಪ್ಪನ ಪರಿಶ್ರಮ ತ್ಯಾಗಕ್ಕೆ ಬೆಲೆಯೂ ಇಲ್ಲ. ಎಲ್ಲರೂ ಮಲಗಿರುವಾಗಲೂ, ಎಚ್ಚರವಾಗಿರುವ ಅಪ್ಪ ಮಲಗಿದ ತನ್ನ ಹೆಂಡತಿ ಮತ್ತು ಮಕ್ಕಳ ಮುಖದಲ್ಲಿ ತನ್ನನ್ನು ಹುಡುಕಿಕೊಳ್ಳಲು ಮತ್ತೆ ಮತ್ತೆ ಪ್ರಯತ್ನಿಸಿ ವಿಫಲನಾಗುತ್ತಾನೆ

    ಹಬ್ಬ, ಉತ್ಸವ, ಮದುವೆ, ಪ್ರವಾಸ ಎಲ್ಲದಕ್ಕೂ ಬಣ್ಣಬಣ್ಣದ ಹೊಸ ಬಟ್ಟೆ ಖರೀದಿಸುವ ಮನೆಮಂದಿಯ ಕಣ್ಣಿಗೆ ಅಪ್ಪನ ಹಳೆಯ ಪ್ಯಾಂಟ್ ಹರಿದ ಷರ್ಟ್, ಸವೆದುಹೋದ ಓಬವ್ವನ ಕಾಲದ ಚಪ್ಪಲಿಗಳು ಕಾಣುವುದೇ ಇಲ್ಲ.. ಸರಿ ರಾತ್ರಿಯಲ್ಲಿ ಮಲಗಿ ನಿದ್ರಿಸುತ್ತಿರುವ ತನ್ನವರ ಮುಖಗಳನ್ನು ಒಮ್ಮೆ ದಿಟ್ಟಿಸಿ ನೋಡಿ ತನ್ನ ಸ್ಥಿತಿಗೆ, ಅಸಹಾಯಕತೆಗೆ, ಮಮ್ಮಲ ಮರುಗುವ ಅಪ್ಪನ ಕಂಗಳಲ್ಲಿ ಸುರಿವ ಧಾರಾಕಾರ ಕಣ್ಣೀರು..ಒರೆಸುವರಾರು..?.

    ತನ್ನ ಮಕ್ಕಳು ಮಡದಿಗೆ ಸಣ್ಣ ಜ್ವರ ಬಂದರೂ, ಚಿಕಿತ್ಸೆ ಕೊಡಿಸಿದ ನಂತರವೂ, ಸಾವಿರ ದೇವರನ್ನು ತನ್ನವರ ಅರೋಗ್ಯ ಭಾಗ್ಯಕ್ಕಾಗಿ ಪ್ರಾರ್ಥಿಸುವ ಅಪ್ಪ.. ಅದೇ ಅಪ್ಪನ ಅರೋಗ್ಯ ಗಂಭೀರ ಸ್ಥಿತಿಗೆ ತಲುಪಿ ವಾರಗಟ್ಟಲೆ ಅಪ್ಪ ಏಕಾಂಗಿಯಾಗಿ ಆಸ್ಪತ್ರೆಗಳಿಗೆ ಅಲೆದರೂ, ಕಂಡೂ ಕಾಣದಂತಿರುವ ಕುಟುಂಬಸ್ಥರು. ಜನರೇಷನ್ ಗ್ಯಾಪ್ ಎನ್ನುವುದು ನಿಜಕ್ಕೂ ಇಷ್ಟೊಂದು ಬೀಕರವೇ..? ಅಯ್ಯೋ ದುರ್ವಿಧಿಯೇ..?. ಎಂದು ಒಡಲಲ್ಲಿಯೇ ನೋವ ನುಂಗಿ ನಗುವ ಅಪ್ಪ.

     ಅಪ್ಪನ ಹಳೆಯ ಉಡುಪುಗಳೊಳಗೆ ಅವಿತಿರುವ ಸುಂದರ ಮನಸ್ಸು ಯಾರಿಗೂ ಕಾಣಿಸುವುದಿಲ್ಲ.. ಅಪ್ಪನ ಮುಗುಳ್ನಗುವಿನಲ್ಲಿ ಅವಿತ ಅಸಂಖ್ಯಾತ ನೋವುಗಳು ಯಾರಿಗೂ ಅರ್ಥ ಆಗುವುದಿಲ್ಲ..

ಯಾಕೆ ಹುಟ್ಟಿಸಬೇಕಿತ್ತು..?. ಒಮ್ಮೊಮ್ಮೆ ಮಡದಿ ಮಕ್ಕಳ ಪ್ರಶ್ನೆ..?.

    ಎಲ್ಲದಕ್ಕೂ ಉತ್ತರ ತನ್ನ ಬಳಿಯಿದ್ದರೂ, ಯಾವ ಪ್ರಶ್ನೆಗಳಿಗೂ ಉತ್ತರ ನೀಡಲಾಗದ ಅಸಹಾಯಕ “ಅಪ್ಪ. ಎಲ್ಲಾ ಇದ್ದರೂ ಏಕಾಂಗಿ..

    ಅಪ್ಪನ ಮಾತು ಹಿಡಿಸುವುದಿಲ್ಲ, ಅಪ್ಪನ ಹಠ ಇಷ್ಟವಾಗುವುದಿಲ್ಲ. ಉಪದೇಶವಂತೂ ಮಕ್ಕಳ ಅಪಹಾಸ್ಯಕ್ಕೆ ಈಡಾಗುತ್ತದೆ. ಅವರ ಸಹಭಾಗಿತ್ವವೂ ಬೇಕಿಲ್ಲ. ಅಪ್ಪ ಸದಾ ಅನಗತ್ಯ ಪ್ರಶ್ನೆ ಕೇಳುವ ಅಧಿಕ ಪ್ರಸಂಗಿ. ಮಕ್ಕಳು ಬೆಳೆದಂತೆ ಅಪ್ಪನ ಬಗೆಗಿನ ನಕಾರಾತ್ಮಕ
ಪಟ್ಟಿಯೂ ಬೆಳೆಯತೊಡಗುತ್ತದೆ. ತನ್ನ ಐಹಿಕ ಸುಖ ಮತ್ತು ಆಡಂಬರಗಳನ್ನೆಲ್ಲಾ ಕುಟುಂಬಕ್ಕಾಗಿ ತಿಲಾಂಜಲಿ ಇಟ್ಟ ಅಪ್ಪ ಇಂದು
ಎಲ್ಲರಿಂದಲೂ ಕಟು ಮಾತುಗಳನ್ನು ಕೇಳುವ ಸಹನಾಮಯಿ.
 

     ಕುಟುಂಬದ ಭದ್ರತೆಗಾಗಿ, ಪ್ರತಿಷ್ಠೆಗಾಗಿ, ಐಕ್ಯತೆಗಾಗಿ, ಸಮಾಧಾನಕ್ಕಾಗಿ ಸಂಕಷ್ಟಗಳನ್ನು ಪ್ರಕಟಿಸದೆ ಹೃದಯದೊಳಗೆ ಅದುಮಿಟ್ಟ ಅಪ್ಪ. ತನ್ನ ಮಕ್ಕಳು LKG ಯಿಂದ ಉನ್ನತ ವಿದ್ಯಾಭ್ಯಾಸ, ಟ್ಯೂಷನ್ ಹೀಗೆ ಮಕ್ಕಳ ಬಗ್ಗೆ ಆಸೆ ಆಕಾಂಕ್ಷೆ, ಕನಸುಗಳನ್ನು ಕಟ್ಟಿಕೊಂಡೇ ಅಪ್ಪನ ಜೀವನ ಸವೆದು ಹೋಯಿತು.ವಯಸ್ಸಾದಂತೆ, ಅನಾರೋಗ್ಯ ಪೀಡಿತರಾದಾಗ ಕ್ಷೀಣರಾಗುತ್ತಾರೆ. ಮಡದಿ ಮಕ್ಕಳಿಗೆ ಭಾರ ಎಂದು ಅನಿಸತೊಡಗುತ್ತದೆ.

    ಮಕ್ಕಳು ಕೂಡ ಅಮ್ಮನೊಂದಿಗೆ ಮಾತ್ರ ವ್ಯವಹರಿಸುತ್ತಾರೆ. ತನ್ನ ಇಷ್ಟಾರ್ಥಗಳನ್ನೆಲ್ಲ ಬದಿಗಿಟ್ಟು, ಕನಸುಗಳನ್ನೆಲ್ಲಾ ನುಚ್ಚುನೂರು ಮಾಡಿ ತನ್ನನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂಬ ವಿಷಾದ. ಇದು ಕೇವಲ ಒಂದು ಅಪ್ಪನ ಸಮಸ್ಯೆಯಲ್ಲ. ಸುತ್ತಮುತ್ತಲ ಲಕ್ಷಾಂತರ ಅಪ್ಪಂದಿರ ದುಃಖ. ಅಮ್ಮನ ಮಹತ್ವವನ್ನು ಎಲ್ಲರೂ ಕೊಂಡಾಡುತ್ತಾರೆ, ಕಣ್ಣೀರಿಡುವ ಅಮ್ಮನನ್ನು ಮಕ್ಕಳು ನೋಡುತ್ತಾರೆ. ಆದರೆ ಕಣ್ಣೀರಿಡುವ ಅಪ್ಪನನ್ನು ಕಾಣುವುದಿಲ್ಲ. ಅಪ್ಪ ಅವರೆದುರೂ ಕಣ್ಣೀರು ಇಡುವುದೂ ಇಲ್ಲ..

   9 ತಿಂಗಳು ಹೊತ್ತ ಅಮ್ಮನ ಕಥೆಯನ್ನು ಮಕ್ಕಳು ಕೇಳುತ್ತಾರೆ. ಹೆರಿಗೆಯ ನೋವು, ಬೆಳೆಸಿದ ಕಷ್ಟ ಇವುಗಳ ಬಗ್ಗೆ ಕತೆ, ಕವನ, ನಾಟಕ, ಬರಹ ಸಾಕಷ್ಟಿದೆ. ಪತ್ನಿಯ ಗರ್ಭ ಕಾಲದಲ್ಲಿ ಹುಟ್ಟುವ ಮಗುವಿನ ಆರೋಗ್ಯಕ್ಕಾಗಿ ಪೋಷಕಾಂಶ ಆಹಾರ, ಹಣ್ಣುಹಂಪಲು, ವೈದ್ಯರ ಶುಶ್ರೂಷೆ, ಮಕ್ಕಳ ತಜ್ಞರ ಬಳಿ ಓಡಾಡಿದ ಅಪ್ಪನ ಬಗ್ಗೆ ಯಾರೂ ಕೇಳಿರುವುದಿಲ್ಲ ಹೇಳಿರುವುದಿಲ್ಲ.. ಪ್ರೀತಿ ಪ್ರಕಟಿಸಲು ತಿಳಿಯದ ಅಪ್ಪ. ಮಕ್ಕಳನ್ನು ತಿದ್ದಲು ಹೊರಟರೆ ‘ಇದು ನಿಮ್ಮ ಹಳೆಯ ಕಾಲವಲ್ಲ’ ಎಂದು ಹೇಳುವ ಅಮ್ಮಂದಿರು. 

    ಇದೇ ಕಾರಣದಿಂದ ಅಪ್ಪ ಮನೆಯಲ್ಲಿ ಅನ್ಯನಾಗುತ್ತಾನೆ. ಮನೆಯೊಳಗಡೆ ಪಬ್ಜಿ, ಟಿಕ್‌ಟಾಕ್, ಗೇಮ್ಸ್, ಟಿ.ವಿ.ಸೀರಿಯಲ್‌ಗಳು ನೋಡುವಾಗ ನ್ಯೂಸ್ ನೋಡಲಾಗದ ಸ್ಥಿತಿಯಲ್ಲಿ ಅಪ್ಪ ಮೂಲೆಯಲ್ಲಿ ಯಾವುದೋ ಹಳೆಯ ಪೇಪರ್ ಓದುವಂತೆ ನಟಿಸುತ್ತಾನೆ. ಮಕ್ಕಳು ಅಪ್ಪನಿಗೆ ಮಾರುತ್ತರ ಕೊಡುವಾಗ ಅವರ ಕಣ್ಣುಗಳನ್ನೊಮ್ಮೆ ನೋಡಿ.. ಸಾಗರದಷ್ಟು ದುಃಖವನ್ನು ಮನಸ್ಸಿನೊಳಗಿಟ್ಟು ಅಭಿಮಾನದಿಂದ ತಲೆ ಎತ್ತಿ ನಡೆಯುವ ಅಪ್ಪನ ಗೌರವ ಮತ್ತು ಸಹನೆಯನ್ನು ತಿಳಿಯಬೇಕಾದರೆ ಪ್ರತೀ ಮಗನೂ ಸಹ ತಂದೆಯಾಗಬೇಕು.

   ಮಕ್ಕಳಿಗೆ ನಿಜವಾಗಿಯೂ ಇದೆಲ್ಲವೂ ಅರ್ಥವಾಗಿ ಅಪ್ಪನನ್ನು ನೆನೆದು ಪಶ್ಚಾತ್ತಾಪ ಪಡುವ ಹೊತ್ತಿಗೆ ಅಪ್ಪ ಕಾಣದ ಲೋಕಕ್ಕೆ ಯಾತ್ರೆ ಹೊರಟಿರುತ್ತಾನೆ. ಅಪ್ಪಾ, ಅಪ್ಪಾ ಎಂದು ಬೊಬ್ಬಿಟ್ಟು ಕರೆದರೂ, ಮರಳಿ ಬಾರದ ಲೋಕಕ್ಕೆ. ಆದರೂ ಅಪ್ಪ ಕೊನೆಯವರೆಗೂ ಮಕ್ಕಳ ಯಶಸ್ವಿಗಾಗಿಯೇ ಪ್ರಾರ್ಥಿಸುತ್ತಾನೆ. ಕೋಪ ತೋರಿಸುವ ಪ್ರೀತಿಗಾಗಿ ಅದನ್ನೆಲ್ಲಾ ನುಂಗುವ ಹೇಡಿಯಾಗಿದ್ದಾನೆ…!!!

Recent Articles

spot_img

Related Stories

Share via
Copy link