ಬೂಕರ್ ಪ್ರಶಸ್ತಿ ಪಟ್ಟಿಯಲ್ಲಿ ಬಾನು ಮುಷ್ತಾಕ್ ಕಥಾ ಸಂಕಲನ…..!

ದೆಹಲಿ:

     ಕನ್ನಡದ ಖ್ಯಾತ ಕಥೆಗಾರ್ತಿ ಬಾನು ಮುಷ್ತಾಕ್  ಅವರ ಸಣ್ಣಕತೆಗಳ ಅನುವಾದಿತ ಸಂಕಲನ ‘ಹಾರ್ಟ್ ಲ್ಯಾಂಪ್’ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪುರಸ್ಕಾರಕ್ಕೆ ಪರಿಗಣನೆಗೆ ಸಿದ್ಧವಾಗಿರುವ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕತೆಗಳುʼ ಕಥಾಸಂಕಲನವನ್ನು ಲೇಖಕಿ, ಪತ್ರಕರ್ತೆ ದೀಪಾ ಭಸ್ತಿ ಅವರು ‘ಹಾರ್ಟ್ ಲ್ಯಾಂಪ್’ ಶೀರ್ಷಿಕೆಯೊಂದಿಗೆ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

   ಕನ್ನಡ ಭಾಷೆಯ ಅನುವಾದಿತ ಕೃತಿಯೊಂದು ಬೂಕರ್ ಸ್ಪರ್ಧೆಗೆ ಪ್ರವೇಶ ಪಡೆದಿರುವುದು ಇದೇ ಮೊದಲ ಸಲವಾಗಿದೆ. ಕುಟುಂಬ ಹಾಗೂ ಸಮುದಾಯದ ತುಮುಲಗಳನ್ನು ಹೃದಯಸ್ಪರ್ಶಿಯಾಗಿ ಪ್ರಾದೇಶಿಕ ಸೊಗಡಿನೊಂದಿಗೆ ಮುಷ್ತಾಕ್ ಅವರ ಕಥೆಗಳು ಕಟ್ಟಿಕೊಟ್ಟಿವೆ ಎಂದು ತೀರ್ಪುಗಾರರು ತಿಳಿಸಿದ್ದಾರೆ. ಬೂಕರ್‌ ಪ್ರಶಸ್ತಿ 50 ಸಾವಿರ ಪೌಂಡ್ ( ಸುಮಾರು 55 ಲಕ್ಷ ರೂ.) ಮೊತ್ತದ ಬಹುಮಾನದ ಹಣವನ್ನು ಒಳಗೊಂಡಿದೆ.

   ಬೂಕರ್ ಪ್ರಶಸ್ತಿಗೆ ಪರಿಗಣನೆಯ ಪಟ್ಟಿಯಲ್ಲಿ ಒಟ್ಟು 13 ಕೃತಿಗಳು ಪ್ರವೇಶ ಪಡೆದಿವೆ. ಅಂತಿಮ ಸುತ್ತಿಗೆ ಪ್ರವೇಶ ಪಡೆಯುವ 6 ಕೃತಿಗಳ ಪೈಕಿ ಒಂದನ್ನು ಬೂಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಏಪ್ರಿಲ್ 8ರಂದು ಬೂಕರ್ ಪುರಸ್ಕಾರ ಘೋಷಣೆಯಾಗಲಿದೆ.‌

   ಹಾಸನದಲ್ಲಿ ನ್ಯಾಯವಾದಿಯಾಗಿರುವ ಬಾನು ಮುಷ್ತಾಕ್‌ ಚಳವಳಿಗಾರ್ತಿ ಕೂಡ ಹೌದು. ಲಂಕೇಶ್ ಪತ್ರಿಕೆ ಮೂಲಕ ಬರವಣಿಗೆ ಆರಂಭಿಸಿದರು. ಹೆಜ್ಜೆ ಮೂಡಿದ ಹಾದಿ, ಬೆಂಕಿ ಮಳೆ, ಎದೆಯ ಹಣತೆ, ಸಫೀರಾ, ಬಡವರ ಮಗಳು ಹೆಣ್ಣಲ್ಲ, ಕುಬ್ರ, ಇಬ್ಬನಿಯ ಕಾವು, ಒದ್ದೆ ಕಣ್ಣಿನ ಬಾಗಿನ ಮೊದಲಾದವು ಇವರ ಕೃತಿಗಳು.