ಬೋರನಕಣಿವೆ ಜಲಾಶಯದ ಗೋಡೆ ಶಿಥಿಲ

 ಹುಳಿಯಾರು :

      ಕೆಆರ್‍ಎಸ್ ಜಲಾಶಯಕ್ಕಿಂತಲೂ ಮೊದಲೆ ನಿರ್ಮಾಣಗೊಂಡ 125 ವರ್ಷಗಳ ಇತಿಹಾಸವುಳ್ಳ ಹುಳಿಯಾರು ಹೋಬಳಿಯ ಬೋರನಕಣಿವೆ ಜಲಾಶಯದ ಒಳ ಗೋಡೆ ಶಿಥಿವಾಗಿದೆ. ಸದರಿ ಜಲಾಶಯಕ್ಕೆ ಹೇಮಾವತಿ ಹಾಗೂ ಭದ್ರಾ ನದಿ ನೀರು ಹರಿಸುವ ಯೋಜನೆ ಇದ್ದು, ನೀರು ಹರಿಸುವ ಮುನ್ನ ದುರಸ್ತಿಯ ಅವಶ್ಯಕತೆ ಇದ್ದು, ದುರಸ್ಥಿಯಾಗದೆ ನೀರು ಹರಿಸಿದರೆ ಭಾರೀ ಅನಾಹುತವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ನೀರಿನಲ್ಲಿ ಕರಗಿದ ಇಟ್ಟಿಗೆಗಳು :

ಇಟ್ಟಗೆ ಗೋಡೆ ಶಿಥಿಲಗೊಂಡಿರುವುದು

      1892ರಲ್ಲಿ ಮೈಸೂರು ಮಹಾರಾಜರು ಕಲ್ಲು, ಮಣ್ಣಿನ ಇಟ್ಟಿಗೆ ಮತ್ತು ಗಾರೆಯಿಂದ ಈ ಜಲಾಶಯವನ್ನು ಕಟ್ಟಿಸಿದ್ದಾರೆ. ಜಲಾಶಯ ಕಟ್ಟಿ ನೂರಾರು ವರ್ಷವಾಗಿರುವುದರಿಂದ ಸಹಜವಾಗಿ ಜಲಾಶಯದ ಒಳ ಗೋಡೆಯ ಗಾರೆ ಸಂಪೂರ್ಣ ಹಾಳಾಗಿದೆ. ಅಲ್ಲದೆ ಗೋಡೆಯ ಇಟ್ಟಿಗೆಯೂ ಸಹ ನೂರಾರು ವರ್ಷಗಳಿಂದ ನೀರಿನಲ್ಲಿ ನೆನೆದು ಕರಗುತ್ತಿದ್ದು, ಮೊದಲ ಲೇಯರ್ ಇಟ್ಟಿಗೆಗಳಲ್ಲಿ ಬಹುತೇಕ ಇಟ್ಟಿಗೆಗಳು ನೀರಿನಲ್ಲಿ ಕರಗಿಹೋಗಿದ್ದು, ಪರ್ಯಾಯ ದುರಸ್ಥಿ ಕ್ರಮ ಅನುಸರಿಸದೆ ನಿರ್ಲಕ್ಷ್ಯಿಸಿದರೆ ಇಡೀ ಜಲಾಶಯವೇ ಶಿಥಿಲವಾಗುವ ಆತಂಕ ಎದುರಾಗಿದೆ.

ಬೇರು ಬಿಟ್ಟ ಗಿಡಗಳು :

      ಈಗಾಗಲೇ ಜಲಾಶಯದ ಕ್ರೆಸ್ಟ್ ಗೇಟ್ ಸಹ ಹಾಳಾಗಿದ್ದು, ಇತ್ತಿಚಿಗಷ್ಡೇ ಹೊಸ ಕ್ರೆಸ್ಟ್ ಗೇಟ್ ಅಳವಡಿಸಿದ್ದಾರೆ. ಅಲ್ಲದೆ ಜಲಾಶಯದ ಗೋಡೆಗಳಲ್ಲಿ ಅರಳಿ ಸೇರಿದಂತೆ ವಿವಿಧ ಜಾತಿಯ ಗಿಡಗಳು ಸಮೃದ್ಧವಾಗಿ ಬೆಳೆದು ಬೇರು ಬಿಟ್ಟಿದ್ದವು. ಇದರಿಂದ ಜಲಾಶಯದಲ್ಲಿ ಕೊರಕಲು ಹೆಚ್ಚಿ ಬಿರುಕು ಬಿಡುವ ಮುನ್ಸೂಚನೆ ಅರಿತ ಅಧಿಕಾರಿಗಳು ವಿಲೇವಾರಿ ಮಾಡಿದ್ದರು. ಆದರೆ ಈಗ ಮತ್ತೆ ಜಲಾಶಯದ ಗೋಡೆಯಲ್ಲಿ ಗಿಡಗಂಟೆಗಳು ಬೆಳೆದಿದ್ದು, ಮೊದಲಿಗಿಂತ ಹೆಚ್ಚಾಗಿವೆ. ಹಾಗಾಗಿ ಮತ್ತೊಮ್ಮೆ ಗಿಡಗಂಟೆಗಳ ತೆರವಿಗೆ ಮುಂದಾಗಬೇಕಿದೆ.

ಕುಡಿಯುವ ನೀರು ಪೂರೈಕೆ :

      ಜಲಾಶಯದಿಂದ ಹುಳಿಯಾರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಗಾಣಧಾಳು, ಹೊಯ್ಸಲಕಟ್ಟೆ, ಕೆಂಕೆರೆ ಗ್ರಾಪಂ ವ್ಯಾಪ್ತಿಗೆ ಕುಡಿಯುವ ನೀರು ಕೊಡುವ ಚಿಂತನೆಯನ್ನು ಸರ್ಕಾರ ಹೊಂದಿದ್ದು, ಪ್ರತಿ ವರ್ಷ ಕುಡಿಯಲು ನೀರು ಕೊಡುವ ಸಲುವಾಗಿ ನದಿಗಳಿಂದ ನೀರು ಹರಿಸಿ ಸಂಗ್ರಹಿಸಿಟ್ಟುಕೊಳ್ಳುವುದು ಅನಿವಾರ್ಯವಾಗಿದೆ.

ನಿರ್ಲಕ್ಷ್ರ್ಯಿಸಿದರೆ ಅನಾಹುತ :

      ಈಗ ಗೋಡೆ ದುರಸ್ತಿ ಮಾಡದೆ ನಿರ್ಲಕ್ಷ್ಯಿಸಿದರೆ ಕ್ರಮೇಣ ಗೋಡೆಯ ಇಟ್ಟಿಗೆಗಳು ನೀರಿನಲ್ಲಿ ಕರಗಿ ಜಲಾಶಯಕ್ಕೆ ಭಾರಿ ಹಾನಿ ಸಂಭವಿಸಬಹುದಾಗಿದೆ. ಜಲಾಶಯಗಳ ದುರಸ್ಥಿಗೆ ತಜ್ಞರನ್ನೊಳಗೊಂಡ ಪ್ರತ್ಯೇಕ ವಿಭಾಗವಿದ್ದು, ಅವರಿಗೆ ಈಗಾಗಲೇ ಪತ್ರ ಬರೆದಿರುವುದಾಗಿ ಇಲಾಖೆಯ ಅಧಿಕಾರಿಗಳು ತಿಳಿಸುತ್ತಾರೆ. ಆದರೆ ಪತ್ರ ಬರೆದು ವರ್ಷಗಳೇ ಕಳೆದಿದ್ದು, ಇದುವರೆಗೆ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ಪುನಃ ಗಮನ ಸೆಳೆಯುವ ಪ್ರಯತ್ನ ಮಾಡಿ ಶಿಥಿಲವಾಗಿರುವ ಜಲಾಶಯದ ಒಳಭಾಗದ ಗೋಡೆಯ ದುರಸ್ತಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಬೇಕಿದೆ.

ಅಣೆಕಟ್ಟೆಯ ಐತಿಹ್ಯ :

     ಮೈಸೂರು ಮಹಾರಾಜ ಚಾಮರಾಜೇಂದ್ರ ಒಡೆಯರ್ ಅವರು ಸುವರ್ಣಮುಖಿ ನದಿಗೆ ಅಡ್ಡಲಾಗಿ 1892 ರಲ್ಲಿ ಈ ಅಣೆಕಟ್ಟೆಯನ್ನು ಕಟ್ಟಿಸಿದ್ದಾರೆ. ಬೋರನೆಂಬ ಕುರಿಗಾಹಿಯ ಮನವಿಯ ಮೇರೆಗೆ ಜಲಾಶಯ ಕಟ್ಟಿಸಿದ್ದರಿಂದ ಇದಕ್ಕೆ ಬೋರನಕಣಿವೆ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಅಲ್ಲದೆ ಜಲಾಶಯದ ಬಳಿ ಭೈರವೇಶ್ವರ ದೇಗುಲವಿದ್ದು, ಭೈರವಕಣಿವೆ ಎಂಬ ಹೆಸರು ಕ್ರಮೇಣ ಬೋರನಕಣಿವೆ ಎಂದಾಗಿದೆ ಎನ್ನುತ್ತಾರೆ ಸ್ಥಳೀಯರು. 2002 ಎಕರೆ 31 ಗುಂಟೆ ಅಚ್ಚಕಟ್ಟು ಪ್ರದೇಶವನ್ನು ಒಳಗೊಂಡಿರುವ ಈ ಅಣೆಕಟ್ಟೆಯ ಸಾಗುವಳಿ ಭೂಮಿಯು ಬೆಳ್ಳಾರ, ಬೋರನಕಣಿವೆ, ಅಂಬಾರಪುರ, ಹೊಯ್ಸಲಕಟ್ಟೆ, ದಬ್ಬಗುಂಟೆ, ಮರೆನಡು, ಮತ್ತುಗದಹಳ್ಳಿ ಹಳ್ಳಿಗಳಿಗೆ ಸೇರಿದೆ.

ಪ್ರವಾಸಿ ತಾಣವಾಗಿಸಲು ಲಕ್ಷಾಂತರ ರೂ. ವೆಚ್ಚ :

      ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಬೋರನಕಣಿವೆ ಜಲಾಶಯವೂ ಸಹ ಒಂದಾಗಿದ್ದು, ಡ್ಯಾಮನ್ನು ಪ್ರವಾಸಿ ತಾಣವಾಗಿ ಮಾಡಿ ಜನಾಕರ್ಷಿಸಲು ಲಕ್ಷಾಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಮೆಟ್ಟಲುಗಳಿಗೆ ಗ್ರಾನೈಟ್, ಪಾರ್ಕಿಂಗ್‍ಟೈಲ್ಸ್, ಫೆನ್ಸಿಂಗ್ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆದರೆ ಅಗತ್ಯವಾಗಿ ಬೇಕಿರುವ ದುರಸ್ಥಿ ಕಾರ್ಯ ಮಾತ್ರ ನಿರ್ಲಕ್ಷ್ಯಿಸಿರುವುದು ಸಾರ್ಜಜನಿಕರ ಅಸಮಧಾನಕ್ಕೆ ಕಾರಣವಾಗಿದೆ.

ಗೋಡೆ ದುರಸ್ಥಿಗೆ ಇದೇ ಸೂಕ್ತ ಸಮಯ :

ಜಲಾಶಯದ ಗೋಡೆ ಮೇಲೆ ಗಿಡಗಂಟೆಗಳು ಬೆಳೆದಿರುವುದು

      ಕಳೆದ 2-3 ವರ್ಷಗಳಿಂದ ಬೋರನಕಣಿವೆ ಜಲಾಶಯ ಪ್ರದೇಶದಲ್ಲಿ ಉತ್ತಮ ಮಳೆಯಾಗದ ಪರಿಣಾಮ ಈಗ ಜಲಾಶಯದಲ್ಲಿ ಡೆಡ್ ಸ್ಟೋರೇಜ್ ಮಟ್ಟಕ್ಕಿಂತಲೂ ಕೆಳಮಟ್ಟದಲ್ಲಿ ನೀರಿದೆ. ಹಾಗಾಗಿ ಸುಲಭವಾಗಿ ಶಿಥಿಲಗೊಂಡಿರುವ ಗೋಡೆಗಳನ್ನು ದುರಸ್ತಿ ಮಾಡಬಹುದಾಗಿದೆ. ಈ ಅವಕಾಶವನ್ನು ಬಿಟ್ಟರೆ ಇನ್ನೆಂದೂ ದುರಸ್ತಿ ಮಾಡಲು ಅವಕಾಶವಿಲ್ಲದಂತೆ ನೀರು ಸಂಗ್ರಹವಾಗುತ್ತದೆ. ಏಕೆಂದರೆ ಶೀಘ್ರದಲ್ಲೇ ಈ ಜಲಾಶಯಕ್ಕೆ ಹೇಮೆ ಹಾಗೂ ಭದ್ರೆಯ ನೀರು ಹರಿಯಲಿದೆ.

ರೈತರು ಆತಂಕ ಪಡುವ ಅಗತ್ಯವಿಲ್ಲ :

      ಜಲಾಶಯವನ್ನು ಕಲ್ಲಿನಲ್ಲಿ ನಿರ್ಮಿಸಿದ್ದು, ಈ ಗೋಡೆಯ ರಕ್ಷಣೆಗಾಗಿ ಇಟ್ಟಿಗೆಯಲ್ಲಿ ಗೋಡೆ ನಿರ್ಮಿಸಿದ್ದಾರೆ. ನೂರಾರು ವರ್ಷಗಳಿಂದ ಇಟ್ಟಿಗೆಗಳು ನೀರಿನಲ್ಲಿ ಮುಳುಗಿ ಕರುಗುತ್ತಿವೆ. ಈ ವಿಚಾರ ನಮ್ಮ ಗಮನಕ್ಕೆ ಈಗಾಗಲೇ ಬಂದಿದ್ದು ಖುದ್ದು ಪರಿಶೀಲನೆ ಸಹ ಮಾಡಿದ್ದೇವೆ. ಆದರೆ ಸಣ್ಣ ನೀರಾವರಿ ಇಲಾಖೆಯಿಂದಲೇ ರಿಪೇರಿ ಮಾಡಲು ಬರುವುದಿಲ್ಲ. ಡ್ಯಾಮ್‍ಗಳ ದುರಸ್ಥಿಗೆ ಪ್ರತ್ಯೇಕ ವಿಭಾಗವಿದ್ದು, ಅವರಿಗೆ ಪತ್ರ ಬರೆದು ವಿಷಯ ಮುಟ್ಟಿಸಿದ್ದೇವೆ. ಅವರು ಬಂದು ಪರಿಶೀಲನೆ ಮಾಡಿ ದುರಸ್ಥಿಯ ಬಗ್ಗೆ ಸಲಹೆ ಕೊಟ್ಟ ನಂತರವಷ್ಟೆ ದುರಸ್ತಿ ಮಾಡಬಹುದಾಗಿದೆ. ಸದ್ಯಕ್ಕೆ ರೈತರು ಆತಂಕ ಪಡುವ ಅಗತ್ಯವಿಲ್ಲ. ಹೇಮೆ ಹರಿಯುವ ಮೊದಲೇ ದುರಸ್ತಿ ಮಾಡಿಸುತ್ತೇವೆ.

-ಪ್ರಭಾಕರ್, ಜೆಇ, ಸಣ್ಣ ನೀರಾವರಿ ಇಲಾಖೆ

-ಎಚ್.ಬಿ.ಕಿರಣ್‍ಕುಮಾರ್

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link