ಬೆಂಗಳೂರು:
ಗ್ಯಾರಂಟಿ ಯೋಜನೆಗಳಿಗಾಗಿ ಸಂಪನ್ಮೂಲ ಕ್ರೋಡೀಕರಣ ಹಾಗೂ ಹೆಚ್ಚು ಆದಾಯ ಬರುವ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತಿದ್ದು, ಆಸ್ತಿಗಳ ನಗದೀಕರಣದ ಯಾವುದೇ ಪ್ರಸ್ತಾವ ಇಲ್ಲ ಎಂದು ವಿಧಾನ ಪರಿಷತ್ ಸಭಾ ನಾಯಕ ಎನ್.ಎಸ್. ಬೋಸರಾಜು ಅವರು ಗುರುವಾರ ಸ್ಪಷ್ಟಪಡಿಸಿದರು.
ಪರಿಷತ್ತಿನಲ್ಲಿ ಮಾತನಾಡಿದ ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಅವರು, ಮೇ 18, 2024 ರಂದು ಮೂಲಸೌಕರ್ಯ ಇಲಾಖೆಯು ಎಲ್ಲಾ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಿದ್ದು, ಒಟ್ಟು ಆಸ್ತಿ ಮತ್ತು ಹಣಗಳಿಸಬಹುದಾದ ಆಸ್ತಿಗಳ ಬಗ್ಗೆ ವಿವರಗಳನ್ನು ನೀಡುವಂತೆ ಕೇಳಿದೆ. ನಾರಾಯಣ ಮೂರ್ತಿ, ಮೋಹನ್ ದಾಸ್ ಪೈ ಮತ್ತು ಇತರ ಉದ್ಯಮದ ತಜ್ಞರು, ನಿವೃತ್ತ ಐಎಎಸ್ ಅಧಿಕಾರಿಗಳು ಮತ್ತು ಇತರರಿಂದ ಆದಾಯ ಕ್ರೋಢೀಕರಣದ ಕುರಿತು ಸಲಹೆಗಳನ್ನು ಪಡೆಯುವಾಗ ಬಿಸಿಜಿ ಸಲಹೆಗಾರರನ್ನು ನೇಮಿಸುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದರು.
ಈ ಪ್ರಶ್ನೆಗೆ ಮುಖ್ಯಮಂತ್ರಿ ಪರವಾಗಿ ಉತ್ತರಿಸಿದ ಬೋಸರಾಜು ಅವರು, ಆರ್ಥಿಕ ಇಲಾಖೆಯು ವಿವಿಧ ಇಲಾಖೆಗಳು ಮತ್ತು ಅವುಗಳ ಅಧೀನದ ನಿಗಮ, ಮಂಡಳಿ, ಪ್ರಾಧಿಕಾರಗಳ ಆಸ್ತಿಗಳ ಮಾಹಿತಿಯ ಸಂಗ್ರಹಿಸಲು ಸಮಗ್ರ ಪಟ್ಟಿ ಸಿದ್ಧಪಡಿಸುವಂತೆ ಆಂತರಿಕ ಸುತ್ತೋಲೆ ಕಳುಹಿಸಿದೆ. ಎಲ್ಲ ಸರ್ಕಾರಗಳ ಅವಧಿಯಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆಯಿದು ಎಂದು ಹೇಳಿದರು.
ಒಂದೊಮ್ಮೆ ಆಸ್ತಿಗಳ ನಗದೀಕರಣ ಮಾಡುವುದಾದರೆ, ಸಂಪುಟ ಸಭೆಯಲ್ಲಿ ಆ ವಿಚಾರವನ್ನು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದೂ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
