ಪಾಟ್ನಾ:
ಡಿಸೆಂಬರ್ 13 ರಂದು ನಡೆದ ಬಿಹಾರ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಹೀಗಾಗಿ ಆ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪರೀಕ್ಷಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಪತಿಭಟನಾಕಾರರನ್ನು ನಿಯಂತ್ರಣಕ್ಕೆ ತರಲು ಭಾನುವಾರ ಪೊಲೀಸರು ಜಲಫಿರಂಗಿ ಮತ್ತು ಲಾಠಿ ಚಾರ್ಜ್ ಮಾಡಿದ್ದಾರೆ.
ಜನ್ ಸುರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರ ನೇತೃತ್ವದಲ್ಲಿ ಪಟ್ನಾದ ಗಾಂಧಿ ಮೈದಾನದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಘಟನೆಯ ಬಗ್ಗೆ ಜಿಲ್ಲಾಧಿಕಾರಿ ಚಂದ್ರಶೇಖರ್ ಸಿಂಗ್ ಮಾತನಾಡಿ ಪ್ರತಿಭಟನಾಕಾರರು ಪರವಾನಗಿ ಪಡೆಯದೆ ಮುಖ್ಯಮಂತ್ರಿಗಳ ನಿವಾಸದ ಕಡೆಗೆ ಮೆರವಣಿಗೆ ನಡೆಸಲು ಸಜ್ಜಾಗಿದ್ದರು. ಜೆಪಿ ಗೊಲುಂಬರ್ ಕಡೆಗೆ ಮೆರವಣಿಗೆ ನಡೆಸುವಾಗ ಬ್ಯಾರಿಕೇಡ್‌ಗಳನ್ನು ದಾಟಲು ಪ್ರಯತ್ನಿಸಿದರು. ಜಿಲ್ಲಾಡಳಿತದ ಎಚ್ಚರಿಕೆಯ ಹೊರತಾಗಿಯೂ ಪ್ರತಿಭಟನಾಕಾರರು ಗಾಂಧಿ ಮೈದಾನದಲ್ಲಿ ಗಲಾಟೆ ನಡೆಸಿದ್ದಾರೆ. ಮೈದಾನದಲ್ಲಿ ವಿದ್ಯಾರ್ಥಿಗಳ ಕೂಟ ಆಯೋಜಿಸಿದ್ದಕ್ಕಾಗಿ ಪ್ರಶಾಂತ್ ಕಿಶೋರ್, ಅವರ ಪಕ್ಷದ ಅಧ್ಯಕ್ಷ ಮನೋಜ್ ಭಾರತಿ, ಹಾಗೂ ಬೋಧಕ ರಮಾಂಶು ಮಿಶ್ರಾ ಸೇರಿದಂತೆ ಒಟ್ಟು 21 ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರತಿಭಟನೆಯ ನೇತಾರ ಕಿಶೋರ್ ಕುಮಾರ್ ಬಿಹಾರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ರಾಜ್ಯದ ಯುವಕರ ಸಮಸ್ಯೆಗಳನ್ನು ಪರಿಹರಿಸುವ ಬದಲು ದೆಹಲಿಗೆ ಖಾಸಗಿ ಭೇಟಿಗೆ ಆದ್ಯತೆ ನೀಡಿದ್ದಾರೆ ಎಂದು ಟೀಕಿಸಿದರು.
