‘ಬ್ರಾಂಡ್ ಬೆಂಗಳೂರು’ ಪರಿಕಲ್ಪನೆಗೆ ಮುಳ್ಳಾಯ್ತ ಕಸದ ರಾಶಿ …!

ಬೆಂಗಳೂರು: 

    ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಬ್ರಾಂಡ್ ಬೆಂಗಳೂರು’ ಪರಿಕಲ್ಪನೆ ಸಮರ್ಥವಾಗಿ ಜಾರಿಯಾಗುತ್ತಿದೆಯೇ? ಉತ್ತರ ಇಲ್ಲ… ಇದಕ್ಕೆ ರಾಜ್ಯದ ಶಕ್ತಿ ಸೌಧ ವಿಧಾನಸೌಧದ ಆವರಣದಲ್ಲಿ ಬಿದ್ದಿರುವ ಕಸವೇ ಸಾಕ್ಷಿ..

    ಮಹತ್ವಾಕಾಂಕ್ಷೆಯ ‘ಬ್ರಾಂಡ್ ಬೆಂಗಳೂರು’ ಪರಿಕಲ್ಪನೆಯೊಂದಿಗೆ ಬೆಂಗಳೂರನ್ನು ವಿಶ್ವದರ್ಜೆಯ ನಗರವನ್ನಾಗಿ ಪರಿವರ್ತಿಸುವುದಾಗಿ ಹೇಳಿದ್ದ ರಾಜ್ಯ ಸರ್ಕಾರ ಈ ವಿಚಾರದಲ್ಲಿ ಗಂಭೀರವಾಗಿದೆಯೇ? ಉತ್ತರ ಇಲ್ಲ ಎಂದು ತೋರುತ್ತದೆ. ರಾಜ್ಯದ ಶಕ್ತಿಸೌಧ ವಿಧಾನಸೌಧದ ಆವರಣದಲ್ಲಿ ಬಿದ್ದಿರುವ ರಾಶಿ ರಾಶಿ ಕಸ ಸರ್ಕಾರದ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯ ಗಂಭೀರತೆಗೆ ಹಿಡಿದ ಕನ್ನಡಿಯಾಗಿದೆ.

   ಮುಂಗಾರು ಅಧಿವೇಶನ ನಡೆಯುತ್ತಿರುವ ವಿಧಾನಸೌಧ ಪ್ರವೇಶಿಸಿದ ಶಾಸಕರು ಮತ್ತು ಸಂದರ್ಶಕರನ್ನು ಶುಕ್ರವಾರ ಗೇಟ್ 2 (ಪಶ್ಚಿಮ) ಬಳಿ ಸುರಿದ ಕಸದ ರಾಶಿಗಳು ಸ್ವಾಗತಿಸಿದವು. ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳು, ಬಳಸಿದ ಟೀ ಕಪ್‌ಗಳು, ನೀರಿನ ಬಾಟಲಿಗಳು, ಆಹಾರ ಹೊದಿಕೆಗಳು ಮತ್ತು ಇತರ ತ್ಯಾಜ್ಯವು ಪ್ರವಾಸಿಗರಿಗೆ ಅನಾನುಕೂಲತೆಯನ್ನು ಮಾತ್ರವಲ್ಲದೆ, ಐಟಿ ನಗರದಲ್ಲಿ ಕಸ ಸಂಗ್ರಹಣೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ದಕ್ಷತೆಯ ಬಗ್ಗೆ ತೀವ್ರ ಕಳವಳವನ್ನು ಉಂಟುಮಾಡಿದೆ.

   ಕಸದ ಅಸಮರ್ಪಕ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂದರ್ಶಕರ ಗುಂಪು, ”ಇದು ನಗರದ ಪೌರಕಾರ್ಮಿಕರ ದುಃಸ್ಥಿತಿಯನ್ನು ಸೂಚಿಸುತ್ತದೆ, ಅಧಿಕಾರದ ಕೇಂದ್ರವೆಂದು ಪರಿಗಣಿಸಲಾದ ವಿಧಾನಸೌಧದ ಪರಿಸ್ಥಿತಿ ಹೀಗಿದ್ದರೆ, ನಗರದ ಇತರೆಡೆಯ ದುಸ್ಥಿತಿಯನ್ನು ಊಹಿಸಬಹುದು ಎಂದು ಕಿಡಿಕಾರಿದ್ದಾರೆ. 

   ವಿಧಾನಸೌಧದ ಹುಲ್ಲುಹಾಸುಗಳು ಪ್ಲಾಸ್ಟಿಕ್ ನೀರಿನ ಬಾಟಲಿಗಳು, ಕ್ಯಾರಿ ಬ್ಯಾಗ್‌ಗಳು ಮತ್ತು ಇತರ ತ್ಯಾಜ್ಯಗಳಿಂದ ತುಂಬಿರುವುದು ಇಲ್ಲಿದೆ ಆಗಮಿಸಿದ್ದ ಜನರಿಗೆ ಕಿರಿಕಿರಿ ಉಂಟು ಮಾಡಿತು. ಶಾಸಕರ ಪಾರ್ಕಿಂಗ್ ವಲಯದ ಬಳಿಯೂ ಕಸ ಪತ್ತೆಯಾಗಿದೆ. ಮಳೆಗಾಲದ ಅಧಿವೇಶನ ವೀಕ್ಷಿಸಲು ವಿಧಾನಸೌಧಕ್ಕೆ ಭೇಟಿ ನೀಡಿದ್ದ ಜಯನಗರದ ಶಿಕ್ಷಕಿ ಸಾವಿತ್ರಿ ಮಾತನಾಡಿ, ‘ವಿಧಾನಸೌಧ ಆವರಣದಲ್ಲಿ ಕಸ ಕಂಡರೆ ಅಸಹ್ಯ ಎನಿಸುತ್ತಿದೆ, ಅಧಿಕಾರಿಗಳು ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದರು.

   ವಿಧಾನಸೌಧದ ಸುತ್ತಲಿನ ಅವ್ಯವಸ್ಥೆಗೆ ರಾಜ್ಯ ಸರ್ಕಾರವನ್ನು ಟೀಕಿಸಿದ ರಮೇಶ್, “ಬ್ರ್ಯಾಂಡ್ ಬೆಂಗಳೂರು” ಪರಿಕಲ್ಪನೆಯು ಪ್ರಚಾರಕ್ಕಾಗಿ ಮಾತ್ರವೇ? ಎಂದು ಪ್ರಶ್ನಿಸಿದರು. ವಿಧಾನಸೌಧದ ಹುಲ್ಲುಹಾಸಿನ ಮೇಲೆ ನಿಷೇಧಿತ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳು ಕಂಡುಬಂದಿವೆ. ಪ್ಲಾಸ್ಟಿಕ್ ನಿಷೇಧ ಎಂದ ಸರ್ಕಾರ ಅದನ್ನು ಎಷ್ಟರಮಟ್ಟಿಗೆ ಜಾರಿಗೆ ತಂದಿದೆ ಎಂಬುದು ಈಗ ಜಹಜ್ಜಾಹೀರಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇರುವ ವಿಧಾನಸೌಧದಲ್ಲೇ ಪ್ಲಾಸ್ಟಿಕ್ ಪತ್ತೆಯಾಗಿರುವುದು ಅವರ ಅಧಿಕಾರದ ವೈಖರಿ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

    ಎರಡು ದಿನಗಳಿಂದ ವಿಧಾನಸೌಧ ಆವರಣದಲ್ಲಿ ಕಸ ಬಿದ್ದಿದೆ ಎಂದು ಗೇಟ್ 2ರ ಬಳಿ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು, ಈ ಬಗ್ಗೆ ಮಾಹಿತಿ ಪಡೆಯಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ವಿಶೇಷ ಆಯುಕ್ತ ಡಾ.ಹರೀಶ್ ಕುಮಾರ್ ಅವರ ಪ್ರತಿಕ್ರಿಯೆಗಾಗಿ ಸಂಪರ್ಕಕ್ಕೆ ಸಿಗಲಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap