ಬ್ರ್ಯಾಂಡ್ ಬೆಂಗಳೂರು ಎನ್ನುವುದು ಬರೀ ಘೋಷಣೆಗಳಿಗೆ ಸೀಮಿತ : ತೇಜಸ್ವಿ ಸೂರ್ಯ

ಬೆಂಗಳೂರು:

   ನಗರದ ಲೇಔಟ್ ಮತ್ತು ಸಮರ್ಪಕ ನಗರ ಯೋಜನೆ ಜಾರಿಗೊಳಿಸದೆ ಇದ್ದಲ್ಲಿ ಬ್ರ್ಯಾಂಡ್ ಬೆಂಗಳೂರು ಎನ್ನುವುದು ಬರೀ ಘೋಷಣೆಗಳಲ್ಲಿ ಮಾತ್ರ ಕೊಳೆತು ಹೋಗಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಸೋಮವಾರ ಹೇಳಿದ್ದಾರೆ.ಬೆಂಗಳೂರಿನಲ್ಲಿ ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ನಗರದಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ತೇಜಸ್ವಿ ಸೂರ್ಯ ಅವರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಬೆಂಗಳೂರಿನ ಟ್ರಾಫಿಕ್, ನೀರು ಸರಬರಾಜು & ಚರಂಡಿ ಸಮಸ್ಯೆಗಳಿಗೆ ಮುಂಚಿನಿಂದಲೂ ತಾತ್ಕಾಲಿಕ ತೇಪೆ ಹಚ್ಚುವ ಕಾರ್ಯವನ್ನೇ ನಡೆಸಿಕೊಂಡು ಬರಲಾಗುತ್ತಿದೆ. ಒಂದೇ ಒಂದು ಮಳೆಗೆ ಬೆಂಗಳೂರಿನಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ದೀರ್ಘ, ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳುವ ಬದಲು ಇಂತಹ ತಾತ್ಕಾಲಿಕ ಬ್ಯಾಂಡ್ ಏಡ್ ನಂತಹ ಕ್ರಮಗಳು ಕಾರಣ. ಭಾನುವಾರ ರಾತ್ರಿ ಸುರಿದ ಮಳೆಗೆ ಬೆಂಗಳೂರು ಕೆರೆಯಂತಾಗಿ ಬಿಟ್ಟಿದೆ. ಪ್ರವಾಹ, ನೀರು ಸಂಗ್ರಹಣೆ ಮತ್ತು ಹರಿದು ಹೋಗುವ ಬಗ್ಗೆ ನಗರಾಡಳಿತದ ದಿವ್ಯ ನಿರ್ಲಕ್ಷ್ಯ ಬೆಂಗಳೂರಿನ ನಾಗರಿಕರನ್ನು ಸಮಸ್ಯೆಯ ಅಂಚಿಗೆ ತಂದು ನಿಲ್ಲಿಸಿವೆ.

   ಬ್ರ್ಯಾಂಡ್ ಬೆಂಗಳೂರು ನಮ್ಮ ಊರಿನ ತಂತ್ರಜ್ಞಾನ, ಸಂಶೋಧನೆ, ತಂತ್ರಜ್ಞರ, ನಗರದ ಸಂಸ್ಕೃತಿಯ ಭಾಗ ಆಗಬೇಕೆ ವಿನಃ, ಅಸಮರ್ಪಕ ಚರಂಡಿ ವ್ಯವಸ್ಥೆ, ನೀರು ಸಂಗ್ರಹಣೆ, ಟ್ರಾಫಿಕ್ ಸಮಸ್ಯೆಯ ಕಾರಣದಿಂದ ಬೆಂಗಳೂರಿನ ಹೆಸರಿಗೆ ಕಳಂಕ ಬರುತ್ತಿದೆ. ಈ ಹಿಂದೆ ನಾನು ಹಲವಾರು ಬಾರಿ ಪ್ರಸ್ತಾಪಿಸಿ, ನಮ್ಮ ಬೆಂಗಳೂರಿಗೆ 3-5 ವರ್ಷಗಳ ಅವಧಿಗೆ ಪೂರ್ಣಕಾಲಿಕ ಚುನಾಯಿತ ಮೇಯರ್ ರ ಅವಶ್ಯಕತೆಯ ಬಗ್ಗೆ ಸರ್ಕಾರಕ್ಕೆ ಒತ್ತಾಯಿಸಿದ್ದೇನೆ.

   ಜಾಗತಿಕ ನಗರಗಳಾದ ಲಂಡನ್, ನ್ಯೂಯಾರ್ಕ್ & ಪ್ಯಾರಿಸ್ ಗಳಲ್ಲಿ ನಗರಾಡಳಿತವನ್ನು ನಿರ್ವಹಿಸಲು ಪೂರ್ಣಪ್ರಮಾಣದ ಮೇಯರ್ ಗಳನ್ನು ಆಯ್ಕೆಮಾಡುವ ವ್ಯವಸ್ಥೆ ಇದೆ. ಮೇಯರ್ ಆಯ್ಕೆ ದೂರದ ಮಾತು. ಪ್ರಸ್ತುತ ಪಾಲಿಕೆಯಲ್ಲಿ ಕಾರ್ಪೊರೇಟರ್ ಕೂಡ ಇಲ್ಲದೇ, ಪ್ರತಿಯೊಂದು ವಿಷಯಕ್ಕೂ ಯಾವಾಗಲೂ ಕೈಗೆ ಸಿಗದ ಬಿಬಿಎಂಪಿ ಅಧಿಕಾರಿಗಳನ್ನು ನೆಚ್ಚಿ ಕೂರಬೇಕಾದ ಅನಿವಾರ್ಯತೆ ಬಂದೊದಗಿದೆ.

   ನಗರದ ಸೌಂದರ್ಯಕ್ಕೆ ಪೂರಕವಾಗಬಲ್ಲ ಪಾದಚಾರಿ ಫುಟ್ಪಾತ್, ಪಾರ್ಕ್ ಗಳು, ಟ್ರಾಫಿಕ್, ಪಾರ್ಕಿಂಗ್ ನಿಯಮಗಳ ಸಮರ್ಪಕ ಅನುಷ್ಠಾನದ ಕೊರತೆ ನಗರದ ಸಂಚಾರ ಸಮಸ್ಯೆಯನ್ನು ಇನ್ನಷ್ಟು ಪ್ರಪಾತಕ್ಕೆ ತಳ್ಳುತ್ತಿದೆ.ಮೆಟ್ರೋ, ಸಬ್ ಅರ್ಬನ್ ರೈಲು, ಬಿಎಂಟಿಸಿ ಬಸ್ ಸೇವೆ ಎಲ್ಲವನ್ನೂ ಏಕೀಕೃತಗೊಳಿಸಿ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ BMLTA ಪ್ರಾಧಿಕಾರವನ್ನು ಪ್ರಸ್ತುತ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯಕ್ಕೆ ಮೂಲೆಗುಂಪಾಗಿದೆ. ನಗರದ ಲೇಔಟ್ & ಸಮರ್ಪಕ ನಗರ ಯೋಜನೆ ಜಾರಿಗೊಳಿಸದೆ ಇದ್ದಲ್ಲಿ ಬ್ರ್ಯಾಂಡ್ ಬೆಂಗಳೂರು ಎನ್ನುವುದು ಬರೀ ಘೋಷಣೆಗಳಲ್ಲಿ ಮಾತ್ರ ಕೊಳೆತು ಹೋಗಲಿದೆ ಎಂದು ಹೇಳಿದ್ದಾರೆ.

    ರಾಜ್ಯದಲ್ಲಿ ಆ.14ರಿಂದ ಭಾರೀ ಮಳೆ ಮುನ್ಸೂಚನೆಯಿದ್ದು, ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರಿ: ಅಧಿಕಾರಿಗಳಿಗೆ ಸರ್ಕಾರ ಸೂಚನೆ ಈ ನಡುವೆ ಸಂಸದ ಪಿಸಿ ಮೋಹನ್ ಅವರು ವಿಡಿಯೋ ಪೋಸ್ಟ್ ವೊಂದನ್ನು ಹಂಚಿಕೊಳ್ಳುವ ಮೂಲಕ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಕುರಿತು ವ್ಯಂಗ್ಯವಾಡಿದ್ದಾರೆ. ವಿಡಿಯೋದಲ್ಲಿ ನೀರು ತುಂಬಿದ ರಸ್ತೆಯಲ್ಲಿ ವಾಹನ ಚಲಾಯಿಸಲು ಸವಾರರು ಪರದಾಡುತ್ತಿರುವುದು ಕಂಡು ಬಂದಿದೆ.

    ಜೆಡಿಎಸ್ ಪೋಸ್ಟ್ ಮಾಡಿದ್ದು, ಡಿಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದೆ. ಡಿಸಿಎಂ ಇದೇನಾ ಬ್ರ್ಯಾಂಡ್ ಬೆಂಗಳೂರು..? ನೀರಿನಲ್ಲಿ ಮುಳುಗಿದ ಸಿಲಿಕಾನ್ ಸಿಟಿ. ಉತ್ತರಿಸಿ ಬೆಂಗಳೂರು ನಗರಾಭಿವೃದ್ಧಿ ಸಚಿವರೇ…

   ಕೇವಲ 3-4 ಗಂಟೆ ಸುರಿದ ಮಳೆಗೆ ಬೆಂಗಳೂರು ಬಹುತೇಕ ಜಲಾವೃತವಾಗಿದೆ. ರಾಜಧಾನಿಯ ಹಲವೆಡೆ ಮನೆಗಳಿಗೆ, ಅಪಾರ್ಟ್ ಮೆಂಟ್ ಗಳಿಗೆ ಮಳೆ ನೀರು ನುಗ್ಗಿ ಜನರು ಪರದಾಡುತಿದ್ದಾರೆ. ಇನ್ನು ಸಿಲಿಕಾನ್ ಸಿಟಿಯ ಬಹುತೇಕ ರಸ್ತೆಗಳು, ಅಂಡರ್ ಪಾಸ್ಗಳು ಸ್ವಿಮ್ಮಿಂಗ್ ಪೂಲ್ ಆಗಿದೆ, ರಸ್ತೆಗಳು ಕರೆಯಂತಾಗಿದ್ದು, ಹಳ್ಳ, ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ಚಲಿಸುವುದು ವಾಹನ ಸವಾರರಿಗೆ ನರಕ ಸದೃಶ್ಯವಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರೇ ಆಸ್ತಿ ತೆರಿಗೆ ಏರಿಸಿ, ಸಾವಿರ ಕೋಟಿಗೂ ಹೆಚ್ಚು ಸಂಗ್ರಹಿಸಿರುವ ಹಣ ಏನಾಗಿದೆ..? ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಮಾಡಲು ನೀವು ತೋರಿದ ಉತ್ಸಾಹ, ಈಗ “ಬ್ರ್ಯಾಂಡ್ ಬೆಂಗಳೂರು” ಮಾಡ್ತೀವಿ ಎಂದು ಬರೀ ಸುಳ್ಳುಗಳನ್ನು ಹೇಳುತ್ತಲೇ ಬೆಂಗಳೂರಿನ ಜನರಿಗೆ ಮಂಕುಬೂದಿ ಎರಚುತ್ತಿದ್ದೀರಿ ಅಷ್ಟೇ.. ನಿಮ್ಮ ಭ್ರಷ್ಟ ಕಾಂಗ್ರೆಸ್ ಸರ್ಕಾರ ಹಗರಣಗಳಲ್ಲೇ ಮುಳುಗಿರುವಾಗ ಜನಸಮಾನ್ಯರ ಬಗ್ಗೆ ಯೋಚಿಸಲು ಸಮಯ ಎಲ್ಲಿದೆ..? ಎಂದು ವ್ಯಂಗ್ಯವಾಡಿದೆ.

Recent Articles

spot_img

Related Stories

Share via
Copy link