ಮಕ್ಕಳಿಗೆ ಪ್ರಿಯವಾದ ಬ್ರೆಡ್ಡು-ಬಿಸ್ಕತ್ತು ದುಬಾರಿ

ತುಮಕೂರು:

          ಕಚ್ಚಾ ಸರಕು, ಸಾಗಣಿಕೆ ವೆಚ್ಚ ಏರಿಕೆಯಿಂದಾಗಿ ತುಟ್ಟಿಯಾದ ತಿನಿಸುಗಳ

ಬಡ ಕಾರ್ಮಿಕರಿಗೆ ಟೀ ಜೊತೆ ಒಪ್ಪೊತ್ತಿನ ಊಟವಾಗಿದ್ದ ಬನ್ನು, ಬಿಸ್ಕತ್‍ಗೂ ಸಂಚಕಾರ (ಸ್ಲಗ್‍ನಲ್ಲಿ ಬರಲಿ)

ತೈಲ ಬೆಲೆ, ಅಡುಗೆ ಅನಿಲ ದರ ಹೆಚ್ಚಳದ ಬೆನ್ನಿಗೆ ಮಕ್ಕಳು ಇಷ್ಟಪಟ್ಟು ತಿನ್ನುವ ವಿವಿಧ ಸ್ವಾದಗಳ ಬಿಸ್ಕತ್ತು, ಬ್ರೆಡ್ ಬೆಲೆಗಳು ದುಬಾರಿಯಾಗಿದ್ದು, ಮಕ್ಕಳ ಆಸೆಯೂ ಕಮರುವಂತಾಗಿದೆ. ಎಷ್ಟೋ ಜನ ಮಕ್ಕಳಿಗೆ ಬೆಳಗ್ಗೆ ಹಾಲು, ಟೀ-ಕಾಫಿ ಜೊತೆ ಬ್ರೆಡ್, ಬಿಸ್ಕತ್‍ಗಳಿಲ್ಲದೇ ಬೆಳಗಾಗುವುದೇ ಇಲ್ಲ. ವಿವಿಧ ಬ್ರಾಂಡೆಡ್ ಕಂಪನಿಗಳು ತಮ್ಮ ಬಿಸ್ಕತ್ತು, ಬ್ರೆಡ್, ರಸ್ಕ್‍ಗಳ ಬೆಲೆಗಳನ್ನು ದಿಢೀರನೆ ಏರಿಸಿದ್ದು, ಪ್ರತಿ ಬಿಸ್ಕತ್ತು, ಬ್ರೆಡ್ ಪೊಟ್ಟಣಗಳ ದರದಲ್ಲಿ 3 ರಿಂದ 10 ರೂ ನಷ್ಟು ಹೆಚ್ಚಳ ಕಂಡಿದೆ. ಪರಿಣಾಮ ಸ್ಥಳೀಯ ತಯಾರಕರೂ ಸಹ ತಮ್ಮ ಉತ್ಪನ್ನಗಳ ಬೆಲೆಯನ್ನು ಏರಿಸಿದ್ದಾರೆ.

ಪೂರೈಕೆ ಕಡಿತಗೊಳಿಸಿದ ಕಂಪನಿಗಳು :

ಬಿಸ್ಕತ್ ಬೆಲೆಗಳು ದುಬಾರಿಯಾಗುತ್ತಲೇ ಎಲ್ಲಾ ಬಿಸ್ಕತ್ತು ತಯಾರಿಕಾ ಕಂಪನಿಗಳು ತಮ್ಮ ವಿವಿಧ ಬ್ರಾಂಡಿನ ಬಿಸ್ಕೆಟ್‍ಗಳನ್ನು ಮಾರುಕಟ್ಟೆಗೆ ಅಲ್ಪ ಪ್ರಮಾಣದಲ್ಲಷ್ಟೇ ಪೂರೈಸುತ್ತಿದ್ದು, ಒಟ್ಟು ಪೂರೈಕೆಯಲ್ಲಿ ಶೇ.90 ರಷ್ಟು ಕಡಿತಗೊಳಿಸಿವೆ. ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳ ಬಳಿ ಸದ್ಯಕ್ಕೆ ಇರುವ ಹಳೆ ಮಾಲು ಖಾಲಿಯಾದ ನಂತರ ಹೊಸ ದರದ ಬಿಸ್ಕತ್ತಿನ ಪೊಟ್ಟಣಗಳು ಮಾರುಕಟ್ಟೆ ಪ್ರವೇಶಿಸಲಿವೆ ಎನ್ನಲಾಗುತ್ತಿದೆ. ಕೆಲ ಸಗಟು ವ್ಯಾಪಾರಿಗಳು ಬೇಡಿಕೆ ಇರುವಷ್ಟು ಬಿಸ್ಕತ್ ಪೂರೈಸಲಾಗದೇ ತಯಾರಿಕ ಕಂಪನಿಗಳ ಪ್ರತಿನಿಧಿಗಳ ಬಳಿ ಬಿಸ್ಕತ್ ಪೂರೈಸುವಂತೆ ದುಂಬಾಲು ಬಿದ್ದಿದ್ದಾರೆ.

ದರ ಏರಿಕೆಗೆ ಕಾರಣವೇನು..? :

ಗೋಧಿ, ಬಾರ್ಲಿ, ಓಟ್ಸ್, ಕೆಲ ಸಿರಿ ಧಾನ್ಯಗಳ ಬೆಲೆಗಳು ದುಬಾರಿಯಾಗಿರುವುದು ಹಾಗೂ ತೈಲ ಬೆಲೆ ಹೆಚ್ಚಳದಿಂದಾಗಿ ಸರಕು-ಸಾಗಾಣಿಕೆ ವೆಚ್ಚ ಹೆಚ್ಚಾಗಿರುವುದು ಬಿಸ್ಕತ್ತು ಮತ್ತು ಬ್ರೆಡ್‍ಗಳ ಬೆಲೆಗಳು ಏಕಾಏಕಿ ದುಬಾರಿಯಾಗಲು ಕಾರಣ ಎನ್ನಲಾಗುತ್ತಿದೆ. ಕೆಲ ಕಂಪನಿಗಳು ತಮ್ಮ ಪ್ರತಿ ಬಿಸ್ಕತ್ ಪೊಟ್ಟಣಕ್ಕೆ ತೂಕ ಆಧರಿಸಿ 5 ರಿಂದ 10 ರೂ ನಷ್ಟು ಬೆಲೆ ಏರಿಕೆ ಮಾಡಿದ್ದರೆ ಇನ್ನೂ ಕೆಲ ಕಂಪನಿಗಳು ಬೆಲೆ ಹೆಚ್ಚಳ ಮಾಡದೇ ಪ್ರತಿ ಪೊಟ್ಟಣದ ತೂಕದಲ್ಲಿ 20 ರಿಂದ 50 ಗ್ರಾಂ ನಷ್ಟು ಬಿಸ್ಕತ್ತುಗಳನ್ನು ಕಡಿಮೆ ಮಾಡಿವೆ.

ಚಾಕೋಲೇಟ್ ದರ ಇಳಿಕೆ :

ಬ್ರೆಡ್, ಬಿಸ್ಕತ್ತುಗಳ ಬೆಲೆಗಳು ದುಬಾರಿಯಾಗಿರುವ ನಡುವೆ ಮಕ್ಕಳಿಗೆ ಸದಾಕಾಲ ಇಷ್ಟವಾಗುವ ಚಾಕೋಲೇಟ್‍ಗಳ ಬೆಲೆಗಳು ಕಡಿಮೆಯಾಗಿವೆ. ಕ್ಯಾಡ್‍ಬರಿ, ಡೈರಿಮಿಲ್ಕ್, ಚಾಕೋಬಾರ್, ಕಿಟ್‍ಕ್ಯಾಟ್ ಸೇರಿದಂತೆ ವಿವಿಧ ಕಂಪನಿಗಳ ಚಾಕೋಲೇಟ್ ಬೆಲೆಗಳು ಪ್ರತಿ ಪೊಟ್ಟಣದ ಮೇಲೆ 5-10 ರೂ ನಷ್ಟು ಕಡಿಮೆಯಾಗಿವೆ.

ಯಾವ್ಯಾವ ಬ್ರೆಡ್, ಬಿಸ್ಕತ್ ದುಬಾರಿ

ಬ್ರೆಡ್/ಬಿಸ್ಕತ್ ಹೆಸರು ತೂಕ ಮೊದಲಿನ ಬೆಲೆ ಪ್ರಸ್ತುತ ಬೆಲೆ ವ್ಯತ್ಯಾಸದ ಮೊತ್ತ
ಮಾರಿಗೋಲ್ಡ್ 120 ಗ್ರಾಂ 15 ರೂ 18 ರೂ 3 ರೂ
ವೀಟಾಮಾರಿ 300 ಗ್ರಾಂ 40 ರೂ 45 ರೂ 5 ರೂ
ಮಾರಿಗೋಲ್ಡ್ ಫ್ಯಾಮಿಲಿ 250 ಗ್ರಾಂ 30 ರೂ 35 ರೂ 5 ರೂ
ನ್ಯೂಟ್ರಿಚಾಯ್ಸ್ ಡೈಜೆಸ್ಟೀವ್ 100 ಗ್ರಾಂ 20 ರೂ 25 ರೂ 5 ರೂ
ನ್ಯೂಟ್ರಿಚಾಯ್ಸ್ ಡೈಜೆಸ್ಟೀವ್ 0 100 ಗ್ರಾಂ 20 ರೂ 25 ರೂ 5 ರೂ
ಬೋರ್‍ಬನ್ 50 ಗ್ರಾಂ 25 ರೂ 30 ರೂ 5 ರೂ
ಮಿಲ್ಕಿಬಿಕಿಸ್ ಕ್ರಿಂ 250 ಗ್ರಾ 40 ರೂ 45 ರೂ 5 ರೂ
ಮಲ್ಟಿಗ್ರೇನ್ ಬ್ರೆಡ್ 400 ಗ್ರಾಂ 50 ರೂ 55 ರೂ 5 ರೂ
ಮಿಲ್ಕಿ ಪ್ಲಸ್ ಬ್ರೆಡ್ 350 ಗ್ರಾಂ 35 ರೂ 40 ರೂ 5 ರೂ
ಹೈ ಫೈಬರ್ ಬ್ರೆಡ್ 400 ಗ್ರಾಂ 45 50 ರೂ 5 ರೂ

ಮುಖ್ಯಾಂಶಗಳು

• ಬ್ರಿಟಾನಿಯಾ, ಪಾರ್ಲೆ ಕಂಪನಿ ಬಿಸ್ಕತ್ತುಗಳು ದುಬಾರಿ
• ಬಿಸ್ಕತ್ ಬೆಲೆ ಏರಿಸದ ಸನ್‍ಫಿಸ್ಟ್ ಕಂಪನಿ
• ತೂಕ ಕಡಿತಗೊಂಡ ಪಾರ್ಲೆಜಿ, ಗುಡ್ಡೆ ಬಿಸ್ಕತ್ತುಗಳು
• ತುಮಕೂರು ನಗರದ ಕೆಕೆ ಬೇಕರಿ ಬನ್ ಹಾಗೂ ನಂಜುಂಡೇಶ್ವರ ಬೇಕರಿಯ ರಾಗಿ ಬಿಸ್ಕತ್ತುಗಳು ದುಬಾರಿ

ಕಳೆದ ಹದಿನೈದು ದಿನಗಳಿಂದ ಎಲ್ಲಾ ಕಂಪನಿಗಳ ಬಿಸ್ಕತ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಕೆಲ ಕಂಪನಿಗಳು ಈಗಾಗಲೇ ಬೆಲೆ ಹೆಚ್ಚಿಸಿವೆ. ಉಳಿದ ಕಂಪನಿಗಳೂ ಸಹ ಬೆಲೆ ಏರಿಸುವ ಸಾಧ್ಯತೆಗಳಿವೆ. ಸಭೆ-ಸಮಾರಂಭಗಳಿಗೆ ಬಿಸ್ಕತ್ತುಗಳ ಆರ್ಡರ್ ಇದ್ದು, ಅದನ್ನು ಪೂರೈಸಲಾಗದೇ ಮೊನ್ನೆ ಡೀಲರ್ ಬಳಿ ಕಾಡಿಬೇಡಿ ಹಳೇಸ್ಟಾಕ್ ಇದ್ದ ಎರಡು ಕೇಸ್ ಬಿಸ್ಕತ್ತುಗಳನ್ನು ತರಿಸಿಕೊಟ್ಟಿದ್ದೇನೆ.

-ಸೋಹನ್‍ಲಾಲ್, ಸಿದ್ಧಿ ಡಿಪಾರ್ಟ್‍ಮೆಂಟಲ್ ಸ್ಟೋರ್, ಎಸ್‍ಐಟಿ ಬ್ಯಾಕ್‍ಗೇಟ್, ತುಮಕೂರು

 

ಬ್ರಾಂಡೆಡ್ ಬ್ರೆಡ್, ಬಿಸ್ಕತ್ತುಗಳ ಬೆಲೆ ಏರಿಕೆಯಿಂದ ಜನ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಸ್ವತಹ ನಾವೇ ತಯಾರಿಸುವ ಬ್ರೆಡ್, ಬಿಸ್ಕತ್ತುಗಳ ಬೆಲೆಗಳನ್ನು ಸದ್ಯ ಏರಿಕೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಆದರೂ ಆಗಬಹುದು.

-ಪುನೀತ್, ಎಲ್.ಜೆ.ಅಯ್ಯಂಗಾರ್ ಬೇಕರಿ, ಎಸ್‍ಐಟಿ ಬ್ಯಾಕ್‍ಗೇಟ್, ತುಮಕೂರು

 

ಒಪ್ಪೊತ್ತಿನ ಊಟವಾಗಿದ್ದ ಬನ್ನು, ಬಿಸ್ಕತ್ತು : ಪ್ರಸ್ತುತ ಬೆಲೆ ಏರಿಕೆಯ ದಿನಗಳು ಸೇರಿದಂತೆ ಮೊದಲಿನಿಂದಲೂ ಎಷ್ಟೋ ಜನ ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು, ಬೀದಿ ಬದಿ ವ್ಯಾಪಾರಿಗಳು, ಹಮಾಲರು, ಆಟೋ-ಟ್ಯಾಕ್ಸಿ ಚಾಲಕರು ಹೊಟೇಲ್‍ಗಳ ಊಟ ದುಬಾರಿಯೆಂದು ಮಧ್ಯಾಹ್ನದ ಒಪ್ಪೊತ್ತಿನ ಊಟವಾಗಿ ಟೀ ಜೊತೆ 5 ರೂ ಬನ್ನನ್ನೊ, 10 ರೂ ಬಿಸ್ಕತ್ ಪೊಟ್ಟಣವನ್ನೊ ತಿಂದು ತಮ್ಮ ಹಸಿವು ನೀಗಿಸಿಕೊಳ್ಳುತ್ತಿದ್ದರು. ಆದರೇ ಈಗ ಬನ್ನು, ಬ್ರೆಡ್, ಬಿಸ್ಕತ್ತುಗಳ ಬೆಲೆಗಳು ದುಬಾರಿಯಾಗಿದ್ದು ಈ ವರ್ಗಗಳ ಒಪ್ಪೊತ್ತಿನ ಊಟಕ್ಕೂ ಸಂಚಕಾರವಾಗಿದೆ.

      -ಚಿದಾನಂದ್ ಹುಳಿಯಾರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link