ಇಂದು ಸಿದ್ದರಾಮಯ್ಯ- ಡಿಕೆ ಶಿವಕುಮಾರ್‌ ಬ್ರೇಕ್‌ಫಾಸ್ಟ್‌ ಮೀಟಿಂಗ್‌

ಬೆಂಗಳೂರು

     ರಾಜ್ಯ ಕಾಂಗ್ರೆಸ್ ನಲ್ಲಿ ಬಣ ಬಡಿದಾಟದ  ನಡುವೆ ಇಂದು ಬೆಂಗಳೂರಿನ ಸಿಎಂ ನಿವಾಸ ಕಾವೇರಿಯಲ್ಲಿ ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ  ಹಾಗೂ ಡಿಸಿಎಂ ಡಿಕೆ ಶಿವಕುಮಾರ್  ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಯಲಿದೆ. ಇದರ ಮಧ್ಯೆ ಸಿಎಂ ಸಿದ್ದರಾಮಯ್ಯ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುತ್ತೇನೆ. ಹೈಕಮಾಂಡ್‌ನವರು ನನಗೂ ಹಾಗೂ ಡಿಕೆ ಶಿವಕುಮಾರ್ ಅವರಿಗೂ ಕರೆ ಮಾಡಿದ್ದರು. ಹೈಕಮಾಂಡ್ ಏನು ಹೇಳುತ್ತಾರೋ ಕೇಳುತ್ತೇನೆ. ನಾಳೆ ನಾನು ಮತ್ತು ಡಿಕೆ ಶಿವಕುಮಾರ್ ಮಾತಾಡಿಕೊಂಡು ಹೋಗುತ್ತೇವೆ. ಹಾಗಾಗಿ ನಾಳೆ ಕಾವೇರಿ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್ ಆಯೋಜನೆ ಮಾಡಲಾಗಿದೆ. ಆ ಸಭೆಯಲ್ಲಿ ಡಿಕೆ ಶಿವಕುಮಾರ್ ಹಾಗೂ ನಾನು ಮಾತಾಡಿಕೊಂಡು ದೆಹಲಿ ನಾಯಕರು ಕರೆದರೆ ಹೋಗುತ್ತೇನೆ ಎಂದಿದ್ದಾರೆ.

     ನಿನ್ನೆ ಡಿಕೆ ಶಿವಕುಮಾರ್ ದೆಹಲಿಗೆ ತೆರಳಬೇಕಿತ್ತು. ಶನಿವಾರ ಅಥವಾ ಭಾನುವಾರ ಕಾಂಗ್ರೆಸ್​​ ಹೈಕಮಾಂಡ್​ ರಾಜ್ಯದ ಸಿಎಂ ಬದಲಾವಣೆ ವಿಚಾರವಾಗಿ ಮಹತ್ವದ ಸಭೆ ನಡೆಸಲಿದ್ದಾರೆ. ಈ ಸಭೆಗೂ ಮುನ್ನ ಡಿ.ಕೆ ಶಿವಕುಮಾರ್​ ಅವರು ಸೋನಿಯಾ ಗಾಂಧಿ ಅವರನ್ನ ಭೇಟಿಗೆ ಯತ್ನಿಸಿದ್ದರು ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರು ಕೂಡ ಒಂದು ದಿನ ಮುಂಚಿತವಾಗಿ ಅಂದರೆ ಶುಕ್ರವಾರ ಸಂಜೆ 7 ಗಂಟೆಗೆ ದೆಹಲಿ ಹೊರಡಲು ಸಜ್ಜಾಗಿದ್ದರು. ಆದರೆ ಕೊನೆ ಕ್ಷಣದಲ್ಲಿ ಡಿಕೆಶಿ ತಮ್ಮ ದೆಹಲಿ ಪ್ರವಾಸವನ್ನ ರದ್ದುಗೊಳಿಸಿ ತಮ್ಮ ಸದಾಶಿವನಗರದ ಮನೆಯಲ್ಲಿ ವಿಶ್ರಾಂತಿ ಪಡೆದರು. 

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ಮೂಲಕ ಕಾಂಗ್ರೆಸ್ ಹೈಕಮಾಂಡ್ ಇಬ್ಬರಿಗೂ ಸಂದೇಶ ರವಾನಿಸಿತ್ತು ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಮಾತುಕತೆ ನಡೆಸುವಂತೆ ಹೈಕಮಾಂಡ್ ಸೂಚಿಸಿತ್ತು. ದೆಹಲಿಗೆ ಬರುವಾಗ ಸಿಎಂ ಹಾಗೂ ಡಿಸಿಎಂ ಒಟ್ಟಿಗೆ ಮಾತಾಡಿಕೊಂಡು ಬರುವಂತೆ ಸೂಚನೆ ನೀಡಿದೆ. ಇದೇ ಕಾರಣಕ್ಕೆ ಈಗ ದೆಹಲಿಗೆ ಹೋಗುವ ಮುನ್ನ ಸಿಎಂ ಜೊತೆ ಮಾತಾಡಲು ಡಿಕೆಶಿ ಮುಂದಾದರು ಎನ್ನಲಾಗಿದೆ.

     ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಬಣ ಬಡಿದಾಟ ಹೆಚ್ಚಿತ್ತು. ಡಿಕೆಶಿ ಪರ ಮಠಾಧೀಶರು, ಒಕ್ಕಲಿಗ ಸಂಘಟನೆಗಳು ಧ್ವನಿ ಎತ್ತಿದ್ದವು. ಸಿದ್ದರಾಮಯ್ಯ ಪರ ಹಲವು ಸಚಿವರು, ಅಹಿಂದ ಸಂಘಟನೆಗಳು ಹಾಗೂ ಮಠಾಧೀಶರು ಮಾತನಾಡಿದ್ದರು. ಇಬ್ಬರು ನಾಯಕರ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳು ಕೂಡ ಮಾರ್ಮಿಕವಾಗಿ ಸಂದೇಶವನ್ನು ಹಂಚಿಕೊಂಡಿದ್ದವು.

Recent Articles

spot_img

Related Stories

Share via
Copy link