ನವದೆಹಲಿ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬ್ರೆಜಿಲ್‌ನ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಕಿಸ್ತಾನವು ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಪಾಕಿಸ್ತಾನಕ್ಕೆ ಛೀ ಮಾರಿ ಹಾಕಿದ ರಾಷ್ಟ್ರಗಳಿಗೆ ಮೋದಿ ಧನ್ಯವಾದ ಸಲ್ಲಿಸಿದ್ದು, ಇದೇ ವೇಳೆ ಪಾಕಿಸ್ತಾನ ನಡೆಸಿದ ಹೀನ ಕೃತ್ಯವನ್ನು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಏಪ್ರಿಲ್ 22, 2025ರಂದು ಪಾಕ್ ಬೆಂಬಲಿತ ಉಗ್ರರು ನಡೆಸಿದ ಈ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತವು ‘ಆಪರೇಷನ್ ಸಿಂದೂರ್’ ಆರಂಭಿಸಿ, ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯ ಹಾಗೂ ವಾಯುನೆಲೆಗಳ ಮೇಲೆ ದಾಳಿ ನಡೆಸಿತು.
ಈ ವಿಷಯ ಕುರಿತಾಗಿ ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತನಾಡಿದ ಮೋದಿ, “ಭಾರತವು ಭಯೋತ್ಪಾದನೆಯ ಬಲಿಪಶುವಾದರೆ, ಪಾಕಿಸ್ತಾನವು ಅದರ ಬೆಂಬಲಿಗ. ಇವೆರಡನ್ನೂ ಒಂದೇ ತಕ್ಕಡಿಯಲ್ಲಿ ತೂಗಲಾಗದು” ಎಂದರು. ವೈಯಕ್ತಿಕ ಅಥವಾ ರಾಜಕೀಯ ಲಾಭಕ್ಕಾಗಿ ಭಯೋತ್ಪಾದನೆಯ ವಿರುದ್ಧ ಮೌನವಾಗಿರುವವರನ್ನು ಟೀಕಿಸಿದ ಅವರು, ಉಗ್ರರಿಗೆ ಸಹಕಾರ ಹಾಗೂ ಸಮ್ಮತಿ ನೀಡುವುದು ಸ್ವೀಕಾರಾರ್ಹವಲ್ಲ ಎಂದು ಒತ್ತಿ ಹೇಳಿದರು. ಪಾಕಿಸ್ತಾನವು ತನ್ನ ನೆಲದಲ್ಲಿ ಉಗ್ರರಿಗೆ ಆಶ್ರಯ ನೀಡುವ ಮೂಲಕ ಭಯೋತ್ಪಾದನೆಯನ್ನು ರಾಜ್ಯ ನೀತಿಯಾಗಿ ಬಳಸುತ್ತಿರುವುದನ್ನು ಭಾರತವು ಪದೇ ಪದೇ ಸಾಕ್ಷ್ಯಗಳೊಂದಿಗೆ ಸಾಬೀತುಪಡಿಸಿದೆ ಎಂದರು.
2026ರಲ್ಲಿ ಭಾರತವು ಬಿಆರ್‌ಐಸಿಎಸ್ ಶೃಂಗಸಭೆಯನ್ನು ಆಯೋಜಿಸಲಿದೆ. ‘ರಿಯೊ ಡಿ ಜನೈರೊ ಘೋಷಣೆ’ ಎಂಬ ಜಂಟಿ ಘೋಷಣೆಯಲ್ಲಿ, ಯಾವುದೇ ಉಗ್ರ ಕೃತ್ಯವನ್ನು ಅಪರಾಧ ಮತ್ತು ಸಮರ್ಥನೀಯವಲ್ಲ ಎಂದು ಬ್ರಿಕ್ಸ್ ನಾಯಕರು ಖಂಡಿಸಿದ್ದಾರೆ. “ಪಹಲ್ಗಾಮ್‌ನ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇವೆ. ಗಡಿಯಾಚೆಗಿನ ಉಗ್ರರ ಚಲನೆ, ಭಯೋತ್ಪಾದನೆಗೆ ಹಣಕಾಸು ಮತ್ತು ಆಶ್ರಯದ ವ್ಯವಸ್ಥೆಯನ್ನು ಮಾಡುತ್ತಿರುವವರ ವಿರುದ್ಧ ನಾವು ಕ್ರಮ ತೆಗೆದುಕೊಳ್ಳಲು ಬದ್ಧರಾಗಿದ್ದೇವೆ” ಎಂದು ಘೋಷಣೆ ತಿಳಿಸಿದ್ದು, ಆದರೆ ಎಲ್ಲೂ ಪಾಕಿಸ್ತಾನದ ಹೆಸರನ್ನು ನೇರವಾಗಿ ಉಲ್ಲೇಖಿಸಿಲ್ಲ.
2017ರ ಚೀನಾದ ಕ್ಸಿಯಾಮೆನ್‌ನ ಬ್ರಿಕ್ಸ್ ಶೃಂಗಸಭೆಯನ್ನು, ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್, ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ ಮತ್ತು ಹಿಜ್ಬ್-ಉತ್-ತಹ್ರೀರ್‌ನಂತಹ ಪಾಕ್ ಮೂಲದ ಉಗ್ರ ಸಂಘಟನೆಗಳನ್ನು ಘೋಷಣೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. “ಭಯೋತ್ಪಾದನೆಯನ್ನು ನಿಯಂತ್ರಿಸಲು ಸಂಪೂರ್ಣ ಸಹಕಾರವನ್ನು ನಾವು ನೀಡಲಿದ್ದು, ವಿಶ್ವಸಂಸ್ಥೆ ಚೌಕಟ್ಟಿನಲ್ಲಿ ಅಗತ್ಯ ಇರುವ ಬೆಂಬಲವನ್ನು ಒದಗಿಸುವ ಮೂಲಕ ಶೀಘ್ರವಾಗಿ ಭಯೋತ್ಪಾದನೆ ಚಟುವಟಿಕೆಗಳನ್ನು ಅಂತಿಮಗೊಳಿಸಲು ಕರೆ ನೀಡುತ್ತೇವೆ” ಎಂದು ರಿಯೊ ಘೋಷಣೆ ಒತ್ತಿಹೇಳಿದೆ.








