ತಿರುವನಂತಪುರಂ:
ಭಾರತದಲ್ಲಿ ಮದುವೆಯನ್ನು ಅತ್ಯಂತ ವೈಭವದಿಂದ ನಡೆಸಲಾಗುತ್ತದೆ. ಈ ವೇಳೆ ಶಾಸ್ತ್ರ-ಸಂಪ್ರದಾಯಗಳು ಕೂಡ ಬಹಳ ಮುಖ್ಯವಾಗಿರುತ್ತದೆ. ಈ ಪೈಕಿ ನವ ವಧು-ವರರಿಗೆ ಬಂದಿರುವ ಅತಿಥಿಗಳು ಉಡುಗೊರೆ ಕೊಡುವುದು ಕೂಡ ಆಚರಣೆಯ ಒಂದು ಭಾಗ. ಕೆಲವರು ದುಬಾರಿ ಉಡುಗೊರೆಗಳನ್ನು ಕೊಡುತ್ತಾರೆ.
ಆದರೆ ಹೆಚ್ಚಿನ ಮಂದಿ ಹಣ ಕೊಡುವುದು ವಾಡಿಕೆ. ಇದೀಗ ಕೇರಳದಲ್ಲಿ ನಡೆದ ವಿವಾಹವೊಂದರಲ್ಲಿ ಇದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಡಿಜಿಟಲ್ ರೂಪ ಪಡೆದಿದೆ. ವಧುವಿನ ತಂದೆ ತಮ್ಮ ಶರ್ಟ್ ಮೇಲೆ ಪೇಟಿಎಂ ಕ್ಯುಆರ್ ಕೋಡ್ ಬ್ಯಾಡ್ಜ್ ಧರಿಸಿದ್ದರು. ಅತಿಥಿಗಳಲ್ಲಿ ಆನ್‌ಲೈನ್ ಮೂಲಕ ನಗದು ರೂಪದಲ್ಲಿ ಉಡುಗೊರೆ ಕೊಡುವಂತೆ ಕೇಳಿಕೊಂಡರು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಧುವಿನ ತಂದೆಯ ಈ ವಿಶಿಷ್ಟ ಚಿಂತನೆಯಿಂದಾಗಿ ರಾತ್ರೋರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ವಿಡಿಯೊದಲ್ಲಿ, ಮದುವೆಯು ವೈಭವದಿಂದ ನಡೆಯುತ್ತಿದ್ದರೆ, ಶರ್ಟ್ ಮೇಲೆ ಕ್ಯುಆರ್ ಕೋಡ್ ಅಂಟಿಸಿ ತಂದೆ ನಗುತ್ತಿರುವುದನ್ನು ನೋಡಬಹುದು. ಅತಿಥಿಗಳು ಸಾಮಾನ್ಯವಾಗಿ ಲಕೋಟೆ ಮೂಲಕ ಉಡುಗೊರೆ ಹಸ್ತಾಂತರಿಸುವ ಬದಲು ಸ್ಕ್ಯಾನ್ ಮಾಡಿ ಹಣವನ್ನು ವರ್ಗಾಯಿಸಿದ್ದಾರೆ. ಇದು ಪರಿಸರ ಸ್ನೇಹಿ ಮತ್ತು ಭಾರತದ ಬೆಳೆಯುತ್ತಿರುವ ಡಿಜಿಟಲ್ ಪಾವತಿ ಸಂಸ್ಕೃತಿಗೆ ಅನುಗುಣವಾಗಿದೆ.
ಮದುವೆಯಲ್ಲಿ ನಗದು ರಹಿತ ಉಡುಗೊರೆ ಎಂಬ ಈ ನವೀನ ಕಲ್ಪನೆಯು ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆದಿದೆ. ಜನರು ಆ ವ್ಯಕ್ತಿಯ ಮುಂದಾಲೋಚನೆ ಮತ್ತು ಧೈರ್ಯಶಾಲಿ ಕಾರ್ಯದ ಬಗ್ಗೆ ಕೊಂಡಾಡಿದ್ದಾರೆ. ನೆಟ್ಟಿಗರು ಕೂಡ ಇದರ ಹಿಂದಿನ ಪ್ರಾಯೋಗಿಕತೆಯನ್ನು ಶ್ಲಾಘಿಸಿದ್ದಾರೆ. ಅವರನ್ನು ಡಿಜಿಟಲ್ ಇಂಡಿಯಾದ ನಿಜವಾದ ರಾಯಭಾರಿ ಎಂದು ಕರೆದಿದ್ದಾರೆ.
ಸದ್ಯ ಈ ಪೋಸ್ಟ್ ಭಾರಿ ವೈರಲ್ ಆಗಿದ್ದು, ಮಜವಾದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಬಿಲ್ ಪಾವತಿಸಿ ಮತ್ತು ತಿನ್ನಿರಿ ಎಂದು ಒಬ್ಬ ಬಳಕೆದಾರರು ತಮಾಷೆ ಮಾಡಿದರೆ, ಇನ್ನೊಬ್ಬರು, ಈಗ 100 ರೂಪಾಯಿ ಹಾಕಲು ಆಗುವುದಿಲ್ಲ ಎಂದು ಲೇವಡಿ ಮಾಡಿದರು. ಸ್ಕ್ಯಾನ್ ಮಾಡಿ, ಊಟ ಮಾಡಿ ಎಂದು ಕೆಲವರು ಟೀಕಿಸಿದರು. ಕೆಲವರು ಈ ವಿಡಿಯೊವನ್ನು ನೋಡಿ ಮನರಂಜನೆ ಪಡೆದರೆ ಇನ್ನೂ ಕೆಲವರು ಅಪನಂಬಿಕೆ ವ್ಯಕ್ತಪಡಿಸಿದರು. ಮದುವೆ ಅಲ್ಲ ವ್ಯವಹಾರ ಎಂದು ವ್ಯಕ್ತಿಯೊಬ್ಬರು ಟೀಕಿಸಿದರು.
ಈ ವಿಡಿಯೊದಿಂದ ಸಾಮಾಜಿಕ ಮಾಧ್ಯಮ ಬಳಕೆದಾರರು ಅಷ್ಟೇನೂ ಪ್ರಭಾವಿತರಾದಂತೆ ಕಂಡುಬಂದಿಲ್ಲ. ಭಿಕ್ಷೆ ಬೇಡುವ ಅತ್ಯುತ್ತಮ ಮಾರ್ಗ, ಸ್ವಲ್ಪವೂ ಸಭ್ಯತೆಯಿಲ್ಲ ಎಂದು ಒಬ್ಬ ಬಳಕೆದಾರರು ಬರೆದರೆ, ನಿಮ್ಮ ಮಗಳ ಮದುವೆಯಿಂದ ಹಣ ಸಂಪಾದಿಸುವುದು ತುಂಬ ಅಸಹ್ಯ ಎಂದು ಇನ್ನೊಬ್ಬ ಬಳಕೆದಾರರು ಹೇಳಿದರು. ವಿವಾಹಗಳು ಉಡುಗೊರೆಗಳ ಮೇಲೆ ಅಲ್ಲ, ಆಶೀರ್ವಾದಗಳ ಮೇಲೆ ಮಾತ್ರ ಕೇಂದ್ರೀಕರಿಸುತ್ತದೆ ಎಂದು ಮಗದೊಬ್ಬರು ಹಂಚಿಕೊಂಡರು.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪಾವತಿ ಹೆಚ್ಚುತ್ತಿದೆ. ಬಹುತೇಕ ಮಂದಿ ನಗದಿನ ಬದಲು ಡಿಜಿಟಲ್ ಮೂಲಕ ಪಾವತಿ ಮಾಡುತ್ತಿದ್ದಾರೆ. ಯಾವುದೇ ವಸ್ತು, ಆಹಾರ ತೆಗೆದುಕೊಳ್ಳುವುದಿರಲಿ ಅಥವಾ ಯಾರಿಗಾದರೂ ಸಾಲ ನೀಡುವುದಿದ್ದರೆ ಕೂಡ ಡಿಜಿಟಲ್ ರೂಪದಲ್ಲಿ ನೀಡುತ್ತಾರೆ. ಇದೀಗ ಮದುವೆಯಲ್ಲೂ ಕ್ಯುಆರ್ ಕೋಡ್ ಬಂದಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

 


