ನವದೆಹಲಿ:
ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಪೋಕ್ಸೊ ಕಾಯ್ದೆಯಡಿ ದಾಖಲಾಗಿದ್ದ ಲೈಂಗಿಕ ಕಿರುಕುಳ ಪ್ರಕರಣವನ್ನು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ರದ್ದುಪಡಿಸಲು ಸೂಚಿಸಿದೆ. ಅಪ್ರಾಪ್ತ ವಯಸ್ಕ ಮಹಿಳಾ ಕುಸ್ತಿಪಟುವಿಗೆ ಲೈಂಗಿಕ ಕಿರುಕುಳ ನೀಡಿದ ದೂರು ಬ್ರಿಜ್ಭೂಷಣ್ ವಿರುದ್ಧ ದಾಖಲಾಗಿತ್ತು. ಆದರೆ ತಮ್ಮ ವಿರುದ್ಧದ ಈ ಆರೋಪಗಳನ್ನು ಬ್ರಿಜ್ ಭೂಷಣ್ ಶರಣ್ ಸಿಂಗ್ ಸತತವಾಗಿ ಅಲ್ಲಗಳೆದಿದ್ದರು.
ಈ ಹಿಂದೆ ಆಗಸ್ಟ್ 1, 2023ರಂದು ನಡೆದಿದ್ದ ವಿಚಾರಣೆಯ ಸಂದರ್ಭದಲ್ಲಿ, ದೂರುದಾರೆ ಅಪ್ರಾಪ್ತ ಬಾಲಕಿ, ಈ ಪ್ರಕರಣದಲ್ಲಿ ದಿಲ್ಲಿ ಪೊಲೀಸರು ನಡೆಸುತ್ತಿರುವ ತನಿಖೆಯ ಬಗ್ಗೆ ನಾನು ತೃಪ್ತಳಾಗಿದ್ದೇನೆ ಹಾಗೂ ಅವರು ಸಲ್ಲಿಸುವ ಮುಕ್ತಾಯ ವರದಿಯನ್ನು ನಾನು ವಿರೋಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಳು.
ದೂರುದಾರೆಯ ತಂದೆ ಕೂಡ ಬ್ರಿಜ್ ಭೂಷಣ್ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದೆ ಎಂದು ಪ್ರಕರಣದ ವಿಚಾರಣೆಯ ಮಧ್ಯಭಾಗದಲ್ಲಿ ಹೇಳಿಕೆ ನೀಡಿದ್ದರು. ಹೀಗಾಗಿ ಜೂನ್ 15, 2023ರಂದು ಪ್ರಕರಣವನ್ನು ರದ್ದುಗೊಳಿಸುವಂತೆ ದಿಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಮುಕ್ತಾಯ ವರದಿಯನ್ನು ಸಲ್ಲಿಸಿದ್ದರು.
ಅಪ್ತಾಪ್ತ ಬಾಲಕಿಯನ್ನು ಒಳಗೊಂಡಿರುವ ದೂರಿನಲ್ಲಿ ಯಾವುದೇ ಸಮರ್ಥನೀಯ ಪುರಾವೆ ಇಲ್ಲದಿರುವುದರಿಂದ, ಸದರಿ ದೂರನ್ನು ವಜಾಗೊಳಿಸಬೇಕು ಎಂದು ದಿಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಶಿಫಾರಸು ಮಾಡಿದ್ದರು. ಆದರೆ ಆರು ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಹಾಗೂ ಅವರನ್ನು ಹಿಂಬಾಲಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ದಾಖಲಾಗಿರುವ ಪ್ರತ್ಯೇಕ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
