ನವದೆಹಲಿ:
ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಸಂಸ್ಥೆಯ ಮಾಜಿ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಇತರರಿಗೆ ಮಧ್ಯಂತರ ಜಾಮೀನು ಮಂಜೂರಾಗಿದೆ.
ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಪ್ರಕರಣದ ಮತ್ತೋರ್ವ ಆರೋಪಿ ವಿನೋದ್ ತೋಮರ್ ಗೆ ಇಂದು ಮದ್ಯಂತರ ಜಾಮೀನು ಮಂಜೂರು ಮಾಡಿದೆ.
ಅಂತೆಯೇ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ವಿನೋದ್ ತೋಮರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಜುಲೈ 20ಕ್ಕೆ ಮುಂದೂಡಿದೆ. ಮುಂದಿನ ವಿಚಾರಣೆಯ ದಿನಾಂಕದವರೆಗೆ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿದೆ ಎಂದು ತಿಳಿಸಿದೆ.
ಪೊಲೀಸರು ಸಲ್ಲಿಸಿದ್ದ ಜಾರ್ಜ್ ಶೀಟ್ ಹೊರತಾಗಿಯೂ ಬ್ರಿಜ್ ಭೂಷಣ್ ಗೆ ಜಾಮೀನು ದೊರೆತಿರುವುದು ಹಲವರ ಹುಬ್ಬೇರಿಸಿದೆ. ಚಾರ್ಜ್ ಶೀಟ್ ನಲ್ಲಿ ಹಲವು ಗಂಭೀರ ಆರೋಪಗಳಿದ್ದರೂ ಅವರನ್ನೇಕೆ ಬಂಧಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ್ದ ದೆಹಲಿ ಪೊಲೀಸರು, ಬ್ರಿಜ್ ಭೂಷಣ್ ಅವರು ನಿರ್ದೇಶನಗಳನ್ನು ಪಾಲಿಸಿದ್ದಾರೆ ಮತ್ತು ತನಿಖೆಗೆ ಸಹಕಾರ ನೀಡಿದ್ದಾರೆ ಎಂದು ತಿಳಿಸಿದ್ದರು.
ಕುಸ್ತಿಪಟುಗಳು ಸುಪ್ರೀಂ ಕೋರ್ಟ್‌ಗೆ ತೆರಳಿದ ನಂತರ ಎಫ್‌ಐಆರ್ ದಾಖಲಿಸಿದ ದೆಹಲಿ ಪೊಲೀಸರು, ಏಳು ವರ್ಷಗಳವರೆಗಿನ ಶಿಕ್ಷಾರ್ಹ ಅಪರಾಧಗಳ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಬಾರದು ಎಂದು ನ್ಯಾಯಾಲಯದ ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ. ಚಾರ್ಜ್‌ಶೀಟ್‌ನ ಪ್ರಕಾರ, ಕುಸ್ತಿ ಫೆಡರೇಷನ್‌ನ ಸಿಬ್ಬಂದಿಗಳು ಕುಸ್ತಿಪಟುಗಳ ಹೇಳಿಕೆಗಳನ್ನು ದೃಢೀಕರಿಸಲಿಲ್ಲ ಮತ್ತು ಪೊಲೀಸರು ಪದೇ ಪದೇ ವಿನಂತಿಸಿದರೂ ಬೆದರಿಕೆ ಕರೆಗಳ ಕುರಿತು ಕುಸ್ತಿಪಟುಗಳಿಂದ ಯಾವುದೇ ಪುರಾವೆಗಳನ್ನು ಒದಗಿಸಲಾಗಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ