ಬೆಂಗಳೂರು:
ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನ ಉದ್ಯಾನವನ್ನು ಡಿಸ್ನಿ ಮಾದರಿಯಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದು, ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಟೆಂಡರ್ ಪ್ರಶ್ನಿಸಿ ಮಂಡ್ಯ ತಾಲ್ಲೂಕಿನ ಗೋಪಾಲಪುರ ಗ್ರಾಮದ ಕೃಷಿಕ ಕೆ ಬೋರಯ್ಯ ಸೇರಿದಂತೆ ಒಟ್ಟು ಐವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ ಎಂ ಶ್ಯಾಮ್‌ಪ್ರಸಾದ್ ಮತ್ತು ಕೆ ವಿ ಅರವಿಂದ್ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಉದ್ದೇಶಿತ ಮನೋರಂಜನಾ ಪಾರ್ಕ್‌ನಿಂದ ಕೆಆರ್‌ಎಸ್ ಅಣೆಕಟ್ಟೆಯ ಸುರಕ್ಷತೆಗೆ ತೀವ್ರ ಧಕ್ಕೆ ಉಂಟಾಗಲಿದೆ. ಸುತ್ತಮುತ್ತಲಿನ ಫಲವತ್ತಾದ 198 ಎಕರೆ ಕೃಷಿ ಜಮೀನನ್ನು ಇದಕ್ಕಾಗಿ ವಶಪಡಿಸಿಕೊಂಡರೆ ಇಲ್ಲಿರುವ ಜೀವವೈವಿಧ್ಯ ಮತ್ತು ಪರಿಸರ ಸಂರಕ್ಷಣೆಗೆ ಇನ್ನಿಲ್ಲದ ಹಾನಿಯಾಗಲಿದೆ. ಅಭಿವೃದ್ಧಿಯ ಹೆಸರಿನಲ್ಲಿ ವ್ಯಾಪಕವಾದ ವಾಣಿಜ್ಯ ಚಟುವಟಿಕೆಗಳಿಗೆ ಇಂಬು ನೀಡುವ ಮೂಲಕ ಸುತ್ತಲಿನ ಪರಿಸರದ ಅಸಮತೋಲನಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ’ ಎಂದು ಹೇಳಿದರು.
ಈ ಟೆಂಡರ್ ಘೋಷಣೆ ಏಕಪಕ್ಷೀಯವಾಗಿದೆ. ರಾಜ್ಯ ಸರ್ಕಾರ ರಾಷ್ಟ್ರೀಯ ಅಣೆಕಟ್ಟೆ ಸುರಕ್ಷಾ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಪಡೆದಿರುವುದಿಲ್ಲ. ಈ ಪಾರ್ಕ್ ನಿರ್ಮಾಣದಿಂದ ಆಗಲಿರುವ ಲಾಭ–ನಷ್ಟಗಳನ್ನೂ ಸಾರ್ವಜನಿಕರ ಅವಗಾಹನೆಗೂ ತಂದಿರುವುದಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ನೀರಾವರಿ ನಿಗಮವು ಇದೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ ಬಿ ವರಾಳೆ ಮತ್ತು ಕೃಷ್ಣ ಎಸ್.ದೀಕ್ಷಿತ್ ಅವರ ವಿಭಾಗೀಯ ಪೀಠದ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ.
ಅಮ್ಯೂಸ್‌ಮೆಂಟ್ ಮತ್ತು ಥೀಮ್ ಪಾರ್ಕ್ ನಿರ್ಮಾಣದಿಂದ ರಾಜ್ಯದ ಪ್ರತಿಷ್ಠೆಯ ಸಂಕೇತವಾಗಿರುವ ಮತ್ತು ಕೋಟ್ಯಂತರ ರೈತರ ಜೀವನಾಡಿಯಾದ ಕೆಆರ್‌ಎಸ್ ಅಣೆಕಟ್ಟೆಗೆ ಧಕ್ಕೆ ಉಂಟಾಗಲಿದೆ. ಹಾಗಾಗಿ, ಕೋರ್ಟ್ ನೀಡುವ ಮುಂದಿನ ಆದೇಶದವರೆಗೆ ಟೆಂಡರ್ ಅಧಿಸೂಚನೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳಿಗೆ ತಡೆ ನೀಡಬೇಕೆಂದು ಮನವಿ ಮಾಡಿದರು.
ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ, ಟೆಂಡರ್ ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿರುವ ಸಾರ್ವಜನಿಕ ಖಾಸಗಿ ಸಹಭಾಗಿತ್ವದ (ಪಿಪಿಪಿ) ಯೋಜನೆಯ ರೂಪುರೇಷೆಗಳೇನು ಎಂಬುದನ್ನು ಮುಂದಿನ ವಿಚಾರಣೆಯಲ್ಲಿ ಕೋರ್ಟ್‌ಗೆ ವಿಶದಪಡಿಸಿ’ ಎಂದು ರಾಜ್ಯ ಸರ್ಕಾರದ ಪರ ವಕೀಲರಿಗೆ ಮೌಖಿಕವಾಗಿ ನಿರ್ದೇಶಿಸಿತು.
ಅಂತೆಯೇ, ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ, ರಾಷ್ಟ್ರೀಯ ಅಣೆಕಟ್ಟೆ ಸುರಕ್ಷಾ ಪ್ರಾಧಿಕಾರದ ಅಧ್ಯಕ್ಷ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಒಟ್ಟು 17 ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆಯನ್ನು ಜೂನ್ 9ಕ್ಕೆ ಮುಂದೂಡಿತು.
