ಗೌರವಪೂರ್ವಕ ವಿದಾಯವಿಲ್ಲದೆ ನಿರ್ಗಮಿಸಿದ ಜನನಾಯಕ!

 ತುಮಕೂರು : 

     ಕಳೆದ ಕೆಲವು ತಿಂಗಳಿಂದ ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆ ಕುರಿತು ಎದ್ದಿದ್ದ ಗೊಂದಲಗಳಿಗೆ ಬಿಜೆಪಿ ಸರಕಾರದ 2 ವರ್ಷಗಳ ಸಾಧನಾ ಸಮಾವೇಶದ ದಿನವೇ ತೆರೆಬಿದ್ದಿದ್ದು, ಹೈಕಮಾಂಡ್ ಸಂದೇಶಕ್ಕಾಗಿ ಕಾಯುತ್ತಿರುವೆ ಎಂದು ಭಾನುವಾರವಷ್ಟೇ ಹೇಳಿದ್ದ ಬಿಎಸ್‍ವೈ ಸೋಮವಾರ ಬೆಳಿಗ್ಗೆ ಸರಕಾರದ 2 ವರ್ಷದ ಸಾಧನಾ ಸಮಾವೇಶದ ವೇದಿಕೆಯಲ್ಲಿ ಭಾವುಕರಾಗಿ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದು, ಯಡಿಯೂರಪ್ಪ ದುರಂತ ನಾಯಕರ ಸಾಲಿನ ಇತಿಹಾಸದ ಪುಟ ಸೇರುವಂತೆ ಮಾಡಿದೆ.

     ಯಡಿಯೂರಪ್ಪ ಅವರ ಮೇಲೆ ಸ್ವಜನಪಕ್ಷಪಾತ, ಆಡಳಿತದಲ್ಲಿ ಕುಟುಂಬದವರ ಹಸ್ತಕ್ಷೇಪ, ಭ್ರಷ್ಟಾಚಾರ ಆರೋಪಗಳೇನೇ ಇದ್ದರೂ ಅವರು ಹೋರಾಟದಿಂದ ಕರ್ನಾಟಕದ ಜನಪ್ರಿಯ ನಾಯಕರಾಗಿ ಬೆಳೆದಿದ್ದು ಮಾತ್ರ ಸುಳ್ಳಲ್ಲ. ಶಿಕಾರಿಪುರದ ಪುರಸಭೆ ಅಧ್ಯಕ್ಷಗಾದಿಯಿಂದ ಮುಖ್ಯಮಂತ್ರಿ ಸ್ಥಾನದವರೆಗೆ ಕಾಲಿಗೆ ಚಕ್ರ ಕಟ್ಟಿದಂತೆ ಬಿಜೆಪಿ ಪಕ್ಷ ಕಟ್ಟಲು ರಾಜಾ ತ ಸಂಚರಿಸಿದ ಜನನಾಯಕನನ್ನು ರಾಜಕೀಯದ ಕಡೇಗಾಲದಲ್ಲಿ ಪಕ್ಷ ನಡೆಸಿಕೊಂಡ ರೀತಿ, ಗೌರವಪೂರ್ಣ ನಿರ್ಗಮನಕ್ಕೆ ಆಸ್ಪದ ಮಾಡಕೊಡದೇ ಅಧಿಕಾರಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದ್ದು ರಾಜ್ಯದ ಅವರ ಅಪಾರ ಅಭಿಮಾನಿಗಳು ಹಾಗೂ ಪ್ರಬಲ ವೀರಶೈವ – ಲಿಂಗಾಯತ ಸಮುದಾಯದವರಲ್ಲಿ ಭಾರೀ ಆಕ್ರೋಶ ಉಂಟುಮಾಡಿದೆ.

      ಅಧಿಕಾರ ಸಿಕ್ಕಾಗಲೆಲ್ಲ ಪೂರ್ಣಾವಧಿ ಪೂರೈಸಲಾಗದ ಯಡಿಯೂರಪ್ಪ ಅವರನ್ನು ಈ ಬಾರಿಯಾದರೂ ಮುಖ್ಯಮಂತ್ರಿಯಾಗಿ ಚುನಾವಣೆಯವರೆಗೆ ಮುಂದುವರಿಸಬೇಕೆಂದು ಸಿದ್ಧಗಂಗಾ ಶ್ರೀ, ಮುರುಘಾಶರಣರು, ರಂಭಾಪುರಿ, ಪೇಜಾವರ ಶ್ರೀಗಳು ಸೇರಿ ನಾಡಿನ ಹಲವು ಮಠಾಧೀಶರು, ಅಖಿಲ ಭಾರತ ವೀರಶೈವ ಮಹಾಸಭಾದ ನಾಯಕರು ಮಾಡಿದ ಒತ್ತಾಯಗಳಿಗೂ ಮಣಿಯದ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರ ರಾಜೀನಾಮೆಯನ್ನು ಪಡೆದೇ ತೀರಿದ್ದು, ಹೊಸ ಮುಖ್ಯಮಂತ್ರಿ ಆಯ್ಕೆ ಹಿಂದಿನ ಬಿಜೆಪಿ, ಸಂಘ ಪರಿವಾರದ ರಹಸ್ಯ ಕಾರ್ಯಸೂಚಿಯಾದರೂ ಏನು ಎಂಬುದು ನಿಗೂಢವಾಗಿದೆ.

      ಉತ್ತರಪ್ರದೇಶ, ಉತ್ತರಖಾಂಡ, ಗೋವಾ, ಗುಜರಾತ್ ಸೇರಿ ಹಲವು ರಾಜ್ಯಗಳಲ್ಲಿ ದಿಢೀರನ್ನೇ ಸಿಎಂಗಳನ್ನು ಬದಲಾಯಿಸುವ ರೀತಿ, ದಕ್ಷಿಣ ಭಾರತದಲ್ಲೂ ಮುಖ್ಯಮಂತ್ರಿಯನ್ನು ಬದಲಾಯಿಸಿ ಹೊಸಬರನ್ನು ಆಯ್ಕೆ ಮಾಡುತ್ತಿರುವ ಬಿಜೆಪಿ ವರಿಷ್ಠರು, ಈ ಮೂಲಕ ಪ್ರಬಲ ಜಾತಿಗೆ ಸಿಎಂ ಪಟ್ಟ ಬೇಕೆನ್ನುತ್ತಿದ್ದವರಿಗೆ ಭಾಜಪದಲ್ಲಿ ಇದು ಸಾಧ್ಯವಿಲ್ಲವೆಂಬ ಸ್ಪಷ್ಟ ಸಂದೇಶ ನೀಡಲೆತ್ನಿಸಿದೆಯೇ? ಅಥವಾ ಸಂಘ ಪರಿವಾರದ ಮಾತನ್ನೇ ಕೇಳುವವರು, ಹಿಂದುತ್ವದ ಪ್ರಬಲಪ್ರತಿಪಾದಕರನ್ನೇ ಸಿಎಂ ಗಾದಿಗೆ ಕೂರಿಸಲು ಬಿಎಸ್‍ವೈ ರಾಜೀನಾಮೆ ಪಡೆಯಲಾಯಿತೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

       ಸಿಎಂ ರಾಜೀನಾಮೆ ಬೆನ್ನಿಗೆ ರಾಜ್ಯಪಾಲರು ತ್ವರಿತವಾಗಿ ರಾಜೀನಾಮೆ ಅಂಗೀಕರಿಸಿ ಮಂತ್ರಿಮಂಡಲವನ್ನು ವಿಸರ್ಜಿಸಿದ್ದು, ಬಿಎಸ್‍ವೈ ಸಂಪುಟ ಸಚಿವರೆಲ್ಲರೂ ಮಾಜಿಯಾಗಿದ್ದಾರೆ. ಹೊಸ ಮುಖ್ಯಮಂತ್ರಿ ಆಯ್ಕೆಯಾಗುವ ತನಕ ಬಿಎಸ್‍ವೈ ಉಸ್ತುವಾರಿ ಸಿಎಂ ಆಗಿ ಮುಂದುವರಿಯಲು ರಾಜ್ಯಪಾಲರು ಸೂಚಿಸಿದ್ದಾರೆ. ಮುಂದಿನ ಸಿಎಂ ಆಯ್ಕೆ ಸಂಬಂಧ ಚರ್ಚಿಸಲು ಬಿಜೆಪಿರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ದೆಹಲಿಗೆ ತೆರಳಿದ್ದು, ಬಿಜೆಪಿ ವರಿಷ್ಠರುರಾಜ್ಯದ ಉಸ್ತುವಾರಿ ಜೊತೆಗೆ ಇಬ್ಬರು ವೀಕ್ಷಕರನ್ನು ಕರ್ನಾಟಕಕ್ಕೆ ಇಂದು ಅಥವಾ ನಾಳೆ ಕಳುಹಿಸಿಕೊಡುವನಿರೀಕ್ಷೆ ಇದೆ. ಹೊಸ ಸಿಎಂ ಅಭ್ಯರ್ಥಿ ಹೆಸರನ್ನು ಯಡಿಯೂರಪ್ಪ ಅವರಿಂದಲೇ ಪ್ರಸ್ತಾಪಿಸುವ ತಂತ್ರಗಾರಿಕೆಯನ್ನು ಬಿಜೆಪಿ ವರಿಷ್ಠ ಮಂಡಳಿ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಮುಂದಿನ ಸಿಎಂ ಯಾರು? :

       ಬ್ರಾಹ್ಮಣರನ್ನು ನೂತನ ಸಿಎಂ ಗಾದಿಗೇರಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆಂಬುದು ಗುಟ್ಟಾಗಿ ಉಳಿದಿಲ್ಲ. ಸಿಎಂ ರೇಸ್‍ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಹಾಗೂ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದ್ದು, ವಿಧಾನಸಭಾಧ್ಯಕ್ಷ ಕಾಗೇರಿ ದಿಢೀರನೇ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಅಭಿನಂದಿಸಿ ವಿಧಾನಸಭೆ ಸಚಿವಾಲಯದ 2 ವರ್ಷದ ವರದಿ ಒಪ್ಪಿಸಿರುವುದು ವಿವಿಧ ರಾಜಕೀಯ ಲೆಕ್ಕಚಾರಗಳಿಗೆ ಆಸ್ಪದ ಒದಗಿಸಿದೆ. ಇನ್ನೂ ಲಿಂಗಾಯಿತರಲ್ಲೇ ಸಿಎಂ ಮಾಡುವುದಾದರೆ ಹೊಸ ಮುಖ ಅರವಿಂದ ಬೆಲ್ಲದ್ ಅವರನ್ನು ಸಿಎಂ ಆಗಿಸಬೇಕೆಂದು ವರಿಷ್ಠರು ಚಿಂತಿಸುತ್ತಿದ್ದರೆನ್ನಲಾಗಿದ್ದು, ಸಚಿವರಾದ ಮುರುಗೇಶ್ ನಿರಾಣಿ, ಬಸವರಾಜಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿಅವರ ಹೆಸರು ಚಾಲ್ತಿಗೆ ಬಂದಿದೆ. ಒಕ್ಕಲಿಗರನ್ನು ಸಿಎಂ ಗಾದಿಗೆ ಪರಿಗಣಿಸುವುದಾದರೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಆರ್.ಅಶೋಕ್ ಅವರ ಹೆಸರು ಮುಂಚೂಣಿಯಲ್ಲಿದ್ದು, ಡಿಸಿಎಂ ಸ್ಥಾನಕ್ಕೆ ಬಿಎಸ್‍ವೈ ವಿರುದ್ಧ ಬಂಡಾಯ ಸಾರಿದ್ದ ಸಚಿವ ಸಿ.ಪಿ.ಯೋಗೇಶ್ವರ್ ಹಾಗೂ ಶ್ರೀರಾಮುಲು ಅವರ ಹೆಸರು ಕೇಳಿಬರುತ್ತಿದೆ. ಹಾಲಿ ಮೂವರು ಡಿಸಿಎಂಗಳಲ್ಲಿ ಒಬ್ಬರು ಅಥವಾ ಇಬ್ಬರನ್ನು ಮಂತ್ರಿ ಮಂಡಲದಿಂದ ಕೈಬಿಟ್ಟು ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿ, ಪಂಗಡದವರನ್ನು ಪರಿಗಣಿಸಲಾಗುತ್ತದೆ ಎನ್ನಲಾಗಿದೆ.

      ಹೊಸ ಸಂಪುಟದಲ್ಲಿ ವಲಸಿಗರಿಗೆ ಕಡಿಮೆ ಪ್ರಾತಿನಿಧ್ಯ: ಹಾಲಿ ಬಿಎಸ್‍ವೈ ಸಂಪುಟದಲ್ಲಿದ್ದ ಸಚಿವರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಹೊಸ ಸಂಪುಟದಿಂದ ಕೈ ಬಿಡಲಾಗುತ್ತದೆ ಎಂಬ ಚರ್ಚೆಗಳು ಸಾಗಿದ್ದು, ಹಿರಿಯ ಸಚಿವರಾದ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಸುರೇಶ್‍ಕುಮಾರ್ ಅವರುಗಳನ್ನು ಮತ್ತೆ ಹೊಸ ಸಂಪುಟ ಸೇರುವುದು ಅನುಮಾನ ಎನ್ನಲಾಗುತ್ತಿದೆ. ಯಡಿಯೂರಪ್ಪ ಅವರ ನಾಯಕತ್ವ ನೆಚ್ಚಿ ಬಂದು ಮಂತ್ರಿಗಳಾದ ವಲಸಿಗ ಶಾಸಕರು ಮುಂದೆ ಏನುಮಾಡುವುದೆಂಬ ಅತಂತ್ರ ಸ್ಥಿತಿ ತಲುಪಿದ್ದಾರೆ. ಇವರಲ್ಲಿ ಕೆಲವರಿಗೆ ಮಾತ್ರ ಮಂತ್ರಿಗಿರಿ ನೀಡಲಾಗುತ್ತದೆ ಎನ್ನುವುದು ವಲಸಿಗರ ನಿದ್ದೆಗೆಡಿಸಿದೆ. ಸಿಡಿ ಕೇಸ್‍ನಲ್ಲಿ ಅಧಿಕಾರ ಕಳೆದುಕೊಂಡ ಬೆಳಗಾವಿ ಸಾಹುಕಾರ್‍ಗೆ ಮತ್ತೆ ಸಚಿವ ಸ್ಥಾನ ಸಿಗುವುದು ಸಹ ಅನಿಶ್ಚತತೆಯ ಸಂಗತಿಯಾಗಿದ್ದು, ಪಕ್ಷ ನಿಷ್ಟ , ಸಂಘ ಪರಿವಾರ ಹಿನ್ನೆಲೆಯುಳ್ಳವರಿಗೆ ಅಧಿಕಾರ ಸ್ಥಾನಮಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ.

ವಿಧಾನಸಭೆ, ಲೋಕಸಭೆ, ಉಪ ಚುನಾವಣೆಗಳಿಗೆ ಬಿಎಸ್‍ವೈ ಬೇಕಿತ್ತು..

      ರಾಜ್ಯದ ಪ್ರಬಲ ಲಿಂಗಾಯತ ಸಮುದಾಯದ ವೋಟ್ ಬ್ಯಾಂಕ್ ದೃಷ್ಟಿಯಿಂದ 2018ರ ಸಾರ್ವತ್ರಿಕ ಚುನಾವಣೆಗೂ ಮುನ್ನಾ ಯಡಿಯೂರಪ್ಪ ಅವರನ್ನು ಮರಳಿ ಪಕ್ಷಕ್ಕೆ ಕರೆತಂದ ಬಿಜೆಪಿ ನಾಯಕರು 2018ರ ವಿಧಾನಸಭೆ ಚುನಾವಣೆ, 2019ರ ಲೋಕಸಭೆ ಚುನಾವಣೆಯನ್ನು ಅವರ ನೇತೃತ್ವದಲ್ಲಿ ಎದುರಿಸಿ ಅತ್ಯಧಿಕ ಸಂಖ್ಯೆಯಲ್ಲಿ ಸ್ಥಾನಗಳನ್ನು ಗಳಿಸಿಕೊಂಡು ಮುಂದೆ ಅವರ ಪ್ರಯತ್ನದಿಂದಲೇ ಕಾಂಗ್ರೆಸ್-ಜೆಡಿಎಸ್ ಸರಕಾರವನ್ನು ಪತನಗೊಳಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು, ಉಪಚುನಾವಣೆಯ ಗೆಲುವುಗಳ ಮೂಲಕ ಸರಕಾರವನ್ನು ಭದ್ರಪಡಿಸಿದರೂ ಪೂರ್ಣಾವಧಿಗೆ ಯಡಿಯೂರಪ್ಪ ಅವರನ್ನು ಮುಂದುವರಿಯಲು ಬಿಡದೆ ರಾಜೀನಾಮೆ ಪಡೆದಿದ್ದು, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕಮಲ ಅರಳಿದ ಕರ್ನಾಟಕದಲ್ಲಿ ಮುಂದೆ ಬಿಜೆಪಿಗೆ ದೊಡ್ಡ ಹೊಡೆತ ಎಂದೇ ವಿಶ್ಲೇಷಿಸಲಾಗುತ್ತಿದೆ.

   ಬಿಎಸ್‍ವೈ ಅಂಡ್ ಸನ್ಸ್ ರಾಜಕೀಯ ಭವಿಷ್ಯ ಮಂಕಾಗುವುದೇ?

       ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಂದೆ ಯಾವ ಸ್ಥಾನಮಾನ ಕೊಡಲಾಗುತ್ತದೆ ಎಂಬುದನ್ನು ಸಹ ವರಿಷ್ಠರು ಸ್ಪಷ್ಪಪಡಿಸದಿರುವುದು, ಅವರ ಮಗ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರಿಗೂ ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಮಾಡಿಕೊಡದಿರುವುದು ಮತ್ತು ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮ ಹಾಕಿದ ಬಿ.ವೈ.ವಿಜಯೇಂದ್ರ ಮುಂದಿನ ಸಂಪುಟದಲ್ಲಿ ಸ್ಥಾನ ಸಿಗುವುದೇ ಎಂಬ ಸಂಗತಿಯೂ ಡೋಲಾಯಮನವಾಗಿದ್ದು, ಪವರ್ ಸೆಂಟರ್ ಆಗಿದ್ದ ಬಿಎಸ್‍ವೈ ಕುಟುಂಬವನ್ನು ಈಗ ಪವರ್‍ಲೆಸ್ ಆಗಿ ರಾಜಕೀಯ ಭವಿಷ್ಯ ಮಂಕಾಗುವ ಆತಂಕ ಎದುರಾಗಿದೆ.

ರಾತ್ರಿ ಕಳೆಯುವಷ್ಟರಲ್ಲೇ ನಡ್ಡಾ ಹೇಳಿಕೆ ತಿರುಗು-ಮುರುಗು

        ಯಡಿಯೂರಪ್ಪ ಕರ್ನಾಟಕ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಅನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆಂದೆಲ್ಲ ಶಹಬ್ಬಾಶ್‍ಗಿರಿ ನೀಡಿ, ಅವರನ್ನು ಬದಲಿಸುವ ವಿಚಾರ ನಮ್ಮ ಮುಂದಿಲ್ಲ ಎಂದು ಗೋವಾದಲ್ಲಿ ಭಾನುವಾರವಷ್ಟೇ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದ ಬಿಜಿಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಾಜೀನಾಮೆ ಬೇಸರದಲ್ಲಿದ್ದ ಯಡಿಯೂರಪ್ಪ ಮುಖದಲ್ಲಿ ನಗು ಅರಳಿಸಿದ್ದರು. ಸೋಮವಾರ ಬೆಳಗಾಗುವಷ್ಟರಲ್ಲೇ ರಾಜೀನಾಮೆಗೆ ಸೂಚಿಸಿ ಸರಕಾರದ ಸಾಧನ ಸಮಾವೇಶದ ವೇದಿಕೆಯಲ್ಲೇ ಯಡಿಯೂರಪ್ಪ ಅಳುತ್ತಲೇ ರಾಜೀನಾಮೆ ನಿರ್ಧಾರ ಪ್ರಕಟಿಸುವಂತೆ ಮಾಡಿದ್ದು, ಬಿಜೆಪಿ ಅಧ್ಯಕ್ಷರೇ ಹೇಳಿಕೆ ಬಗ್ಗೆಯೇ ಕರುನಾಡಿನ ಜನ ಅನುಮಾನಿಸುವಂತೆ ಮಾಡಿದೆ.

 ವಿಶ್ಲೇಷಣೆ: ಟಿ.ಎನ್.ಮಧುಕರ್ / ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap