ಕೋಲ್ಕತ್ತಾ:
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ಗುರುವಾರ ವಿಧಿವಶರಾಗಿದ್ದಾರೆ.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬುದ್ಧದೇವ್ ಭಟ್ಟಾಚಾರ್ಯ ಅವರು ಇಂದು ಬೆಳಿಗ್ಗೆ ದಕ್ಷಿಣ ಕೋಲ್ಕತ್ತಾದ ನಿವಾಸದಲ್ಲಿ ಬೆಳಿಗ್ಗೆ ಸುಮಾರು 8.30ಕ್ಕೆ ನಿಧನರಾಗಿದ್ದಾರೆಂದು ತಿಳಿದುಬಂದಿದೆ.
ಬುದ್ಧದೇವ್ ಭಟ್ಟಾಚಾರ್ಯ ಅವರಿಗೆ 80 ವರ್ಷ ವಯಸ್ಸಾಗಿತ್ತು. ಭಟ್ಟಾಚಾರ್ಯ ಅವರು ಪತ್ನಿ ಮೀರಾ ಮತ್ತು ಪುತ್ರಿ ಸುಚೇತನಾ ಅವರನ್ನು ಅಗಲಿದ್ದಾರೆ.ಬುದ್ಧದೇವ್ ಭಟ್ಟಾಚಾರ್ಯ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಇದರಿಂದಾಗಿ ಅವರನ್ನು ಆಗಾಗ್ಗೆ ಆಸ್ಪತ್ರೆಗೆ ದಾಖಲಿಸಲಾಗುತ್ತಿತ್ತು. ಬುದ್ಧದೇವ್, ಭಾರತೀಯ ಕಮ್ಯೂನಿಸ್ಟ್ ಪಕ್ಷ ಮಾರ್ಕ್ಸ್‌ವಾದ (ಸಿಪಿಐಎಂ) ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಮಿತಿಯಾದ ಪಾಲಿಟ್ ಬ್ಯೂರೊದ ಮಾಜಿ ಸದಸ್ಯರಾಗಿದ್ದರು.
ಪಶ್ಚಿಮ ಬಂಗಾಳದಲ್ಲಿ ಎಡಪಕ್ಷದ 34 ವರ್ಷಗಳ ಆಡಳಿತದಲ್ಲಿ, ಭಟ್ಟಾಚಾರ್ಯ ಅವರು 2000 ರಿಂದ 2011 ರವರೆಗೆ ಸತತ 11 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಎರಡನೇ ಮತ್ತು ಕೊನೆಯ ಸಿಪಿಎಂ ಮುಖ್ಯಮಂತ್ರಿಯಾಗಿದ್ದರು.ಭಟ್ಟಾಚಾರ್ಯ ಅವರು 2011 ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಪಿ ಪಕ್ಷದ ವಿರುದ್ಧ ಸೋಲು ಕಂಡಿದ್ದರು. ಆ ಮೂಲಕ ರಾಜ್ಯದಲ್ಲಿ ಎಡರಂಗದ 34 ವರ್ಷಗಳ ಆಳ್ವಿಕೆ ಕೊನೆಗೊಂಡಿತ್ತು.
ಕ್ಷೀಣಿಸುತ್ತಿರುವ ಆರೋಗ್ಯದಿಂದಾಗಿ ಅವರು ರಾಜಕೀಯ ರಂಗದಿಂದ ದೂರ ಉಳಿದಿದ್ದರು. ಅವರು ಬಹಳ ಸಮಯದಿಂದಲೂ ತಮ್ಮ ಪಾಮ್ ಅವೆನ್ಯೂ ಅಪಾರ್ಟ್‌ಮೆಂಟ್‌ನಲ್ಲೇ ಉಳಿದಿದ್ದರು.