ಮಂಗಳೂರು
ರಿಯಲ್ ಸ್ಟಾರ್ ಉಪೇಂದ್ರ ಅವರ ಜನ್ಮದಿನವಿಂದು. ಅವರು ನಟನೆ ಮಾಡಿರುವ ಬುದ್ಧಿವಂತ ಸಿನಿಮಾ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಬುದ್ಧಿವಂತ ಸಿನಿಮಾದಲ್ಲಿ ನಟ ಉಪೇಂದ್ರ ಅವರು ನಿರ್ವಹಿಸಿದ ಪಾತ್ರಗಳ ರೀತಿಯಲ್ಲೇ ನಿಜ ಜೀವನದಲ್ಲಿ ನಡೆದಿದೆ. ಹೌದು, ಹಲವಾರು ಮಹಿಳೆಯರನ್ನು ತನ್ನ ಪ್ರೇಮದ ಬಲೆಗೆ ಬೀಳಿಸಿಕೊಂಡು, ಅವರ ಜೊತೆ ಸರಸ-ಸಲ್ಲಾಪವಾಡಿ ಕೊನೆಗೆ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಮಂಗಳೂರಿನ ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಜಿಲ್ಲೆ ಕಾರ್ಕಳ ನಿವಾಸಿ ನಟೋರಿಯಸ್ ಕಳ್ಳ ರೋಹಿತ್ ಮಥಾಯೀಸ್ ಬಂಧಿತ ಆರೋಪಿ.
ಆರೋಪಿ ರೋಹಿತ್ ಮಥಾಯೀಸ್ ಸಾಮಾಜಿಕ ಜಾಲತಾಣದ ಮೂಲಕ ಮಂಗಳೂರು-ಉಡುಪಿ ಭಾಗದ ಕ್ರಿಸ್ಚಿಯನ್ ಸಮುದಾಯಕ್ಕೆ ಸೇರಿದ ಅಂದವಾದ ಶ್ರೀಮಂತ ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ಅವರ ಜೊತೆ ನಿತ್ಯ ಸಂಪರ್ಕದಲ್ಲಿ ಇರುತ್ತಿದ್ದನು. ಅವರೊಂದಿಗೆ ಚಾಟ್ ಮಾಡುತ್ತ ಮೋಡಿ ಮಾಡುತ್ತಿದ್ದನು. ಮೊದಲಿಗೆ ಅವರೊಂದಿಗೆ ಗಾಢವಾದ ಸ್ನೇಹ ಬೆಳಸುತ್ತಿದ್ದನು. ದಿನಗಳು ಕಳೆದಂತೆ ಮಹಿಳೆಯರನ್ನು ತನ್ನ ಪ್ರೀತಿಯೆಂಬ ನಾಟಕದ ಬಲೆಗೆ ಬೀಳಿಸಿಕೊಳ್ಳುತ್ತಿದ್ದನು.
ಬಳಿಕ ಅವರ ಮನೆಯ ವಿಳಾಸ ಪಡೆದು, ಹೋಗಿ-ಬಂದು ಮಾಡುತ್ತಿದ್ದನು. ನಂತರ ಅವರ ಜೊತೆ ಸರಸ ಸಲ್ಲಾಪವಾಡುತ್ತಿದ್ದನು. ಕೊನೆಗೆ ಅವರ ಮನೆಯಲ್ಲಿನ ಚಿನ್ನ ದೋಚಿ ಪರಾರಿಯಾಗುತ್ತಿದ್ದನು.
ಆರೋಪಿ ರೋಹಿತ್ ಮಥಾಯೀಸ್ ಇತರರೊಂದಿಗೆ ಸೇರಿಕೊಂಡು 2019ರಲ್ಲಿ ನಿವೃತ್ತ ಪಿಡಿಓ ಭರತಲಕ್ಷ್ಮಿ ಹಣ ಮತ್ತು ಚಿನ್ನಾಭರಣ ದೋಚಿದ್ದನು. ಬಳಿಕ ಅವರನ್ನು ಬೆಳ್ಮಣ ಗ್ರಾಮದಲ್ಲಿನ ಮನೆಯಲ್ಲಿ ಕೊಲೆ ಮಾಡಿ, ಅವರ ಮೃತ ದೇಹವನ್ನು ಕಲ್ಯಾದ ಬಾವಿಯೊಂದರಲ್ಲಿ ಪ್ಲಾಸ್ಟಿಕ್ನಲ್ಲಿ ಸುತ್ತಿ ಎಸೆದು ಹೋಗಿದ್ದನು. ಈ ಪ್ರಕರಣದಲ್ಲಿ ಆರೋಪಿ ರೋಹಿತ್ ಮಥಾಯೀಸ್ನನ್ನು ಪೊಲೀಸರು ಬಂಧಿಸಿದ್ದರು. ಆರೋಪಿ ರೋಹಿತ್ ಮಥಾಯೀಸ್ ಜೈಲುವಾಸ ಅನುಭವಿಸಿ, ನಂತರ ಪ್ರಕರಣದ ವಿಚಾರಣೆಗೆ ಸಿಗದೇ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದನು.
ಮತ್ತೆ 2021ರಲ್ಲಿ ಕಂಕನಾಡಿಯ ಮಹಿಳೆಯೋರ್ವರ ಮನೆಯಿಂದ ಕಳ್ಳತನ ಮಾಡಿ ಪರಾರಿಯಾಗಿದ್ದನು. ಮತ್ತೆ ಇದೇ ರೀತಿ ಕೃತ್ಯ ಎಸಗಲು ಮುಂದಾದಾಗ ಮಾಹಿತಿ ತಿಳಿದ ಕಂಕನಾಡಿ ನಗರ ಪೊಲೀಸರು ಆರೋಪಿ ರೋಹಿತ್ ಮಥಾಯೀಸ್ನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ರೋಹಿತ್ ಮಥಾಯೀಸ್ ಬಳಿಯಿಂದ 7 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.