ಬೆಂಗಳೂರು:
ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆಯನ್ನು ಅವಲಂಬಿಸಿರುವ ರಾಮನಗರ ಜಿಲ್ಲೆಯ ರೈತರು 435 ಕಿಮೀ ಉದ್ದದ ಚೆನ್ನೈ-ಬೆಂಗಳೂರು-ಮೈಸೂರು ಬುಲೆಟ್ ರೈಲು ಯೋಜನೆಯಿಂದ ಕಂಗಾಲಾಗಿದ್ದಾರೆ. ಈ ಯೋಜನೆಯಿಂದಾಗಿ ತಮ್ಮ ಶ್ರೀಮಂತ, ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಯೋಜನೆಯ ಸಲಹಾ ಸೇವೆಗಳನ್ನು ಖಾಸಗಿ ಏಜೆನ್ಸಿಗಳಿಗೆ ಹಸ್ತಾಂತರಿಸಲಾಗಿದ್ದು, ಈ ಏಜೆನ್ಸಿಗಳಿಗೆ ಜಿಲ್ಲಾಧಿಕಾರಿಗಳು ಅಗತ್ಯ ನೆರವು ನೀಡಬೇಕು ಎಂದು ಎನ್‌ಎಚ್‌ಎಸ್‌ಆರ್‌ಸಿಎಲ್ ಜಿಲ್ಲಾಧಿಕಾರಿಗೆ ತಿಳಿಸಿದೆ.
ಇದಕ್ಕೆ ಪ್ರತಿಯಾಗಿ ಜಿಲ್ಲಾಡಳಿತವು, ಕಾರಿಡಾರ್‌ಗೆ ತೆಗೆದುಕೊಳ್ಳಬೇಕಾದ ಜಮೀನುಗಳ ಸರ್ವೆ ನಂಬರ್‌ಗಳು, ಜಮೀನಿನ ವಿಸ್ತೀರ್ಣ ಮತ್ತು ಆ ಜಮೀನುಗಳ ಮಾಲೀಕರ ವಿವರಗಳೊಂದಿಗೆ ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆದಿದೆ.
ಈ ಯೋಜನೆಯಲ್ಲಿ ತೊಡಗಿರುವ ಸಿಬ್ಬಂದಿ ಗ್ರಾಮಗಳಿಗೆ ಭೇಟಿ ನೀಡಿ ಈ ಯೋಜನೆಗೆ ಒಳಪಡುವ ರೈತರ ಆಧಾರ್ ಕಾರ್ಡ್ ಸಂಗ್ರಹಿಸುತ್ತಿದ್ದು, ಯೋಜನಾ ತಂಡವು ಗ್ರಾಮಸ್ಥರಿಗೆ ತಮ್ಮ ಜಮೀನಿನ ಮೂಲಕ ರೈಲು ಮಾರ್ಗ ಹಾದು ಹೋಗಬಹುದು ಎಂದು ತಿಳಿಸುತ್ತಿದೆ. ಡಿಪಿಆರ್ ಸಿದ್ಧಪಡಿಸಿದ ಬಳಿಕ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ನಮ್ಮ ಹಳ್ಳಿ ಮತ್ತು ಸುತ್ತಮುತ್ತಲಿನ ಮೂರು ಪ್ರಸ್ತಾವಿತ ಜೋಡಣೆಗಳನ್ನು ನಾವು ನೋಡಿದ್ದೇವೆ. ಆದರೆ, ನಮ್ಮ ಹಳ್ಳಿಯಲ್ಲಿನ ಜಮೀನಿನಲ್ಲಿ ಗುರುತು ಮಾಡಿರುವ ರೇಖೆಯೇ ಯೋಜನೆಗೆ ಅಂತಿಮ ರೂಪವಾಗಲಿದೆ ಎಂದು ಹೇಳುತ್ತಿರುವುದರಿಂದ ಈಗ ಆತಂಕಕ್ಕೆ ಒಳಗಾಗಿದ್ದೇವೆ. ಜಮೀನಿಗೆ ಪರಿಹಾರ ಸಿಗುತ್ತದೆ. ಆದರೆ, ನಮ್ಮ ಮುಖ್ಯ ಜೀವನಾಧಾರವಾದ ಕೃಷಿಯೇ ಇಲ್ಲವಾದರೆ ಏನು ಮಾಡುವುದು. ತೆಂಗು, ಹಿಪ್ಪುನೇರಳೆ, ಬಾಳೆ, ಭತ್ತ, ರಾಗಿ, ಮಾವು ಸೇರಿದಂತೆ ನೂರಾರು ಎಕರೆ ಕೃಷಿ ಭೂಮಿ ಇಲ್ಲದಂತಾಗಿ ರೈತರಿಗೆ ನಷ್ಟವಾಗಲಿದೆ’ ಎಂದು ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರು ಗ್ರಾಮದ ನಿವಾಸಿಯೊಬ್ಬರು ಹೇಳಿದರು.
ಕೆರೆ ತುಂಬಿಸುವ ಯೋಜನೆಯಿಂದಾಗಿ ಅಂತರ್ಜಲಮಟ್ಟ ಹೆಚ್ಚಿದ್ದು, ಗ್ರಾಮಸ್ಥರು ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಜಿಲ್ಲೆಯ ಜನರಲ್ಲಿ ಸಂತಸ ಮನೆಮಾಡಿದೆ. ಕಡಿಮೆ ಜಮೀನು ಹೊಂದಿರುವ ರೈತರಿಗೆ ಇದರಿಂದ ತೊಂದರೆಯಾಗಲಿದ್ದು, ಹೆಚ್ಚಿನ ಜಮೀನು ಹೊಂದಿರುವ ಕುಟುಂಬಗಳಿಗೆ ಇದರಿಂದ ತೊಂದರೆಯಾಗುವುದಿಲ್ಲ. ತಮ್ಮ ಜಮೀನಿನ ಕೆಲವು ಭಾಗ ಯೋಜನೆಗೆ ಹೋದರೆ ಅವರಿಗೆ ಯಾವುದೇ ಚಿಂತೆಯಿಲ್ಲ. ಆದರೆ, ತುಂಡು ಭೂಮಿ ಹೊಂದಿರುವವರು ತೀವ್ರವಾಗಿ ತೊಂದರೆಗೊಳಗಾಗುತ್ತಾರೆ ಎಂದು ಮತ್ತೊಬ್ಬ ನಿವಾಸಿ ಹೇಳಿದರು.