ನವದೆಹಲಿ:
ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ 2025-26ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಿಹಾರಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ. ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ, ಪಟ್ನಾ ಐಐಟಿ ವಿಸ್ತರಣೆಗೆ ಅನುದಾನ, ಮಖಾನಾ ಮಂಡಳಿ ಸೇರಿದಂತೆ ವಿವಿಧ ಯೋಜನೆಗಳನ್ನು ಘೋಷಣೆ ಮಾಡಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿಡಲಾಗಿದೆ.
ಕಳೆದ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆಯ ನಂತರ JDU ಬೆಂಬಲ ಪಡೆದಿತ್ತು. ಹೀಗಾಗಿ ಬಿಹಾರಕ್ಕೆ ಹೆಚ್ಚಿನ ಕೊಡುಗೆಗಳನ್ನು ನೀಡಿದಂತಿದೆ. ಕಳೆದ ಬಾರಿಯ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಮಿತ್ರ ಪಕ್ಷಗಳ ರಾಜ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿತ್ತು. ಈ ಬಾರಿಯೂ ಇದೇ ರಾಜ್ಯಗಳಿಗೆ ಭರ್ಜರಿ ಕೊಡುಗೆ ನೀಡಿದ್ದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಕೇಂದ್ರದ ಈ ಮಲತಾಯಿ ಧೋರಣೆಯನ್ನು ಖಂಡಿಸಿ ಸಂಸದರು ಗದ್ದಲವನ್ನು ಎಬ್ಬಿಸಿದ್ದಾರೆ.