ಮತ್ತೆ ಭುಗಿಲೆದ್ದ ಬುರ್ಖಾ ವಿವಾದ, ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು

ಹಾವೇರಿ

     ರಾಜ್ಯದಲ್ಲಿ ಮತ್ತೆ ಹಿಜಾಬ್ ವಿವಾದ ಭುಗಿಲೆದ್ದಿದೆ. ಹಾವೇರಿ   ಜಿಲ್ಲೆ ಅಕ್ಕಿಆಲೂರಿನ ಸಿ.ಜಿ.ಬೆಲ್ಲದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಲ ವಿದ್ಯಾರ್ಥಿನಿಯರು ಬುರ್ಖಾ  ಧರಿಸಿ ಬಂದಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು ಕೇಸರಿ ಶಾಲು  ಧರಿಸಿ ಕಾಲೇಜಿಗೆ ಆಗಮಿಸಿದ್ದು, ವಿವಾದಕ್ಕೆ ಕಾರಣವಾಗಿದೆ. ಬಳಿಕ, ಕಾಲೇಜಿನ ಪ್ರಾಚಾರ್ಯ ಡಾ.ವೀರೇಶ ಕುಮ್ಮೂರ ಅವರು ವಿದ್ಯಾರ್ಥಿಗಳ ಮನವೊಲಿಸಿದ್ದು, ಕಾಲೇಜಿನ ಸಮವಸ್ತ್ರ ಪಾಲನೆಗೆ ವಿದ್ಯಾರ್ಥಿಗಳು ಒಪ್ಪಿದ್ದಾರೆ. ಆ ಮೂಲಕ ವಿವಾದ ಸುಖಾಂತ್ಯಗೊಂಡಿದೆ.

    ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಮಧ್ಯಾಹ್ನ 12.30ರ ವೇಳೆಗೆ ಕೆಲ ವಿದ್ಯಾರ್ಥಿನಿಯರು ಬುರ್ಕಾ ಧರಿಸಿ ಬಂದಿದ್ದರು. ಇದರಿಂದ ಆಕ್ರೋಶಗೊಂಡ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದರು. ಇದು ಕಾಲೇಜಿನಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ನಡುವಿನ ಚರ್ಚೆಗೆ ಕಾರಣವಾಯಿತು.

    ವಿಷಯ ತಿಳಿದ ಪ್ರಾಚಾರ್ಯ ಡಾ. ವೀರೇಶ ಕುಮ್ಮೂರ, ಬುರ್ಕಾ ಧರಿಸಿದ ವಿದ್ಯಾರ್ಥಿನಿಯರು ಹಾಗೂ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳನ್ನು ಕರೆದು, ಬುದ್ದಿ ಹೇಳಿದರು. ಕಾಲೇಜಿನ ಆವರಣದಲ್ಲಿ ಕಾಲೇಜಿನ ಸಮವಸ್ತ್ರವನ್ನೇ ಧರಿಸಬೇಕು. ಅನಗತ್ಯವಾಗಿ ಗೊಂದಲ ಸೃಷ್ಟಿಗೆ ಅವಕಾಶ ಮಾಡಿಕೊಡಬೇಡಿ. ಕಾಲೇಜಿನ ಶಿಸ್ತು ಉಲ್ಲಂಘನೆ ಸರಿ ಅಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ಅವರ ಮಾತಿಗೆ ಎಲ್ಲರೂ ಸಮ್ಮತಿ ಸೂಚಿಸಿದ್ದು, ಸುಖಾಂತ್ಯಗೊಂಡಿದೆ.

Recent Articles

spot_img

Related Stories

Share via
Copy link