ಮಂಗಳೂರು
ಶ್ರೀಕ್ಷೇತ್ರ ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ಆರೋಪಿಗೆ ಚಿನ್ನಯ್ಯನಿಗೆ ಜಾಮೀನು ಸಿಕ್ಕಿದೆ. ವಿಶೇಷ ತನಿಖಾ ತಂಡ ತನಿಖಾ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ ಬೆನ್ನಲ್ಲೇ ಚಿನ್ನಯ್ಯ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಅರ್ಜಿಯನ್ನು ಪುರಸ್ಕರಿಸಿದ ಮಂಗಳೂರಿನಲ್ಲಿರುವ ಜಿಲ್ಲಾ ನ್ಯಾಯಾಲಯ ನಿನ್ನೆ ಜಾಮೀನು ಮಂಜೂರು ಮಾಡಿದೆ.
ಆಗಸ್ಟ್ 23 ರಂದು ಸುಧೀರ್ಘ ವಿಚಾರಣೆ ಬಳಿಕ ಬುರುಡೆ ಕೇಸ್ ನಲ್ಲಿ ಅನಾಮಿಕ ದೂರುದಾರ ಚಿನ್ನಯ್ಯ ಬಂಧನವಾಗಿತ್ತು. ಸೆಪ್ಟೆಂಬರ್ 6 ರಂದು ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಶಿವಮೊಗ್ಗ ಜೈಲಿಗೆ ಚಿನ್ನಯ್ಯನನ್ನು ಕರೆತರಲಾಗಿತ್ತು. 1 ಲಕ್ಷ ರೂ. ಬಾಂಡ್ ಸೇರಿ 12 ಷರತ್ತು ವಿಧಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಚಿನ್ನಯ್ಯ ತೋರಿಸಿದ್ದ ಜಾಗಗಳಲ್ಲಿ ಅಗೆದು ನೋಡಿದರೂ ಸಹ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಕೊನೆಗೆ ಎಸ್‌ಐಟಿ ಅಧಿಕಾರಿಗಳೇ ಚಿನ್ನಯ್ಯನನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದ್ದು, ಈ ವೇಳೆ ಕೆಲವು ಮಹತ್ವದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಭದ್ರತಾ ಕಾರಣಗಳಿಂದಾಗಿ ಚಿನ್ನಯ್ಯನನ್ನು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು.
ಹೆಚ್ಚು ಕಡಿಮೆ ಎರಡು ತಿಂಗಳು ಬುರುಡೆ ನೆಪದಲ್ಲಿ ಚಿನ್ನಯ್ಯ ಧರ್ಮಸ್ಥಳ ಸುತ್ತ ಮುತ್ತ 17 ಗುಂಡಿ ಅಗೆಸಿದ್ದ. ಕೊನೆಗೆ ನಾನು ಹೇಳಿದ್ದೆಲ್ಲ ಸುಳ್ಳು ಅಂತ ತಪ್ಪೊಪ್ಪಿಕೊಂಡಿದ್ದ. ತೀವ್ರ ವಿಚಾರಣೆ ನಡೆಸಿ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿರುವ ಎಸ್‌ಐಟಿ ಅಧಿಕಾರಿಗಳು, ಬುರುಡೆ ಬಿಟ್ಟವನನ್ನು ಜೈಲಿಗಟ್ಟಿದ್ದರು.
ಚಿನ್ನಯ್ಯನ ಹೇಳಿಕೆಗಳ ಆಧಾರದಲ್ಲಿ ಗಿರೀಶ್ ಮಟ್ಟೆಣ್ಣವರ್, ಜಯಂತ್ ಬಿ., ಯೂಟ್ಯೂಬರ್ ಗಳಾದ ಸಮೀರ್ ಎಂ.ಡಿ. ಅಭಿಷೇಕ್ ವಿಚಾರಣೆ ನಡೆಸಲಾಗಿದೆ. ಸೌಜನ್ಯಾ ನಾಪತ್ತೆ ಮತ್ತು ಶಂಕಾಸ್ಪದ ಸಾವು ವಿಚಾರದಲ್ಲಿ ಚಿನ್ನಯ್ಯನ ತನಿಖೆ ನಡೆಸುವಂತೆ ಸೌಜನ್ಯಾ ತಾಯಿ ಕುಸುಮಾವತಿ ದೂರು ನೀಡಿದ್ದರು. ಎಸ್‌ಐಟಿ ರಚನೆ ಆಗುವ ಮೊದಲೇ ದೂರುದಾರ ಚಿನ್ನಯ್ಯ ಮತ್ತು ತಂಡ ಕೇರಳದ ಸಂಸದರೊಬ್ಬರನ್ನು ಭೇಟಿ ಮಾಡಿ, ಸಮಾಲೋಚನೆ ಮಾಡಿದ್ದ ಎಂದು ಹೇಳಲಾಗುತ್ತಿದೆ. ಈ ವಿಷಯದ ಸತ್ಯಾಸತ್ಯತೆ ಬಗ್ಗೆ ಎಸ್ ಐಟಿ ತನಿಖೆ ನಡೆಸುತ್ತಿದೆ.








