ಬಸ್ ಸಂಚಾರ ಸ್ಥಗಿತ ಕುರಿತು ‘ಮಹಾ’ ಸರ್ಕಾರ ಮಹತ್ವದ ಹೇಳಿಕೆ….!

ಮುಂಬೈ: 

   ಬೆಳಗಾವಿ ಬಸ್ ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ಉಭಯ ರಾಜ್ಯಗಳ ನಡುವೆ ಬಸ್ ಸಂಚಾರ ಸ್ಥಗಿತವಾಗಿದೆ. ಈ ಬಗ್ಗೆ ಮಹಾರಾಷ್ಟ್ರ ಸರ್ಕಾರವೇ ಮಾಹಿತಿ ನೀಡಿದೆ.

   ಕರ್ನಾಟಕ ನಮ್ಮ ಆಡಳಿತದೊಂದಿಗೆ ಚರ್ಚೆಯಲ್ಲಿ ತೊಡಗುವವರೆಗೆ, ರಾಜ್ಯದಿಂದ ಕರ್ನಾಟಕಕ್ಕೆ ತೆರಳುವ ಸರ್ಕಾರಿ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್‌ನಾಯಕ್ ಹೇಳಿದ್ದಾರೆ. ಬೆಳಗಾವಿಯಲ್ಲಿ ನಡೆದಿರುವ ಘಟನೆಗಳ ಕುರಿತಂತೆ ಕರ್ನಾಟಕ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಳ್ಳುವವರೆಗೆ ಮತ್ತು ನಮ್ಮ ಆಡಳಿತದೊಂದಿಗೆ ಚರ್ಚೆಯಲ್ಲಿ ತೊಡಗುವವರೆಗೆ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಿದ್ದಾರೆ.

  ಶುಕ್ರವಾರ ಚಿತ್ರದುರ್ಗದಲ್ಲಿ ಕನ್ನಡ ಪರ ಕಾರ್ಯಕರ್ತರು ಎಂಎಸ್‌ಆರ್‌ಟಿಸಿ ಬಸ್ ಮೇಲೆ ದಾಳಿ ಮಾಡಿದ ನಂತರ ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಕರ್ನಾಟಕಕ್ಕೆ ರಾಜ್ಯ ಸಾರಿಗೆ ಬಸ್‌ಗಳನ್ನು ಸ್ಥಗಿತಗೊಳಿಸಿದ್ದಾರೆ. ಬೆಂಗಳೂರಿನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಬಸ್ ಅನ್ನು ಗುರಿಯಾಗಿಸಿಕೊಂಡು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಚಾಲಕ ಭಾಸ್ಕರ್ ಜಾಧವ್ ಮೇಲೆ ಹಲ್ಲೆ ನಡೆಸಿದರು. ಈ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಪೊಲೀಸ್ ದೂರು ದಾಖಲಾಗಿದೆ. 

   ಚಿತ್ರದುರ್ಗದ ಮೂಲಕ ಹಾದುಹೋದ ಸ್ವಲ್ಪ ಸಮಯದ ನಂತರ ಎಂಎಸ್‌ಆರ್‌ಟಿಸಿ ಬಸ್ (MH-14 KQ 7714) ಮೇಲೆ ದಾಳಿ ಮಾಡಲಾಗಿದೆ ಎಂದು ಸಚಿವರು ವಿವರಿಸಿದರು. ಕರ್ನಾಟಕ ಸರ್ಕಾರ ಈ ವಿಷಯದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವವರೆಗೆ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಅವರು ಹೇಳಿದರು.

   ಈ ಮಧ್ಯೆ, ಅದೇ ದಿನ ಬೆಳಗಾವಿ ಬಳಿ ಕರ್ನಾಟಕ ರಾಜ್ಯ ಸಾರಿಗೆ ಕಂಡಕ್ಟರ್ ಮೇಲೆ ಮರಾಠಿಯಲ್ಲಿ ಪ್ರಯಾಣಿಕರೊಂದಿಗೆ ಮಾತನಾಡದ ಕಾರಣ ಹಲ್ಲೆ ನಡೆಸಲಾಗಿತ್ತು. ಈ ನಡುವೆ, ಪುಣೆಯಲ್ಲಿ ಶಿವಸೇನಾ (ಯುಬಿಟಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕರ್ನಾಟಕದ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ಬಸ್‌ಗಳಿಗೆ ಕಪ್ಪು ಬಸಿ ಬಳಿದರು.

   ಬೆಳಗಾವಿ ತಾಲ್ಲೂಕಿನ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಶುಕ್ರವಾರ ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ ನಿರ್ವಾಹಕ ಮತ್ತು ಚಾಲಕ ಮೇಲಿನ ಹಲ್ಲೆ ಪ್ರಕರಣದಿಂದಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಬಸ್‌ಗಳ ಸಂಚಾರ ವ್ಯತ್ಯಯವಾಗಿದೆ. ಶನಿವಾರ ಸಂಜೆ 7ರ ಬಳಿಕ ಎರಡೂ ಕಡೆಯ ಬಸ್‌ಗಳ ಸಂಚಾರ ಗಡಿಯವರೆಗೆ ಮಾತ್ರ ಸೀಮಿತಗೊಂಡಿದೆ.