ನೀರಿನ ದರ ಹೆಚ್ಚಳ ಸುಳಿವು ನೀಡಿದ ಬೆಂಗಳೂರು ಜಲಮಂಡಳಿ

ಬೆಂಗಳೂರು

   ತೀವ್ರ ನಷ್ಟ ಅನುಭವಿಸುತ್ತಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇದೀಗ ನೀರಿನ ದರ ಏರಿಕೆಗೆ ಚಿಂತನೆ ಮಾಡಿದೆ. ಈ ವಿಚಾರದಲ್ಲಿ ಬೆಂಬಲ ನೀಡುವಂತೆ ಬೆಂಗಳೂರು ನಗರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ 27 ಮಂದಿ ಶಾಸಕರಿಗೆ ಮನವಿ ಮಾಡಿದೆ. ಎಲ್ಲ ಶಾಸಕರಿಗೆ ಜಲಮಂಡಳಿಯ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಪತ್ರ ಬರೆದಿದ್ದಾರೆ. ಮುಂಬರುವ ವಿಧಾನಸಭೆ ಅಧಿವೇಶನಕ್ಕೆ ಮುಂಚಿತವಾಗಿ ಜಲ ಮಂಡಳಿಯ ಆರ್ಥಿಕ ಸಮಸ್ಯೆ ಹಾಗೂ ಸವಾಲುಗಳ ಬಗ್ಗೆ ಶಾಸಕರ ಗಮನ ಸೆಳೆಯುವುದು ಅವರ ಉದ್ದೇಶ ಎನ್ನಲಾಗಿದೆ.

    2014 ರ ನವೆಂಬರ್​​ನಲ್ಲಿ ಈ ಹಿಂದೆ ನೀರಿನ ದರ ಪರಿಷ್ಕರಣೆ ಮಾಡಲಾಗಿತ್ತು. ಅದೇ ಕೊನೆಯ ದರ ಪರಿಷ್ಕರಣೆ. ಹೀಗಾಗಿ ಡಿಸಿಎಂ ಹಾಗೂ ಬೆಂಗಳೂರು ಅಭಿವೃದ್ಧಿ ಖಾತೆ ಹೊಂದಿರುವ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಶೀಘ್ರದಲ್ಲೇ ನಡೆಯಲಿರುವ ಸಭೆಯಲ್ಲಿ ದರ ಏರಿಕೆ ಪ್ರಸ್ತಾಪ ಬೆಂಬಲಿಸಬೇಕು ಎಂದು ಶಾಸಕರಿಗೆ ಬರೆದ ಪತ್ರದಲ್ಲಿ ರಾಮ್ ಪ್ರಸಾತ್ ಮನೋಹರ್ ಮನವಿ ಮಾಡಿದ್ದಾರೆ. 

    ಎಷ್ಟು ಪ್ರಮಾಣದಲ್ಲಿ ದರ ಏರಿಕೆ ಮಾಡಬೇಕು, ಯಾವಾಗಿನಿಂದ ಜಾರಿಗೆ ತರಬೇಕು ಎಂಬ ವಿಚಾರಗಳ ಬಗ್ಗೆ ರಾಮ್ ಪ್ರಸಾತ್ ಮನೋಹರ್ ಶಾಸಕರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿಲ್ಲ. ಮುಂದಿನ ಸಭೆಯಲ್ಲಿ ಈ ಕುರಿತು ಚರ್ಚೆಯಾಗುವ ನಿರೀಕ್ಷೆ ಇದೆ. ಕಳೆದ ದಶಕದಲ್ಲಿ ವಿದ್ಯುತ್‌ ಸೇರಿದಂತೆ ಇತರ ಅಗತ್ಯ ಸೇವೆ, ಸೌಕರ್ಯಗಳಿಗಾಗಿ ಜಲಮಂಡಳಿ ಮಾಡುತ್ತಿರುವ ವೆಚ್ಚದ ಗಮನಾರ್ಹ ಹೆಚ್ಚಳದ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವೆಚ್ಚದಲ್ಲಿ ಶೇಕಡಾ 107.3 ರಷ್ಟು ಹೆಚ್ಚಾಗಿದೆ ಎಂದು ತಿಳಿಸಲಾಗಿದೆ. ನಿರ್ವಹಣೆ ವೆಚ್ಚ ಶೇ 122.5ರಷ್ಟು ಹೆಚ್ಚಿದ್ದರೆ, ವೇತನ ಮತ್ತು ಪಿಂಚಣಿ ಶೇ 61.3ರಷ್ಟು ಹೆಚ್ಚಿದೆ ಎಂದು ಉಲ್ಲೇಖಿಸಲಾಗಿದೆ. 

    ಜಲ ಮಂಡಳಿಯ ಮಾಸಿಕ ವೆಚ್ಚವು 170 ಕೋಟಿ ರೂಪಾಯಿಗಳಾಗಿದ್ದು, ನೀರಿನ ಬಿಲ್‌ಗಳಿಂದ ಬರುವ ಆದಾಯ ಕೇವಲ 129 ಕೋಟಿ ರೂಪಾಯಿ ಆಗಿದೆ. ಇದು ಜಲಮಂಡಳಿಗೆ 41 ಕೋಟಿ ರೂಪಾಯಿಗಳ ಕೊರತೆ ಉಂಟುಮಾಡಿದೆ. ಹೊಸ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು, ಒಳಚರಂಡಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮತ್ತು ಹೊಸ ನೀರಿನ ಸಂಪರ್ಕಗಳಿಗಾಗಿ ಉದ್ದೇಶಿಸಲಾದ ಹಣವನ್ನು ಬಳಸಿಕೊಂಡು ಈ ಕೊರತೆಯನ್ನು ತಾತ್ಕಾಲಿಕವಾಗಿ ಸರಿದೂಗಿಸಲಾಗುತ್ತದೆ. 

   ನೀರಿನ ದರ ಪರಿಷ್ಕರಣೆ ಮಾಡದಿದ್ದರೆ ಮುಂದಿನ ಐದು ವರ್ಷಗಳಲ್ಲಿ 4,860 ಕೋಟಿ ರೂ.ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಮನೋಹರ್ ತಿಳಿಸಿದ್ದಾರೆ.ಆದರೆ, ಎಷ್ಟು ಪ್ರಮಾಣದಲ್ಲಿ ದರ ಹೆಚ್ಚಳ ಮಾಡಬೇಕು ಎಂಬುದನ್ನು ಪತ್ರದಲ್ಲಿ ಅವರು ನಮೂದಿಸಿಲ್ಲ. ಮುಂದಿನ ದಿನಗಳಲ್ಲಿ ಈ ವಿಷಯದ ಕುರಿತು ಚರ್ಚೆಯಾಗುವ ನಿರೀಕ್ಷೆ ಇದೆ.

Recent Articles

spot_img

Related Stories

Share via
Copy link