ಶಾಸಕ ಬೈರತಿ ಬಸವರಾಜ್‌ಗೆ ತಾತ್ಕಾಲಿಕ ರಿಲೀಫ್‌……!

ಬೆಂಗಳೂರು

    ರೌಡಿಶೀಟರ್‌ ಬಿಕ್ಲು ಶಿವು ಹತ್ಯೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಶಾಸಕ ಬೈರತಿ ಬಸವರಾಜ್‌ಗೆ  ಬಿಗ್‌ ರಿಲೀಫ್‌ ಸಿಕ್ಕಿದೆ. ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲದ ಆದೇಶ ಪ್ರಶ್ನಿಸಿ ಬಿಜೆಪಿ ಶಾಸಕ ಹೈಕೋರ್ಟ್‌ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಜಿ. ಬಸವರಾಜ ಅವರಿದ್ದ ಏಕಸದಸ್ಯ ಪೀಠವು ಶುಕ್ರವಾರ ಅರ್ಜಿ ವಿಚಾರಣೆ ನಡೆಸಿ, ಶಾಸಕನಿಗೆ ಮಧ್ಯಂತರ ಜಾಮೀನು ನೀಡಿ, ಮುಂದಿನ ವಿಚಾರಣೆಯನ್ನು ಜ.6ಕ್ಕೆ ಮುಂದೂಡಿದೆ.

    ಹೈಕೋರ್ಟ್‌ ಕೋಕಾ ಕಾಯ್ದೆ ಅನ್ವಯಿಸಿರುವ ಆದೇಶವನ್ನು ಇತ್ತೀಚೆಗೆ ವಜಾಗೊಳಿಸಿ, ನಿರೀಕ್ಷಣಾ ಜಾಮೀನನ್ನು ನಿರಾಕರಿಸಿತ್ತು. ಹೀಗಾಗಿ, ಬೈರತಿ ಬಸವರಾಜ್‌ ವಿಚಾರಣಾಧೀನ ನ್ಯಾಯಾಲಯದಲ್ಲಿ ಮೊದಲಿಗೆ ನಿರೀಕ್ಷಣಾ ಜಾಮೀನು ಕೋರಿದ್ದರು. ಅಲ್ಲಿಯೂ ಜಾಮೀನು ಅರ್ಜಿ ವಜಾಗೊಂಡಿದ್ದರಿಂದ ಮತ್ತೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ, ಇದೀಗ ಹೈಕೋರ್ಟ್‌ನಲ್ಲಿ ಮಧ್ಯಂತರ ಜಾಮೀನು ಲಭಿಸಿದೆ.

   ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಅನ್ವಯಿಸಿದರೆ ಆರೋಪಿಗಳಿಗೆ ಜಾಮೀನು ನೀಡಲು ವಿಚಾರಣಾಧೀನ ನ್ಯಾಯಾಲಯಗಳಿಗೆ ಅವಕಾಶವಿಲ್ಲ. ಕೋಕಾ ಕಾಯ್ದೆ ಎಂದರೆ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ. ಇದನ್ನು 2000ರಲ್ಲಿ ಜಾರಿಗೊಳಿಸಲಾಗಿದ್ದು, ರಾಜ್ಯದಲ್ಲಿ ಸಂಘಟಿತ ಅಪರಾಧಗಳು, ಭಯೋತ್ಪಾದನೆ ಮತ್ತು ಭೂಗತ ಜಾಲಗಳನ್ನು ನಿಯಂತ್ರಿಸಲು ತರಲಾಗಿದೆ. ಈ ಕಾಯ್ದೆಯಡಿ ಜಾಮೀನು ಪಡೆಯುವುದು ಕಷ್ಟ ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬಹುದು. ಆದರೆ, ಪ್ರಕರಣದಲ್ಲಿ ಶಾಸಕನ ವಿರುದ್ಧ ಅನ್ವಯಿಸಿದ್ದ ಕೋಕಾ ಕಾಯ್ದೆ ಆದೇಶವನ್ನು ಹೈಕೋರ್ಟ್‌ ವಜಾಗೊಳಿಸಿತ್ತು.

   ವಿಚಾರಣಾಧೀನ ನ್ಯಾಯಾಲಯದಲ್ಲಿ ಬೈರತಿ ಬಸವರಾಜ್‌ ನಿರೀಕ್ಷಣಾ ಜಾಮೀನಿಗೆ ಪ್ರಾಸಿಕ್ಯೂಷನ್‌ ಆಕ್ಷೇಪಿಸಿತ್ತು. 18 ಆರೋಪಿಗಳ ವಿರುದ್ಧ 4,236 ಪುಟಗಳ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಬೈರತಿ ಮತ್ತು 20ನೇ ಆರೋಪಿಯ ವಿರುದ್ಧ ತನಿಖೆ ಬಾಕಿ ಇದೆ ಎಂದು ತಿಳಿಸಿತ್ತು. 

   ಬೆಂಗಳೂರಿನ ಹಲಸೂರು ಕೆರೆಯ ಸಮೀಪ 2025ರ ಜುಲೈನಲ್ಲಿ ರೌಡಿಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಪ್ರಕಾಶ್ ಕೊಲೆ ಆರೋಪದ ಮೇಲೆ ಜಗದೀಶ್, ಕಿರಣ್, ವಿಮಲ್, ಅನಿಲ್ ಮತ್ತು ಬೈರತಿ ಬಸವರಾಜ್ ವಿರುದ್ಧ ಭಾರತೀನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಜಮೀನು ವಿವಾದಕ್ಕೆ ಸಂಬಂಧಿಸಿ ಕೊಲೆ ನಡೆದಿದೆ ಎಂದು ಆರೋಪಿಸಿ ಶಿವಪ್ರಕಾಶ್ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Recent Articles

spot_img

Related Stories

Share via
Copy link