ಕೇಸ್‌ ವಾಪಸ್ಸಾತಿ : ಸರ್ಕಾರ ಕಾನೂನಿಗೆ ವಿರುದ್ಧವಾಗಿದೆ : ಬಿವೈವಿ

ಬೆಂಗಳೂರು:

     ಉಪಮುಖ್ಯಮಂತ್ರಿ ಡಿ.ಕೆ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ಪಡೆಯುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಅಕ್ರಮ ಮತ್ತು ಕಾನೂನಿಗೆ ವಿರುದ್ಧವಾಗಿದೆ ಎಂದು ವಿರೋಧ ಪಕ್ಷ ಬಿಜೆಪಿ ಟೀಕಿಸಿದೆ.

    ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಡಿ.ಕೆ.ಶಿವಕುಮಾರ್ ಅವರಿಗೆ ಚಿನ್ನದಂತಹ ಅವಕಾಶವಿದೆ. ತಾವು ಸತ್ಯಹರಿಶ್ಚಂದ್ರ ಅಂತ ಸಾಬೀತು ಮಾಡುವ ಅವಕಾಶ ಇದೆ. ನೀವು ತಪ್ಪು ಮಾಡಿಲ್ಲ ಅನ್ನೋದನ್ನು ತನಿಖೆ ಎದುರಿಸಿ ತೋರಿಸಿ. ನಮ್ಮ ಅವಧಿಯಲ್ಲಿ ತೆಗೆದುಕೊಂಡ ನಿರ್ಧಾರ ರಾಜಕೀಯ ಪ್ರೇರಿತವಲ್ಲ. ಪ್ರಾಥಮಿಕ ತನಿಖೆ ಮಾಹಿತಿ ಆಧರಿಸಿ ಸಿಬಿಐ ತನಿಖೆಗೆ ಕೊಡಲಾಗಿತ್ತು ಎಂದು ಹೇಳಿದರು.

    ಸಿಬಿಐ ತನಿಖೆ ವಾಪಸ್ ಪಡೆಯುವ ಸರ್ಕಾರದ ನಿರ್ಧಾರ ಖಂಡಿಸಿ ರಾಜ್ಯ ಬಿಜೆಪಿ ನಾಳೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿದೆ. ಸಚಿವ ಸಂಪುಟ ನಿರ್ಧಾರವನ್ನು ಬಿಜೆಪಿ ಬಲವಾಗಿ ವಿರೋಧಿಸುತ್ತದೆ. ಯಾವ ರೀತಿ ಹೋರಾಟ ಮಾಡಬೇಕೆಂದು ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು. 

    ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಕೀಲರಾಗಿ, ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಸಚಿವ ಸಂಪುಟದ ನಿರ್ಧಾರ ಸರಿಯಿಲ್ಲ, ಈ ಬಗ್ಗೆ ಸುಪ್ರೀಂ ಕೋರ್ಟ್‌, ಎರಡು ಬಾರಿ ಹೈಕೋರ್ಟ್‌ ತೀರ್ಪನ್ನು ಉಲ್ಲೇಖಿಸಿದ ನಿದರ್ಶನಗಳಿವೆ. ಪ್ರಕರಣ ನ್ಯಾಯಾಲಯದಲ್ಲಿರುವಾಗ, ಸರ್ಕಾರ ಸಚಿವ ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನ ತಪ್ಪಾಗುತ್ತದೆ. ಸರ್ಕಾರ ಕಾನೂನಿಗಿಂತ ಮೇಲಿದ್ದಾರೆಂದು ಪ್ರದರ್ಶಿಸಲಾಗುತ್ತದೆ. ಅಂದರೆ ಲೂಟಿ ಮಾಡುವವರಿಗೆ ಸರ್ಕಾರವೇ ಅವಕಾಶ ಕೊಟ್ಟಂತೆ ಇದು ಸಾಬೀತುಪಡಿಸುತ್ತದೆ ಎಂದು ಟೀಕಿಸಿದ್ದಾರೆ. 

    ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಡಿ.ಕೆ. ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ತನಿಖೆಗೆ ಹಿಂದಿನ ಬಿಜೆಪಿ ಸರ್ಕಾರ ಸಿಬಿಐಗೆ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆಯಲು ರಾಜ್ಯ ಸಚಿವ ಸಂಪುಟ ನಿನ್ನೆ ತೀರ್ಮಾನಿಸಿತು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap