ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ: ಸಿಎಂ

ಶಿವಮೊಗ್ಗ: 

    ಬಡವರು ಹಾಗೂ ಮಧ್ಯಮ ವರ್ಗದವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಿ ಮುಖ್ಯವಾಹಿನಿಗೆ ತರಬೇಕು ಎಂಬ ಉದ್ದೇಶದಿಂದ ನಮ್ಮ ಸರ್ಕಾರ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.

    ಇಂದು ಶಿವಮೊಗ್ಗದ ಫ್ರೀಡಂ ಪಾರ್ಕ್​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆರು ನಿರುದ್ಯೋಗಿ ಯುವಕರಿಗೆ ಚೆಕ್‌ಗಳನ್ನು ವಿತರಿಸುವ ಮೂಲಕ ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿ ಯೋಜನೆ ಯುವ ನಿಧಿಗೆ ಚಾಲನೆ ನೀಡಿದರು. ಇದರೊಂದಿಗೆ ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ಎಲ್ಲಾ ಐದೂ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದಂತಾಗಿದೆ.

    ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಚುನಾವಣೆಗಾಗಿ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿಲ್ಲ. ನಿರುದ್ಯೋಗಿ ಯುವಕರಿಗೆ ನೆರವಾಗಬೇಕೆಂಬ ಉದ್ದೇಶದಿಂದಷ್ಟೇ ಈ ಯೋಜನೆ ಜಾರಿಗೊಳಿಸಲಾಗಿದೆ. ದೇಶದಲ್ಲಿ ದಿನಬಳಕೆ, ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗಿದೆ. ಜನಸಮಾನ್ಯರಿಗೆ ಖರೀದಿಸುವ ಸಾಮರ್ಥ್ಯವಿಲ್ಲ ಎಂದು ಹೇಳಿದರು.

    1.18 ಕೋಟಿ ಮಹಿಳಾ ಯಜಮಾನಿಗೆ ತಿಂಗಳಿಗೆ ರೂ.2,000 ನೀಡುತ್ತಿರುವುದು ಸತ್ಯವಲ್ಲವೇ? ಇದುವರೆಗೆ ಯಾವುದೇ ಜಾತಿ, ಧರ್ಮ, ಭಾಷೆಯ ಬೇಧವಿಲ್ಲದೇ ಮಹಿಳೆಯರು ಶಕ್ತಿ ಯೋಜನೆಯಡಿ 130 ಕೋಟಿ ಉಚಿತ ಟಿಕೇಟ್ ಪಡೆದು ಪ್ರಯಾಣಿಸಿರುವುದು ಸುಳ್ಳಾಗಲು ಸಾಧ್ಯವೇ? 200 ಯೂನಿಟ್ ವರೆಗೆ ಉಚಿತ ವಿದ್ಯುತ್ 1.51 ಕೋಟಿ ಜನರಿಗೆ ನೀಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ  170 ರೂ. ಫಲಾನುಭವಿಗಳಿಗೆ ತಲುಪುತ್ತಿದೆ. ಈ ಎಲ್ಲ ಸತ್ಯಗಳನ್ನು ಯಾರು ಬೇಕಾದರೂ ಪರಿಶೀಲನೆ ನಡೆಸಲಿ ಎಂದು ಸಿಎಂ ಸವಾಲು ಹಾಕಿದರು.

    ಗ್ಯಾರಂಟಿ ಯೋಜನೆಗಳಿಂದ ಒಂದು ಕುಟುಂಬಕ್ಕೆ ಮಾಸಿಕ 4 ರಿಂದ 5 ಸಾವಿರ ರೂ.ಗಳು ಸೇರುತ್ತಿದ್ದು, ವರ್ಷಕ್ಕೆ 48 ರಿಂದ 50 ಸಾವಿ ರೂ. ನೀಡಲಾಗುತ್ತಿದೆ. ಇದು ಬಡಜನರಿಗೆ ಸೌಲಭ್ಯ ನೀಡುತ್ತದೆ. ಬೆಲೆಯೇರಿಕೆ, ನಿರುದ್ಯೋಗ ಹೆಚ್ಚಾಗಿದ್ದು, ಬಡವರಿಗೆ ಕೊಂಡುಕೊಳ್ಳುವ ಶಕ್ತಿಯನ್ನು ಈ ಯೋಜನೆಗಳು ಹೆಚ್ಚಿಸುತ್ತಿವೆ ಎಂದರು.
 
    ಇಂದು ನಮ್ಮ ಸರ್ಕಾರ ಐದನೇ ಗ್ಯಾರಂಟಿಯಾದ ಯುವನಿಧಿಯನ್ನು ಜಾರಿಗೊಳಿಸಿದೆ. ಪದವಿ ಪಡೆದ ನಿರುದ್ಯೋಗಿಗಳಿಗೆ 3000 ರೂ. ಹಾಗೂ ಡಿಪ್ಲೋಮಾ ಮಾಡಿದ ನಿರುದ್ಯೋಗಿಗಳಿಗೆ 1,500 ರೂ. ಭತ್ಯೆಯನ್ನು 2 ವರ್ಷಗಳ ಕಾಲ ನೀಡುವ ಯೋಜನೆ ಇದಾಗಿದೆ. ಈ ಅವಧಿಯಲ್ಲಿ ಭತ್ಯೆಯ ಜೊತೆಗೆ ಉದ್ಯೋಗ ಲಭಿಸಲು ಬೇಕಾದಂತಹ ಕೌಶಲ್ಯವನ್ನು ಅಭಿವೃದ್ಧಿಗೊಳಿಸಲು ಕೌಶಲ್ಯ ತರಬೇತಿಯನ್ನು ನೀಡಲಾಗುವುದು ಎಂದು ಸಿಎಂ ತಿಳಿಸಿದರು.

    ಚಿತ್ರದುರ್ಗ, ಹಾವೇರಿ, ಚಿಕ್ಕಮಗಳೂರು, ದಾವಣಗೆರೆ, ಉತ್ತರ ಕನ್ನಡ ಸೇರಿದಂತೆ ಬೇರೆ ಬೆರೆ ಜಿಲ್ಲೆಗಳಿಂದ ಆಗಮಿಸಿದ ಲಕ್ಷಾಂತರ ಜನ ಯುವ ನಿಧಿ ಯೋಜನೆಗೆ ಚಾಲನೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap